ಗೋಕಾಕ್

ವಚನಗಳಲ್ಲಿ ಭಗವಂತನ ಸ್ವರೂಪವನ್ನೇ ಕಾಣಬಹುದು: ಪ್ರೊ. ಶಕುಂತಲಾ ದಂಡಗಿ

ವಚನಗಳಲ್ಲಿ ಭಗವಂತನ ಸ್ವರೂಪವನ್ನೇ ಕಾಣಬಹುದು: ಪ್ರೊ. ಶಕುಂತಲಾ ದಂಡಗಿ

ಗೋಕಾಕ18: ಆದ್ಯ ವಚನಕಾರರಾದಿಯಾಗಿ ಹನ್ನೆರಡನೇ ಶತಮಾನದ ಬಸವಾದಿ ಶಿವಶರಣರು ತಮ್ಮ ಜೀವನಾನುಭವದಿಂದ ಉಸುರಿದ ಮಾತುಗಳೇ ವಚನಗಳಾಗಿವೆ. ಸಾಮಾಜಿಕ ಸ್ಥಿತಿ-ಗತಿಯಿಂದ ಆಧ್ಯಾತ್ಮದ ತುತ್ತ ತುದಿಯಲ್ಲಿ ವಿಜೃಂಭಿಸುವ ಶರಣರ ವಚನಗಳಲ್ಲಿ ಭಗವಂತನ ಸ್ವರೂಪವನ್ನೇ ನಾವು ಕಾಣಬಹುದಾಗಿದೆ ಎಂದು ಕೆ.ಎಲ್.ಇ. ಪದವಿ ಪೂರ್ವ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಶಕುಂತಲಾ ದಂಡಗಿಯವರು ಅಭಿಪ್ರಾಯಿಸಿದರು. ಬಸವೇಶ್ವರ ಜಾನಪದ ಕಲಾಬಳಗ ಹಾಗೂ ಗೋಕಾಕ ಲೇಖಕಿಯ ಬಳಗದ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ 284ನೇ ಸಾಹಿತ್ಯ ಚಿಂತನ ಕಮ್ಮಟದಲ್ಲಿ ಉಪನ್ಯಾಸಕರಾಗಿ ಆಗಮಿಸಿ ದಂಡಗಿಯವರು ವಿಶ್ವಗುರು ಬಸವಣ್ಣನವರ ಇಷ್ಟಲಿಂಗ ಪರಿಕಲ್ಪನೆಯನ್ನು ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ ವಚನದ ವಿಶ್ಲೇಷಣೆ ಗೈದು ದೇವರು ಸರ್ವಾಂತರ್ಯಾಮಿ ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಆಧ್ಯಾತ್ಮ ಚಿಂತಕ ಪೂಜ್ಯ ದುಂಡಯ್ಯ ಸ್ವಾಮಿ ಪೂಜಾರಿಯವರು ವಿಶ್ವಗುರು ಬಸವಣ್ಣನವರು ಸಕಲ ವೇದ ಉಪನಿಷತ್ತುಗಳ ಸಾರವನ್ನು ತಮ್ಮ ಗುರು ಜಾತವೇದ ಮುನಿಗಳಿಂದ ಅರಿತು ತಮ್ಮ ವಚನಗಳ ಮುಖಾಂತರ ಆಧ್ಯಾತ್ಮದ ಹೊದಲು ಹರಿಸಿದರು. ತನ್ನ ಬಿಟ್ಟು ದೇವರಿಲ್ಲ, ಮಣ್ಣು ಬಿಟ್ಟು ಮಡಿಕೆಯಿಲ್ಲ ಎಂದು ಸ್ವರೂಪದ ಸಾಕ್ಷಾತ್ಕಾರ ಮಾಡಿಸಿದರೆಂದು ನುಡಿದರು.ಗುರುಮಾತೆ ಬಿ.ವಾಯ್. ಕೊಳದೂರ ಹಾಗೂ ಬಸವಲಿಂಗಪ್ಪ ಚೌಬಾರಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಭಾರತಿ ಬಸವರಾಜ ಮದಬಾವಿ ಸ್ವಾಗತಿಸಿದರು. ಬಸವರಾಜ ಬೆಳಕೂಡ ಪರಿಚಯಿಸಿದರು. ಪ್ರಾಚಾರ್ಯ ಜಯಾನಂದ ಮಾದರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈಶ್ವರಚಂದ್ರ ಬೆಟಗೇರಿ ನಿರೂಪಿಸಿದರು. ಆನಂದ ಸೊರಗಾಂವಿ ವಂದಿಸಿದರು.

ಸುದ್ದಿ ಓದಿ