ಬೆಳಗಾವಿ

ಸುರಕ್ಷಿತ ಚಾಲನೆ ಹಾಗೂ ಸಂಚಾರಿ ನಿಯಮಗಳ ಪಾಲನೆಯಿಂದ ರಸ್ತೆ ಅಪಘಾತ ನಿಯಂತ್ರಣ ಸಾಧ್ಯ: ಶಾಸಕ ವಿಶ್ವಾಸ ವೈದ್ಯ

ಸುರಕ್ಷಿತ ಚಾಲನೆ ಹಾಗೂ ಸಂಚಾರಿ ನಿಯಮಗಳ ಪಾಲನೆಯಿಂದ ರಸ್ತೆ ಅಪಘಾತ ನಿಯಂತ್ರಣ ಸಾಧ್ಯ: ಶಾಸಕ ವಿಶ್ವಾಸ ವೈದ್ಯ
Road accidents can be controlled through safe driving and adherence to traffic rules: MLA Vishwas Va

            ಸವದತ್ತಿ 14 : ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಪ್ರತಿಯೊಬ್ಬ ವಾಹನ ಸವಾರರಿಗೂ ಸುರಕ್ಷಿತ ಚಾಲನೆ ಹಾಗೂ ಸಂಚಾರಿ ನಿಯಮಗಳ ಬಗ್ಗೆ ಸ್ಪಷ್ಟ ಅರಿವು ಇರುವುದು ಅತ್ಯಂತ ಅಗತ್ಯವಾಗಿದೆ, ಎಂದು ಶಾಸಕ ವಿಶ್ವಾಸ ವೈದ್ಯ ಅಭಿಪ್ರಾಯಪಟ್ಟರು.ನಗರದ ರಾಮಾಪುರಸೈಟ್‌ನ ಹನುಮಂತ ದೇವಸ್ಥಾನದ ಹತ್ತಿರವಿರುವ ಯಶೋಧಾ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭಗೊಂಡಿರುವ, ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ದೋಸ್ತಿ ವಾಹನ ತರಬೇತಿ ಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

           ರಾಜ್ಯದಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಿದೆ. ಹೀಗಾಗಿ ಚಾಲನಾ ಪರವಾನಗಿ ಪಡೆಯುವ ಮುನ್ನ ನುರಿತ ತರಬೇತುದಾರರಿಂದ ವೈಜ್ಞಾನಿಕ ಹಾಗೂ ಸಂಪೂರ್ಣ ತರಬೇತಿ ಪಡೆಯುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಕೇವಲ ವಾಹನ ಚಲಾಯಿಸಲು ಕಲಿತರೆ ಸಾಲದು; ರಸ್ತೆ ಚಿಹ್ನೆಗಳು, ಸಂಚಾರ ನಿಯಮಗಳು, ವೇಗದ ಮಿತಿ ಮತ್ತು ಪಾದಚಾರಿಗಳು ಸೇರಿದಂತೆ ಇತರ ಸವಾರರ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಬೇಕು, ಎಂದು ಕಿವಿಮಾತು ಹೇಳಿದರು. ನೂತನವಾಗಿ ಆರಂಭವಾಗಿರುವ ಈ ತರಬೇತಿ ಶಾಲೆಯು ಸಾರ್ವಜನಿಕರಿಗೆ ಗುಣಮಟ್ಟದ ಹಾಗೂ ಶಿಸ್ತುಬದ್ಧ ಚಾಲನಾ ತರಬೇತಿ ನೀಡುವ ಮೂಲಕ ಸುರಕ್ಷಿತ ಪ್ರಯಾಣಕ್ಕೆ ನಾಂದಿ ಹಾಡಲಿ ಎಂದು ಶುಭ ಹಾರೈಸಿದರು.  

             ಅಲ್ಲದೆ, ಈ ಸಂಸ್ಥೆಯ ಸೇವೆಯು ಸವದತ್ತಿಗೆ ಮಾತ್ರ ಸೀಮಿತವಾಗದೆ, ಮುಂಬರುವ ದಿನಗಳಲ್ಲಿ ತಾಲೂಕಿನ ಮುನವಳ್ಳಿ ಹಾಗೂ ಯರಗಟ್ಟಿಗೂ ವಿಸ್ತರಣೆಯಾಗಲಿ; ಇದಕ್ಕೆ ತಮ್ಮ ಸಂಪೂರ್ಣ ಸಹಾಯ ಮತ್ತು ಸಹಕಾರವಿರುತ್ತದೆ ಎಂದು ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಘಟಕರು ಶಾಸಕ ವಿಶ್ವಾಸ ವೈದ್ಯ ಹಾಗೂ ಉಪಸ್ಥಿತರಿದ್ದ ಗಣ್ಯರನ್ನು ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಿದರು.

             ತರಬೇತಿ ಶಾಲೆಯಲ್ಲಿ ಲಭ್ಯವಿರುವ ಆಧುನಿಕ ಚಾಲನಾ ತರಬೇತಿ ಸೌಲಭ್ಯಗಳು, ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ತರಬೇತಿ ಹಾಗೂ ಪರವಾನಗಿ ಸೇವೆಗಳ ಕುರಿತು ಸಂಘಟಕರು ಮಾಹಿತಿ ನೀಡಿದರು. ಈ ವೇಳೆ ಎಮ್‌.ಎಮ್‌. ಯಲಿಗಾರ, ಕಾಶೀಮಸಾಬ ಶಾಬಾಶಖಾನ, ಚಂದ್ರು ಶ್ಯಾಮರಾಯಣವರ, ಬಿ.ಎನ್‌. ಪ್ರಭುನವರ,ರವಿ ಗಿರಿಜಣ್ಣವರ, ಶಾಹಜಾನ ಸಂಗೊಳ್ಳಿ ಸೇರಿದಂತೆ ಸ್ಥಳೀಯ ಗಣ್ಯರು, ಸಂಸ್ಥೆಯ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ