ಮಾಧ್ಯಮ ರಂಗದಲ್ಲಿ ತಂತ್ರಜ್ಞಾನದಿಂದ ಸಾಕಷ್ಟು ಬದಲಾವಣೆ: ಡಿ. ಸುರೇಶ್
Significant changes in the media sector due to technology: D. Suresh
ಕೊಪ್ಪಳ, ಸೆ.23: ಮಾಧ್ಯಮ ರಂಗದಲ್ಲಿ ತಂತ್ರಜ್ಞಾನದಿಂದ ಸಾಕಷ್ಟು ಬದಲಾವಣೆಗಳಾಗಿದ್ದು, ಡಿಜಿಟಲ್ ಮಾಧ್ಯಮವನ್ನು ಮೀರಿ ಇದೀಗ ಸಿಟಿಜನ್ ಮೀಡಿಯಾ ಮುನ್ನೆಲೆಗೆ ಬಂದಿದೆ ಎಂದು ಕೊಪ್ಪಳ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ (ಪಿಐ) ಡಿ. ಸುರೇಶ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ದಿನಗಳಲ್ಲಿ ನಡೆದ ಘಟನೆಗಳು ಹಾಗೂ ವಿಷಯಗಳು ಮರುದಿನದ ಪತ್ರಿಕೆಗಳ ಮೂಲಕ ಜನಸಾಮಾನ್ಯರನ್ನು ತಲುಪುತ್ತಿದ್ದವು. ಆದರೆ ಡಿಜಿಟಲ್ ಮಾಧ್ಯಮದ ಆಗಮನದ ಬಳಿಕ ಮಾಹಿತಿ ಪ್ರಸಾರ ವೇಗ ಹೆಚ್ಚಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ವಿಷಯಗಳು ಸಾರ್ವಜನಿಕರನ್ನು ತಲುಪುತ್ತಿವೆ ಎಂದರು.
ಇತ್ತೀಚಿನ ದಿನಗಳಲ್ಲಿ ಇದಕ್ಕಿಂತಲೂ ವೇಗವಾಗಿ ಮಾಹಿತಿ ಹಂಚಿಕೆಯಾಗುತ್ತಿದ್ದು, ಡಿಜಿಟಲ್ ಮಾಧ್ಯಮವನ್ನು ಮೀರಿ ಸಿಟಿಜನ್ ಮೀಡಿಯಾ ಮುನ್ನೆಲೆಗೆ ಬಂದಿದೆ. ಜನಸಾಮಾನ್ಯರು ತಮ್ಮ ಸಮಸ್ಯೆಗಳು ಹಾಗೂ ಘಟನೆಗಳನ್ನು ಫೇಸ್ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ನೇರವಾಗಿ ಹಂಚಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಈ ಎಲ್ಲ ಬೆಳವಣಿಗೆಗಳ ನಡುವೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವೂ ಮಾಧ್ಯಮ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ತಂತ್ರಜ್ಞಾನದ ಬದಲಾವಣೆಗಳಿಗೆ ಮಾಧ್ಯಮ ಕ್ಷೇತ್ರವೂ ಹೊಂದಿಕೊಳ್ಳಬೇಕಾಗಿದೆ ಎಂದು ಡಿ. ಸುರೇಶ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ ಮಾತನಾಡಿ, ಜಿಲ್ಲೆಯ ಪತ್ರಕರ್ತರು ಸ್ಥಳೀಯ ಮಟ್ಟದಲ್ಲಿ ಪತ್ರಿಕೆಗಳನ್ನು ಆರಂಭಿಸಿ ಪ್ರಕಟಿಸಿದರೆ, ಇಲಾಖೆಯಿಂದ ದೊರೆಯಬಹುದಾದ ಸಹಾಯ-ಸೌಲಭ್ಯಗಳನ್ನು ಒದಗಿಸಲು ಶ್ರಮಿಸುವುದಾಗಿ ತಿಳಿಸಿದರು. ಹಿರಿಯ ಪತ್ರಕರ್ತರ ಸಲಹೆ-ಸೂಚನೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಪಾಲಿಸುವುದಾಗಿ ಹೇಳಿದರು.
ಸಂಘದ ಜಿಲ್ಲಾ ಅಧ್ಯಕ್ಷ ಹನುಮಂತ ಹಳ್ಳಿಕೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತರಾದ ಎಂ. ಸಾಧಿಕ್ ಅಲಿ, ಎಚ್.ಎಸ್. ಹರೀಶ್, ಜಿ.ಎಸ್. ಗೋನಾಳ ಹಾಗೂ ಎಂ.ಎಂ. ದೊಡ್ಡಮನಿ ಮಾತನಾಡಿದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ರಾಜು ಬಿ.ಆರ್. ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ. ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ವೀರಣ್ಣ ಕಳ್ಳಿಮನಿ ವಂದಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಡಿ. ಸುರೇಶ್ ಹಾಗೂ ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಅವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು. ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯ ಪತ್ರಕರ್ತರು ಉಪಸ್ಥಿತರಿದ್ದರು.
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ 