ಮೂರನೇ ಅಲೆ ಬಿತಿ : ಗಣಪತಿ ಮೂರ್ತಿಗಿಲ್ಲ ಬೇಡಿಕೆ!
ವಿಘ್ನೇಶ್ವರನ ತಯಾರಿಕರಿಗೆ ಕೊರೊನಾ ವಿಘ್ನ
ಸಿಂದಗಿ24: ಕೋವಿಡ್ನಿಂದಾಗಿ ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಲಾಗುತ್ತಿದೆ. ಹೆಚ್ಚು ಜನ ಒಂದೆಡೆ ಸೇರಿ ಹಬ್ಬಗಳನ್ನು ಆಚರಿಸುವುದಕ್ಕೂ ನಿಬಂಧನೆಗಳಿವೆ. ಈ ಪರಿಸ್ಥಿತಿ ವರ್ಷವೂ ಕೂಡ ಗಣೇಶನ ಪ್ರತಿಷ್ಠಾನೆಗೆ ಅವಕಾಶ ನೀಡಲಾಗುತ್ತದೆಯೋ ಇಲ್ಲವೋ ಎಂಬ ಗೊಂದಲವಿದೆ. ಇದರಿಂದಾಗಿ, ದೊಡ್ಡ ಗಾತ್ರದ ಗಣೇಶ ಮೂರ್ತಿ ತಯಾರಿಕೆಗೆ ಇದುವರೆಗೆ ಯಾರೂ ಆರ್ಡರ್ ಬಾರದೆ ಮನೆಗಳಲ್ಲಿ ಇಡುವ ಗಣಪತಿ ತಯಾರಿಕೆ ಮಾತ್ರ ಮುಂದುವರೆದಿದೆ.
ಗಣಪತಿಯ ಹಬ್ಬಕ್ಕೆ ತಿಂಗಳಿದ್ದರೂ ಈಗಾಗಲೇ ಮೂರನೇ ಅಲೆಯ ಆಂತಕ ಎದುರಾಗಿದೆ. ಸಾಮೂಹಿಕ ಆಚರಣೆಗೆ ಅವಕಾಶ ನೀಡುವುದೇ ಕಷ್ಟ. ಹೀಗಾಗಿ, ಮೂರ್ತಿಗಳಿಗೆ ಬೇಡಿಕೆಯೇ ಬಾರದಿದ್ದರೆ ನಷ್ಟ ಆಗಬಹುದೆಂಬ ಕಾರಣಕ್ಕೆ ತಯಾರಕರು ದೊಡ್ಡ ಗಾತ್ರದ ಮೂರ್ತಿಗಳ ತಯಾರಿಕೆಯನ್ನೇ ಆರಂಭಿಸಿಲ್ಲ. ಜತೆಗೆ, ಸರಕಾರದಿಂದ ಹಬ್ಬಗಳ ಆಚರಣೆಯ ಬಗ್ಗೆ ಸೂಚನೆಗಳು ಬಾರದಿರುವುದರಿಂದ ಹಬ್ಬ ಆಚರಣೆಯ ಬಗ್ಗೆಯೇ ಸಾಕಷ್ಟು ಪ್ರಶ್ನೆಗಳಿವೆ. ಇವೆಲ್ಲವುಗಳ ಮಧ್ಯೆ ಈ ವೃತ್ತಿಯನ್ನೇ ನಂಬಿಕೊಂಡಿರುವ ಅದೆಷ್ಟೋ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.
ಪ್ರತಿವರ್ಷ ಹಬ್ಬಕ್ಕೆ 2-3 ತಿಂಗಳು ಇರುವಾಗಲೇ ಗಣಪತಿ ಮೂರ್ತಿ ಮಾರಾಟಗಾರರು ಮುಂಗಡವಾಗಿ ಬೇಡಿಕೆ ಇಡುತ್ತಿದ್ದರು. ಗಣಪತಿ ಮೂರ್ತಿ ತಯಾರಕರಿಗೆ ಕೈಗೆ ಬಿಡುವೇ ಇರುತ್ತಿರಲಿಲ್ಲ. ಆದರೆ, ಈ ವರ್ಷ ಕೊರೊನಾದಿಂದಾಗಿ ಮೂರ್ತಿ ತಯಾರಕರ ಮನೆಯಲ್ಲಿ ಇಂತಹ ದೃಶ್ಯವೇ ಕಾಣಸಿಗುತ್ತಿಲ್ಲ. ಮನೆಯಲ್ಲಿ ಪ್ರತಿಷ್ಠಾಪಿಸುವ ಅರ್ಧ, ಮುಕ್ಕಾಲು ಅಡಿ ಎತ್ತರದ ಮೂರ್ತಿಗಳ ತಯಾರಿಕೆಗೆ ಮಾತ್ರ ಕೋರಿಕೆ ಪಡೆದು ಕೆಲಸ ಮಾಡಲಾಗುತ್ತಿದೆ.
ಕೊರೊನಾ ಮುನ್ನ ಪ್ರತಿ ಗಣಪತಿ ತಯಾರಿಕರ ಕುಟುಂಬಗಳು ವಾರ್ಷಿಕವಾಗಿ 2-4 ಲಕ್ಷ ಆದಾಯಗಳಿಸುತ್ತಿದ್ದರು. 20-50 ಬೃಹತ್ ಗಾತ್ರದ ಗಣಪತಿಗಳಿಗೆ ಬೇಡಿಕೆ ಬರುತ್ತಿತ್ತು. ಆದರೆ ಕಳೆದ ವರ್ಷ ಕೋವಿಡ್ ಸಮಯದಲ್ಲಾದ ನಷ್ಟ ಸುಧಾರಿಸಿಕೊಳ್ಳುವಷ್ಟರಲ್ಲಿ ಈ ಬಾರಿಯ ಗಣೇಶನ ಹಬ್ಬ ಕೊರೊನಾ ಎರಡನೇ ಅಲೆ ಹಾಗೂ 3ನೇ ಅಲೆಯ ಬೀತಿಯಿಂದ ಮಂಕಾಗಿದ್ದು, ಗಣಪತಿ ಮೂರ್ತಿಗಳು ಮತ್ತಷ್ಟು ಬೇಡಿಕೆ ಕಳೆದುಕೊಳ್ಳುವ ಆಂತಕವಿದೆ.
ಈ ಬಾರಿ ಗಣೇಶನ ಮೂರ್ತಿ ತಯಾರಕರು ಬೃಹತ್ ಪ್ರಮಾಣದಲ್ಲಿ ಗಣೇಶ ಮೂರ್ತಿ ತಯಾರಿಕೆಗೆ ಮುಂದಾಗಿಲ್ಲ. ಶೇ.10ರಷ್ಟು ಮಾತ್ರ ಮೂರ್ತಿ ತಯಾರಿಸಿ ಇಟ್ಟುಕೊಂಡಿದ್ದಾರೆ. ಬಹುತೇಕರು ಮನೆಯಲ್ಲಿ ಕೂರಿಸುವ ಸಂಪ್ರದಾಯ ಇಟ್ಟುಕೊಂಡಿರುವುದರಿಂದ 2 ಅಡಿಗಿಂತ ಹೆಚ್ಚು ಎತ್ತರ ಗಣೇಶ ಮೂರ್ತಿ ಮಾಡುತ್ತಿಲ್ಲ. ಜತೆಗೆ ಮಣ್ಣಿನ ಗಣಪತಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಆಡಂಬರದ ಗಣಪತಿ ತಯಾರಿಸಿ ಬೇಡಿಕೆ ಬಾರದಿದ್ದರೆ ನಷ್ಟ ಹೆಚ್ಚು. ಮನೆ ಬಳಕೆಗೆ ಆಗುವಷ್ಟು ಮಾತ್ರ ಮೂರ್ತಿ ತಯಾರಿಸಲಾಗುತ್ತದೆ. ಆದರೆ ಅದಕ್ಕೂ ಇದುವರೆಗೂ ಆರ್ಡರ್ ಬಂದಿಲ್ಲ. ಮುಂದಿನ ದಿನದಲ್ಲಿ ಏನಾಗುತ್ತದೋ ಎಂಬ ಆತಂಕವಿದೆ ಎಂದು ಆಲಮೇಲ ಪಟ್ಟಣದ ಗಣೇಶ ಮೂರ್ತಿ ತಯಾರಕ ಸಂಗಯ್ಯ ಮುಳಮಠ ಅವರ ಅಳಲಾಗಿದೆ.
ಕಳೆದ ವರ್ಷ ಎಂದಿನಂತೆ ಮೂರ್ತಿಗಳನ್ನು ಮಾರಾಟಕ್ಕೆ ತರೆಸಿಕೊಂಡಿದ್ದೇವು. ಆದರೆ ಉತ್ಸವ ರದ್ದುಪಡಿಸಲಾಗಿತ್ತು. ನಂತರ ಕೊನೆ ಗಳಿಗೆಯಲ್ಲಿ ಸರಕಾರ ಉತ್ಸವ ನಡೆಸಲು ಅನುಮತಿ ನೀಡಿತು. ಆದರೆ ಕಡಿಮೆ ಸಮಯವಿದ್ದುದರಿಂದ ಹೆಚ್ಚು ಮೂರ್ತಿಗಳು ಮಾರಾಟವಾಗಿಲ್ಲ. ಇದೀಗ ಉತ್ಸವವನ್ನು ರದ್ದುಪಡಿಸಿದರೆ, ಸಾಲ ಮಾಡಿ ಬಂಡವಾಳ ಹಾಕಿರುವವರು ಏನು ಮಾಡಬೇಕು? ಸರಕಾರ ನಮಗೆ ನಷ್ಟವನ್ನು ಭರಿಸಿ ಕೊಡಲಿ, ಇಲ್ಲವೇ ಮೂರ್ತಿಗಳ ಮಾರಾಟಕ್ಕೆ ಅನುಮತಿ ನೀಡಲಿ. ಕೋವಿಡ್ ನಿಯಮಗಳ ಪ್ರಕಾರ ಎಲ್ಲವನ್ನೂ ನಡೆಸಲಿ.
-ಚಂದ್ರಶೇಖರ ಕುಂಬಾರ,
ಗಣಪತಿ ಮೂರ್ತಿ ಮಾರಾಟಗಾರರು. ಸಿಂದಗಿ
ಗಣೇಶ ಚತುರ್ಥಿ ಸಮಿಪಿಸಿದ್ದು ಸಾರ್ವಜನಿಕ ಗಣೇಶ ಮೂರ್ತಿ ಇಡಲು ಅವಕಾಶ ಕೊಡದ ಹಿನ್ನಲೆಯಲ್ಲಿ ಸಾರ್ವಜನಿಕರಲ್ಲಿ ನಿರಾಶೆ ಮುಡಿದೆ. ಗಣೇಶ ಹಬ್ಬ ಒಂದು ರಾಷ್ಟ್ರೀಯ ಮತ್ತು ಹಿಂದು ಹಬ್ಬವಾಗಿದೆ. ಸಾರ್ವಜನಿಕವಾಗಿ ಗಣೇಶ್ ಮೂರ್ತಿ ಇಡಬಾರದು ಎನ್ನುವುದರಿಂದ ನಿರಂತರವಾಗಿ ಗಣೇಶ ಮೂರ್ತಿ ಇಟ್ಟು ಹಬ್ಬ ಆಚರಿಸಿಕೊಂಡು ಬಂದವರಿಗೆ ಸಂಪ್ರದಾಯಕ್ಕೆ ಕಡಿವಾಣ ಬಿದ್ದಂತಾಗುತ್ತದೆ. ಅದರ ಬದಲು ಸರಳವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸರಕಾರ ಅವಕಾಶ ಕೊಡಬೇಕು.
-ಡಾ.ಶರಣಗೌಡ ಬಿರಾದಾರ,
ತಾಲೂಕಾ ಅಧ್ಯಕ್ಷರು, ವಿಎಚ್ಪಿ ಸಿಂದಗಿ ತಾಲೂಕು.
ಕಳೆದ ವರ್ಷ ಸಾರ್ವಜನಿಕವಾಗಿ ಗಣೇಶನ ಪ್ರತಿಷ್ಠಾಪನೆಗೆ ಅವಕಾಶವಿಲ್ಲ ಎಂದು ಹೇಳಿ ನಂತರ ಕೊನೆ ಗಳಿಗೆಯಲ್ಲಿ ಸರಕಾರ ಉತ್ಸವ ನಡೆಸಲು ಅನುಮತಿ ನೀಡಿತು. ಇದರಿಂದ ಗಣಪತಿ ತಯಾರಕರು ಹಾಗೂ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಟೆಂಟ್ ಮತ್ತು ಲೈಟ್ ಡೆಕೊರೇಶನ್ ಮಾಡುವವರಿಗೆ ನಷ್ಟ ಉಂಟಾಗಿತ್ತು. ಜೀವನ ನಡೆಸುವುದು ಕಷ್ಟವಾಗಿದೆ. ಗಣೇಶ ಚತುರ್ಥಿ ಸಮಿಪಿಸಿದ್ದು ಈ ವರ್ಷವಾದರು ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಬೇಕು. ಟೆಂಟ್ ಮತ್ತು ಲೈಟ್ ಡೆಕೊರೇಶನ್ ಮಾಡುವರ ಕುಟುಂಭಕ್ಕೆ ಜೀವ ನೀಡಬೇಕು.
-ಸುರೇಶ ಹವಳಗಿ, ಕಾರ್ಯದರ್ಶಿ,
ತಾಲೂಕಾ ಮಂಟಪ ಮಾಲಿಕರ ಸಂಘ. ಸಿಂದಗಿ.