ಜನಮನ ಸೆಳೆದ ಮಾತೇ ಜ್ಯೋತಿರ್ಲಿಂಗಪ್ಪಾಜಿ ನಾಟಕ
ಲೋಕದರ್ಶನ ವರದಿ
ಹೂವಿನ ಹಡಗಲಿ 21 : ವರ್ತಮಾನದ ತಲ್ಲಣಗಳಿಗೆ ದುಃಖ ದುಮ್ಮಾನಗಳಿಗೆ ರಂಗಭೂಮಿ ಸದಾ ಸ್ಪಂದಿಸುವ ಗುಣ ಹೊಂದಿದೆ ಎಂದು ಕನ್ನಡ ಪ್ರಾಧ್ಯಾಪಕ ಡಾ. ಎಚ್ ವೆಂಕಟೇಶ್ ಅಭಿಮತ ವ್ಯಕ್ತಪಡಿಸಿದರು. ಪಟ್ಟಣದ ರುದ್ರಾಂಬ ಎಂ.ಪಿ ಪ್ರಕಾಶ್ ಸರ್ಕಾರಿ ಪದವಿ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಕೊಟ್ಟೂರಿನ ಕೊಟ್ಟೂರೇಶ್ವರ ಕಲಾ ತಂಡ ಅಭಿನಯಿಸಿದ ಮಾತೇ ಜ್ಯೋತಿರ್ಲಿಂಗಪ್ಪಾಜಿ ನಾಟಕ ಪ್ರದರ್ಶನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನರ ನೋವು ಸಕಾಲಿಕ ಸಮಾಜದ ಸಮಸ್ಯೆಗಳನ್ನು ರಂಗಭೂಮಿ ಕಲಾವಿದರು ನಾಟಕದ ಮೂಲಕ ಅನಾವರಣ ಮಾಡುತ್ತಾ ಬಂದಿದ್ದಾರೆ ಎಂದು ತಿಳಿಸಿದರು.ಕನ್ನಡ ಉಪನ್ಯಾಸಕ ಡಾ. ಸತೀಶ್ ಪಾಟೀಲ್ ಮಾತನಾಡಿ ಬಸವಣ್ಣನವರ ವಚನದಂತೆ ಮಾತನಾಡುವಾಗ ಪರರ ನೋಯಿಸದಂತೆ ಮಾತು ಇರಬೇಕು ಎಂದು ಯುವಕರಿಗೆ ಕಿವಿಮಾತು ಹೇಳಿದರು.ಕಲಾತಂಡದ ಅಧ್ಯಕ್ಷರಾದ ಎಂ. ಶಿವನಗುತ್ತಿ ಮಾತನಾಡಿ ಯುವಕರು ಓದಿನ ಜೊತೆಗೆ ರಂಗಭೂಮಿ ಅಭಿನಯ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಕೊಟ್ಟೂರಿನ ಖ್ಯಾತ ಕಥೆಗಾರ ಕುಂ ವೀರಭದ್ರ್ಪ ರವರ ಕಥೆ ಆಧಾರಿತ ನಾಟಕವು ಪ್ರದರ್ಶನವಾಯಿತು. ಎನ್. ವಿ ಶ್ರೀಕಾಂತ್ ನಿರ್ದೇಶನದಲ್ಲಿ ಎಲ್ಲಾ ಕಲಾವಿದರು ಮನೋಜ್ಞವಾಗಿ ಅಭಿನಯಿಸಿ ಜನಮನ ಸೆಳೆದರು. ದೇವರಮನಿ ಸುರೇಶ ಅಂಚೆ ಕೊಟ್ರೇಶ , ಪ್ರಭುಸ್ವಾಮಿ ಸೇರಿದಂತೆ ಹದಿನೈದಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದರು. ಪದವಿ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ನಾಟಕ ವೀಕ್ಷಿಸಿದರು.