ಸಪ್ತರ್ಷಿಗಳ ತ್ಯಾಗದಿಂದ ಕೆ.ಎಲ್.ಇ. ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ: ಡಾ. ಬಸು ಬೇವಿನಗಿಡದ
ಸವದತ್ತಿ 13: ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಮುಂಬೈ ಕರ್ನಾಟಕ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳ ಕೊರತೆಯಿದ್ದಾಗ, 1916ರ ನವೆಂಬರ್ 13ರಂದು ಏಳು ಜನ ಮಹನೀಯರು ಸೇರಿ ಕಟ್ಟಿದ ಸಂಸ್ಥೆಯೇ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ. ಈ ಸಂಸ್ಥೆಯನ್ನು ಸ್ಥಾಪಿಸಿದ ಏಳು ಜನರನ್ನು ಸಪ್ತರ್ಷಿಗಳು ಎಂದು ಗೌರವಿಸಲಾಗುತ್ತದೆ ಎಂದು ಧಾರವಾಡ ಆಕಾಶವಾಣಿಯ ನಿವೃತ್ತ ನಿರ್ದೇಶಕರು ಹಾಗೂ ಸಾಹಿತಿಗಳಾದ ಡಾ. ಬಸು ಬೇವಿನಗಿಡದ ಹೇಳಿದರು.
ಸ್ಥಳೀಯ ವೀರಭದ್ರ್ಪ ಬಸಪ್ಪ ಬೆಳ್ಳುಬ್ಬಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕೆ.ಎಲ್.ಇ. ಅಂಗ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕೆ.ಎಲ್.ಇ. ಸಂಸ್ಥೆಯ 111ನೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.1916ರಲ್ಲಿ ಈ ಭಾಗದಲ್ಲಿ ಶೈಕ್ಷಣಿಕ ಬರಗಾಲ ಆವರಿಸಿದ್ದ ಸಂದರ್ಭದಲ್ಲಿ ಶಿ.ಶಿ. ಬಸವನಾಳ,
ಎಂ.ಆರ್. ಸಾಖರೆ, ಬಿ.ಬಿ. ಮಮದಾಪುರ, ಎಚ್.ಎಫ್. ಕಟ್ಟೀಮನಿ, ಪಂಡಿತಪ್ಪ ಚಿಕ್ಕೋಡಿ, ಬಿ.ಎಸ್. ಹಂಚಿನಾಳ ಮತ್ತು ಸರದಾರ ವಿ.ವಿ. ಪಾಟೀಲರು ಈ ಭಾಗದ ಜನರಿಗೆ ಅಕ್ಷರ ದೀಕ್ಷೆ ನೀಡಲು ಪಣತೊಟ್ಟರು. ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗೊತ್ತಿ ಸಮಾಜಕ್ಕಾಗಿ ಸಂಸ್ಥೆಯನ್ನು ಕಟ್ಟುವ ಮೂಲಕ ಚಾರಿತ್ರಿಕ ನಿರ್ಧಾರ ಕೈಗೊಂಡರು," ಎಂದು ಸ್ಮರಿಸಿದರು.
ಬೆಳಗಾವಿ ಕೋಟೆ ಆವರಣದ ಬಾಡಿಗೆ ಮನೆಯೊಂದರಲ್ಲಿ ಪ್ರಾರಂಭವಾದ ಜಿ.ಎ. ಪ್ರೌಢಶಾಲೆಯ ಮೂಲಕ ಕೆ.ಎಲ್.ಇ. ಸಂಸ್ಥೆಗೆ ಅಡಿಪಾಯ ಹಾಕಲಾಯಿತು. ಆರಂಭದಲ್ಲಿ ಎದುರಾದ ಅನೇಕ ಸವಾಲುಗಳಿಗೆ ಧೈರ್ಯಗುಂದದೆ ಸಂಸ್ಥಾಪಕರು ಸಂಸ್ಥೆಯನ್ನು ಮುನ್ನಡೆಸಿದರು. ಅವರ ನಿಸ್ವಾರ್ಥ ಪ್ರಯತ್ನದ ಫಲವಾಗಿ ಇಂದು ಕೆ.ಎಲ್.ಇ. ಸಂಸ್ಥೆಯು ದೇಶ-ವಿದೇಶಗಳಲ್ಲಿ 320ಕ್ಕೂ ಹೆಚ್ಚು ಅಂಗ ಸಂಸ್ಥೆಗಳನ್ನು ಹೊಂದುವ ಮೂಲಕ ಹೆಮ್ಮರವಾಗಿ ಬೆಳೆದಿದೆ ಎಂದರು.
ಸಾಧನೆ ಮಾಡಬೇಕೆನ್ನುವವರು ಯಾವುದೇ ಪ್ರಯತ್ನವನ್ನು ಸಣ್ಣದು ಅಥವಾ ದೊಡ್ಡದು ಎಂದು ಭಾವಿಸಬಾರದು. ಸಣ್ಣ ಪ್ರಯತ್ನಗಳೇ ಮುಂದೆ ದೊಡ್ಡ ಯಶಸ್ಸನ್ನು ತಂದುಕೊಡುತ್ತವೆ. ಇಂದಿನ ಯುವಪೀಳಿಗೆಗೆ ಕೆ.ಎಲ್.ಇ. ಸಂಸ್ಥೆಯ ಸಪ್ತರ್ಷಿಗಳು ಆದರ್ಶಪ್ರಾಯರಾಗಿದ್ದು, ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರು ಹಾಗೂ ವಕೀಲರು ಬಿ.ವಿ. ಮಲಗೌಡರ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪದವಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಬಿ. ಗುಡೆನವರ, ಬಾಬು ಗಾಡಗೊಳ್ಳಿ, ಎಂ.ಜಿ. ಪಾಟೀಲ, ಪ್ರಾಚಾರ್ಯ ಡಾ. ಎನ್.ಆರ್. ಸವತಿಕರ, ಬಿ.ವಿ. ಚಿಚಗಂಡಿ, ಪ್ರಕಾಶ ಸೊನ್ನದ ಎಸ್.ಎಸ್. ಪಾಟೀಲ, ಪಿ.ಬಿ. ತುರಮರಿ, ವರ್ಷಾ ಗಾಂವಕರ, ಬಿ.ಕೆ. ಕಠಾರೆ, ಪ್ರೊ. ಕೆ. ರಾಮರೆಡ್ಡಿ, ಡಾ. ಎ.ಎಫ್. ಬದಾಮಿ, ಎಂ.ಜಿ. ಅಂಬಲಿ, ಸಂತೋಷ ಹುಬ್ಬಳ್ಳಿ, ಎಸ್.ಜಿ. ಪಾಟೀಲ, ಬಿ.ಬಿ. ಜಾಬರ, ಬಿ.ಎಂ. ಕೊಕಟನೂರ, ಪಿ.ಐ. ಬಾಗವಾನ, ಎಸ್.ಎಂ. ಕಿರೋಜಿ ಸೇರಿದಂತೆ ಅಂಗಸಂಸ್ಥೆಗಳ ಪ್ರಾಧ್ಯಾಪಕರು, ಶಿಕ್ಷಕ ವೃಂದ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.