ತಾಲೂಕ ಮಟ್ಟದ ಸಾರ್ವಜನಿಕರ ಕುಂದುಕೊರತೆ
ಅಧಿಕಾರಿಯೊಬ್ಬರನ್ನು ತರಾಟೆಗೆ ತೆಗೆದುಕೊಂಡ ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ
ಜಮಖಂಡಿ 16: ತಾಲೂಕ ಮಟ್ಟದ ಸಭೆಗೆ ಯಾವ ರೀತಿಯಲ್ಲಿ ಬರಬೇಕು. ಸಭೆ ಎಂದರೆ ನಿಮಗೆ ಹೆದರಿಕೆ ಇಲ್ಲವಾ, ಕೈಯಲ್ಲಿರುವ ಬೆರಳುಗಳಿಗೆ ಉಂಗುರ ಕೊರಳಲ್ಲಿ ಚೈನು, ಬೇಕಾಬಿಟ್ಟಿ ಕೂದಲು ಬಿಟ್ಟುಕೊಂಡು ಬಂದಿರುವದು ನಿಮಗೆ ನಾಚಿಕೆ ಆಗುವದಿಲ್ಲವೋ, ನಿಮ್ಮದು ಯಾವ ಇಲಾಖೆ ಎಂದು ಲೋಕಾಯುಕ್ತ ಇಲಾಖೆ ಡಿ.ವೈ.ಎಸ್.ಪಿ. ಪುಷ್ಪಲತಾ ಅವರು ತಾ.ಪಂ. ಅಧಿಕಾರಿಯೊಬ್ಬರನ್ನು ತರಾಟೆಗೆ ತೆಗೆದುಕೊಂಡರು.
ನಗರದ ತಾಲೂಕ ಆಡಳಿತ ಸೌಧ ಸಭಾ ಭವನದಲ್ಲಿ ನಡೆದ ತಾಲೂಕ ಮಟ್ಟದ ಸಾರ್ವಜನಿಕರ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದ ಅವರು, ಕಛೇರಿಯಲ್ಲಿ ಮತ್ತು ಸರಕಾರಿ ಸಭೆಯಲ್ಲಿ ಇದೇ ರೀತಿಯಲ್ಲಿ ಹೋಗುತ್ತಿರಾ, ನಿಮ್ಮ ಮೇಲಾಧಿಕಾರಿಗಳ ಯಾವುದೇ ಭಯ ಇಲ್ಲವೇ, ರೌಡಿ ರೀತಿಯಲ್ಲಿ ಇರಲು ನಿಮ್ಮ ತಾ.ಪಂ. ಆಧಿಕಾರಿಗಳು ಸೂಚಿಸಿದ್ದಾರೆಯೇ ಎಂದು ಪ್ರಶ್ನಿಸಿದರು.
ಅಧಿಕಾರಿಗಳ ಮನಸ್ಸಿನಲ್ಲಿ ಉತ್ತಮ ಆಲೋಚನೆಗಳಿದ್ದರೇ ಶ್ರದ್ಧೆಯಿಂದ ಸರಕಾರಿ ಸೇವೆ ಸಲ್ಲಿಸಿದರೇ ಅವರು ಮಾಡುವ ಎಲ್ಲ ಕೆಲಸಗಳು ಕಾನೂನಿನ ಚೌಕಟ್ಟಿನಲ್ಲಿರುತ್ತವೆ. ಇಲಾಖೆಗಳ ಯೋಜನೆಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿದರೇ ಮಾತ್ರ ಫಲಾನುಭವಿಗಳಿಗೆ ಉತ್ತಮ ಸೇವೆ ನೀಡಲು ಸಾಧ್ಯ. ಸೇವೆಯಲ್ಲಿ ಸಮಯ ದುರ್ಬಳಕೆ ಮಾಡಬಾರದು. ಜಮಖಂಡಿ ನಗರದಲ್ಲಿ ಸ್ವಚ್ಛತೆ ಮರೆಯಾಗಿದೆ. ನಗರಸಭೆಯಲ್ಲಿ ಕಾರ್ಮಿಕರ ಕೊರತೆ ನೆಪದಲ್ಲಿ ನಗರದ ಸ್ವಾಥ್ಯ ಹಾಳು ಆಗಬಾರದು. ಎಲ್ಲ ಇಲಾಖೆಗಳ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದರೇ ಜನರು ಲೋಕಾಯುಕ್ತ ಕಛೇರಿಗೆ ದೂರು ನೀಡಲು ಹುಚ್ಚರಲ್ಲ ಎಂದು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.
ಲೋಕಾಯುಕ್ತ ಸಿಪಿಐ ಬಸನಗೌಡ ಪಾಟೀಲ ಮಾತನಾಡಿ, ನಗರದ ತಾಲೂಕ ಆಡಳಿತ ಸೌಧ ಕಛೇರಿಯಲ್ಲಿರುವ ಬಾಂಡರೈಟರಗಳು ಕಣ್ಣಿಗೆ ಕಾಣುವ ರೀತಿಯಲ್ಲಿ ಸಾರ್ವಜನಿಕರ ಸೇವೆಗಳ ದರಪಟ್ಟಿ ಅಂಟಿಸಬೇಕು. ನೊಂದಣಿ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆಂದು ಮಾಹಿತಿ ಲಭ್ಯವಾಗಿದ್ದು, ನೊಂದಣಿ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ತಹಶೀಲ್ದಾರ ಸದಾಶಿವ ಮಕ್ಕೋಜಿ, ಲೋಕಾಯುಕ್ತ ಸಿಪಿಐ ಮಲ್ಲಪ್ಪ ಬಿದರಿ, ಪಿ.ಎಸ್.ಐ. ನಾಗರಾಜ ಕಿಲಾರಿ, ತಾಲೂಕಾ ಆರೋಗ್ಯ ವೈದ್ಯಾಧಿಕಾರಿ ಡಾ.ಜಿ.ಎಸ್.ಗಲಗಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ಬಸನ್ನವರ, ಅರಣ್ಯ ಇಲಾಖೆ ಅಧಿಕಾರಿ ಪವನಕುಮಾರ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ನಂತರ ನಡೆದ ಸಾರ್ವಜನಿಕರ ಕುಂದುಕೊರತೆ ವಿಚಾರಣೆಯಲ್ಲಿ 15 ಹೆಚ್ಚು ಅರ್ಜಿದಾರರ ಅರ್ಜಿಗಳನ್ನು ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆಗೆ ಚರ್ಚಿಸಲಾಯಿತು.