ಕೊಪ್ಪಳ

ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿಯೂ ಪ್ರಗತಿ ಹೊಂದಬೇಕು: ಸಂಸದ ರಾಜಶೇಖರ ಹಿಟ್ನಾಳ

ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿಯೂ ಪ್ರಗತಿ ಹೊಂದಬೇಕು: ಸಂಸದ ರಾಜಶೇಖರ ಹಿಟ್ನಾಳ


ಕೊಪ್ಪಳ, ಸೆ.10: ಮುಸ್ಲಿಂ ಸಮುದಾಯ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.  ಭಾಗ್ಯನಗರದ ಜಾಮಿಯಾ ಮಸೀದಿ (ಸುನ್ನಿ) ಕಮಿಟಿ ವತಿಯಿಂದ ಓಜನಹಳ್ಳಿ ಕ್ರಾಸ್ನಲ್ಲಿ ನಿರ್ಮಿಸಿರುವ ನೂತನ ಶಾದಿ ಮಹಲ್ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಮುಸ್ಲಿಂ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಹಿಂದೆ ಅಲ್ಪಸಂಖ್ಯಾತರ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗಿತ್ತು. ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಮನವಿ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಆದರೆ ಇದೀಗ ಅಬ್ದುಲ್ ಕಲಾಂ, ಮುರಾರ್ಜಿ ವಸತಿ ಶಾಲೆಗಳು ಸೇರಿದಂತೆ ವಿವಿಧ ಶಾಲೆಗಳಲ್ಲಿ ಮುಸ್ಲಿಂ ಸಮುದಾಯದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯುತ್ತಿರುವುದು ಸಂತಸದ ಸಂಗತಿ ಎಂದರು.  

ಶಾದಿ ಮಹಲ್ಗಳಂತಹ ಸಮುದಾಯ ಭವನಗಳ ನಿರ್ಮಾಣದ ಜೊತೆಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವತ್ತಲೂ ಸಮುದಾಯ ಗಮನಹರಿಸಬೇಕು. ಸಂಘಟನೆ ಹಾಗೂ ಹೋರಾಟದ ಮೂಲಕ ಸಮುದಾಯದ ಸಮಗ್ರ ಅಭಿವೃದ್ಧಿ ಸಾಧ್ಯ. ಭಾಗ್ಯನಗರದ ಎಲ್ಲ ಸಮುದಾಯದವರ ಒಗ್ಗಟ್ಟು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.  

ಸಮಾಜದಲ್ಲಿ ದ್ವೇಷದ ಬದಲು ಪ್ರೀತಿ, ಸಹಬಾಳ್ವೆ ಮತ್ತು ಮಾನವೀಯತೆ ಬೆಳೆಸಬೇಕು. ಎಲ್ಲ ಧರ್ಮಗಳ ಮೂಲ ಸಂದೇಶವೂ ಮಾನವ ಪ್ರೀತಿಯೇ ಆಗಿದೆ. ಕೈಯಲ್ಲಿ ಒಳ್ಳೆಯ ಕೆಲಸ, ತಲೆಯಲ್ಲಿ ಒಳ್ಳೆಯ ವಿಚಾರ ಹಾಗೂ ಹೃದಯದಲ್ಲಿ ಪ್ರೀತಿ ಇರಬೇಕು. ಮನುಷ್ಯನನ್ನು ಮನುಷ್ಯನಂತೆ ಕಾಣುವುದೇ ನಿಜವಾದ ಧರ್ಮ ಎಂದು ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.  

ಮಾಜಿ ಶಾಸಕ ಬಸವರಾಜ ಹಿಟ್ನಾಳ ಮಾತನಾಡಿ, ಸಮುದಾಯದ ಅಭಿವೃದ್ಧಿಗೆ ಸರ್ಕಾರದಿಂದ ಸಾಕಷ್ಟು ಅನುದಾನ ತರಲಾಗುತ್ತಿದ್ದರೂ ಅದು ಸಾಲದು. ಸಮುದಾಯ ಭವನಗಳ ನಿರ್ಮಾಣದ ಜತೆಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಬೇಕು ಎಂದರು.  

ಹಿರಿಯ ವಕೀಲ ಎಸ್‌. ಅಸೀಫ್ ಅಲಿ ಮಾತನಾಡಿ, ಎಲ್ಲ ಮಕ್ಕಳಿಗೂ ಶಿಕ್ಷಣ ದೊರೆಯುವಂತೆ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಅಗತ್ಯವಿದೆ. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಗ್ಗಟ್ಟಾಗಿ ಮುನ್ನಡೆದಾಗ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದರು.  

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಹಿರಿಯ ಮುಖಂಡ ರಾಘವೇಂದ್ರ ಪಾನಘಂಟಿ, ನಗರಸಭೆ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ಸೇರಿದಂತೆ ಹಲವರು ಮಾತನಾಡಿದರು.  

ಶಾದಿ ಮಹಲ್ನ ಬಾಕಿ ಕಾಮಗಾರಿಗಳಿಗೆ ಅನುದಾನ ನೀಡುವಂತೆ ಸಂಸದರಿಗೆ ಮನವಿ ಸಲ್ಲಿಸಲಾಯಿತು. ಕಟ್ಟಡಕ್ಕೆ ಅಗತ್ಯವಿರುವ ಇಟ್ಟಿಗೆಗಳನ್ನು ನೀಡುವುದಾಗಿ ಕೆ.ಎಂ. ಸಯ್ಯದ್ ಭರವಸೆ ನೀಡಿದರು. ಶಾದಿ ಮಹಲ್ ನಿರ್ಮಾಣಕ್ಕೆ ಕಾರಣಕರ್ತರಾದವರನ್ನು ಸನ್ಮಾನಿಸಲಾಯಿತು.  

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಮೇಶ ಹಟ್ಟಿ, ಮಾಜಿ ಅಧ್ಯಕ್ಷ ತುಕಾರಾಮಪ್ಪ ಗಡಾದ, ಸಮಿತಿ ಅಧ್ಯಕ್ಷ ಇಬ್ರಾಹಿಂಸಾಬ್ ಬಿಸರಳ್ಳಿ ಸೇರಿದಂತೆ ಭಾಗ್ಯನಗರ, ನವನಗರ ಹಾಗೂ ಕೊಪ್ಪಳದ ಮುಸ್ಲಿಂ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು. 


ಸುದ್ದಿ ಓದಿ