ಸಾಧಕ ವಿದ್ಯಾರ್ಥಿಗಳನ್ನು ಸಮಾಜ ಬಾಂಧವರು ಪ್ರೋತ್ಸಾಹಿಸಲಿ: ಪಂ. ಜೋಶಿ
ಅಥಣಿ 26: ಶೈಕ್ಷಣಿಕವಾಗಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಮಾಜ ಬಾಂಧವರು ಪ್ರೋತ್ಸಾಹಿಸಬೇಕು ಎಂದು ಉತ್ತರಾದಿ ಮಠದ ಮಠಾಧಿಕಾರಿ ಪಂ.ಎಮ್.ಜಿ.ಜೋಶಿ ಹೇಳಿದರು.
ಅವರು ಅಥಣಿ ಸತ್ಯಾತ್ಮ ಸೇನೆ ಸ್ಥಳೀಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಹಮ್ಮಿಕೊಂಡ ಬ್ರಾಹ್ಮಣ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರತಿಭೆ ಬಳಸಿಕೊಂಡು ಉನ್ನತ ಸ್ಥಾನ ಪಡೆದುಕೊಳ್ಳುವ ಮೂಲಕ ಸಮಾಜದ ಆಸ್ತಿಯಾಗಬೇಕು ಎಂದು ಕರೆ ನೀಡಿದ ಅವರು 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಂತೆ ಮುಂದಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳು ಕೂಡ ಉತ್ತಮ ಅಂಕ ಗಳಿಕೆ ಮಾಡಿಕೊಳ್ಳಬೇಕು ಎಂದರು.
ವಿಶ್ವ ಮಧ್ವ ಪರಿಷತ್‌ನ ಶ್ರೀನಿವಾಸಾಚಾರ್ಯ ಜೋಶಿ ಮಾತನಾಡಿ, ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಉತ್ತರಾದಿ ಮಠದ ಸತ್ಯಾತ್ಮ ತೀರ್ಥ ಸ್ವಾಮೀಜಿ ಕರೆ ನೀಡಿದ ಹಿನ್ನಲೆಯಲ್ಲಿ ಅಥಣಿಯ ಸತ್ಯಾತ್ಮ ಸೇನೆಯ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪಂ.ರಾಮಾಚಾರ್ಯ ಕಟಗೇರಿ, ವಸಂತಾಚಾರ್ಯ ಜೋಶಿ, ದೀಲೀಪ ಟೊಣಪಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮಾಜದ 12 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.