ಜಾಗತಿಕವಾಗಿ ಆಲೋಚಿಸಿ: ಡಾ. ಶಿವಾನಂದ ಗೊರನಾಳೆ
ಲೋಕದರ್ಶನ ವರದಿ
ಗೋಕಾಕ 01: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನವೇ ನಿಜವಾದ ಶಕ್ತಿಯಾಗಿದ್ದು, ಅದನ್ನು ಗಳಿಸಲು ಪ್ರಯತ್ನಿಸಿ, ಸಂವಹನ ಕೌಶಲ್ಯ ಬೆಳೆಸಿಕೊಳ್ಳದಿದ್ದರೆ ನಿಮಗೆ ಯಾವ ಅವಕಾಶಗಳು ಸಿಗುವದಿಲ್ಲ. ಜಾಗತಿಕ ಸವಾಲುಗಳನ್ನು ಎದುರಿಸಲು ಜಾಗತಿಕವಾಗಿ ಆಲೋಚಿಸಿ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ. ಶಿವಾನಂದ ಗೊರನಾಳೆ ಕರೆ ನೀಡಿದರು.
ಅಗಸ್ಟ್ 29ರಂದು ಜರುಗಿದ ಸ್ಥಳೀಯ ಗೋಕಾಕ ಶಿಕ್ಷಣ ಸಂಸ್ಥೆಯ ಜೆ. ಎಸ್. ಎಸ್. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ 2021-22ನೆಯ ಸಾಲಿನ ವಿವಿಧ ಸಂಘಗಳ ಚಟುವಟಿಕೆಗಳ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಇಂದಿನ ಯುವಕರು ಕೇವಲ ಮೊಬೈಲ್ನಲ್ಲಿ ಮುಳುಗಿ ಜೀವನವನ್ನು ವ್ಯರ್ಥ ಮಾಡಿಕೊಳ್ಳುವುದರ ಬದಲು ಕೈಬೆರಳಿನಲ್ಲಿಯೇ ದೊರಕುವ ಮಾಹಿತಿಯನ್ನು ಬಳಸಿಕೊಂಡು ಸಮರ್ಥ ಪ್ರಜೆಗಳಾಗಬೇಕೆಂದು ಸಲಹೆ ನೀಡಿದರು.
ಗೌರವಾನ್ವಿತ ಅತಿಥಿಗಳಾಗಿದ್ದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ, ಬೆಳಗಾವಿಯ ಪ್ರಾಚಾರ್ಯರಾಗಿರುವ ಡಾ. ಎಸ್. ಎಸ್. ತೇರದಾಳ ಅವರು ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾಗಿದ್ದು, ಅದನ್ನು ದುರಭ್ಯಾಸಗಳಲ್ಲಿ ಮುಳಗಿ ಹಾಳು ಮಾಡಿಕೊಳ್ಳದೇ ಗುರುಹಿರಿಯರ ಮತ್ತು ತಂದೆ ತಾಯಿರ ಮಾರ್ಗದರ್ಶನದಲ್ಲಿ ನಡೆದು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಿ ಎಂದರು.
ಇನ್ನೋರ್ವ ಗೌರವಾನ್ವಿತ ಅತಿಥಿಯಾಗಿದ್ದ ಗೋಕಾಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕ ಎಂ. ಡಿ. ಚುನಮರಿಯವರು ಮಾತನಾಡಿ, ಭಾರತ ಇಡೀ ವಿಶ್ವದಲ್ಲಿಯೇ ವಿಶಿಷ್ಟ ರಾಷ್ಟ್ರವಾಗಿದ್ದು ಅದರ ಹೆಮ್ಮೆಯ ಸುಪುತ್ರರಾಗಿ ಬೆಳಗಿರಿ ಎಂದರು. ಮನುಷ್ಯನಿಗೆ ಸಂಸ್ಕೃತಿ-ಸಂಸ್ಕಾರ ಮುಖ್ಯ. ಉತ್ತಮ ಸಂಸ್ಕಾರ ಪಡೆದು ಸುಖಿ ಜೀವನ ನಡೆಸಿರಿ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಆಡಳಿತ ಮಂಡಳಿಯ ಚೇರಮನ್ ವ್ಹಿ. ಎ. ಕಡಕೋಳವರು ಮಾತನಾಡಿ ನಮ್ಮ ಮಹಾವಿದ್ಯಾಲಯದ ಎಲ್ಲ ಅನುಭವಿಕ ಪ್ರಾಧ್ಯಾಪಕರ ಮಾರ್ಗದರ್ಶನ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಂಡು ನಮ್ಮ ಮಹಾವಿದ್ಯಾಲಯಕ್ಕೂ ಹಾಗೂ ನಿಮ್ಮ ಕುಟುಂಬಕ್ಕೂ ಕೀರ್ತಿ ತರುವಂತವರಾಗಿ ಎಂದರು. ಮಹಾವಿದ್ಯಾಲಯದಲ್ಲಿರುವ ಸುಸಜ್ಜಿತ ಗ್ರಂಥಾಲಯದ ಪ್ರಯೋಜನ ಪಡೆದು ಜ್ಞಾನವಂತರಾಗಿರಿ ಎಂದರು. ಗೋ.ಶಿ.ಸಂಸ್ಥೆಯ ಕಾರ್ಯದರ್ಶಿ ಆರ್. ಎಮ್. ವಾಲಿ, ಪ್ರಾಚಾರ್ಯ ಡಾ. ಆಶಾಲತಾ ಎಸ್. ತೇರದಾಳ, ಉಪ-ಪ್ರಾಚಾರ್ಯ ಡಾ. ಆರ್. ಎಸ್. ಬಳಿಗಾರ, ಜಿಮಖಾನಾ ಉಪಾಧ್ಯಕ್ಷ ಆರ್. ಎಮ್. ಮಹೀಂದ್ರಕರ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಎ. ಕೆ. ಕಿಳ್ಳಿಕೇತ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಪ್ರಾಚಾರ್ಯರಾದ ಡಾ. ಆಶಾಲತಾ ಎಸ್. ತೇರದಾಳ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಮಖಾನಾ ವಿಭಾಗದ ಉಪಾಧ್ಯಕ್ಷ ಪ್ರೊ. ಆರ್. ಎಮ್. ಮಹೇಂದ್ರಕರ ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಸ್. ಬಿ. ಹೊಸಮನಿಯವರು ವರದಿ ವಾಚನ ಮಾಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಿ. ಎಮ್. ತುರಡಗಿಯವರು ಮೋಜಿನ ವೇಷದ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಎ. ಕೆ. ಕಿಳ್ಳಿಕೇತ ಅವರು ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಡಾ. ಪಿ. ಪಿ. ಕಟ್ಟಿಮನಿ ವಂದಿಸಿದರು. ಡಾ. ಕೃಷ್ಣಮೂರ್ತಿ ಎಮ್. ಬಿ., ಶಿಲ್ಪಾ ಟಿ, ತೇಜಲ ಬಿದರಿ, ರೇಣು ಝಂವರ ನಿರೂಪಿಸಿದರು.