ಶಿಗ್ಗಾವಿ: ಹಡಪದ ಅಪ್ಪಣ್ಣ ಜಯಂತಿ ಆಚರಣೆ; ವಚನ ಸಾಹಿತ್ಯ ಮನೆಮನೆಗೆ ತಲುಪಲಿ
ಶಿಗ್ಗಾವಿ, ಜು.29: ಹಡಪದ ಅಪ್ಪಣ್ಣ ಅವರ ವಚನಗಳಲ್ಲಿ ಲಾಲಿತ್ಯ, ಗುರು-ಲಿಂಗ-ಜಂಗಮ ಹಾಗೂ ನಿಷ್ಠೆಯ ತತ್ವಗಳು ಅಡಕವಾಗಿವೆ. ಅವರ ವಚನಗಳ ಪುಸ್ತಕಗಳನ್ನು ಮನೆಗಳಲ್ಲಿ ಇಟ್ಟು ಪ್ರತಿದಿನ ಮಕ್ಕಳಿಗೆ ಹಾಗೂ ಕುಟುಂಬದ ಎಲ್ಲ ಸದಸ್ಯರಿಗೆ ಓದಿಸಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮಾಯಗೇರಿ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಶರಣ ಶ್ರೀ ಹಡಪದ ಅಪ್ಪಣ್ಣ ಅವರ 892ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಡಪದ ಅಪ್ಪಣ್ಣ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ, ಮೋಳಿಗೆ ಮಾರಯ್ಯ, ಮೇಧಾರ ಕೇತಯ್ಯ, ಸಮಗಾರ ಹರಳಯ್ಯ, ಸೊನ್ನಲಿಗೆಯ ಸಿದ್ಧರಾಮ ಸೇರಿದಂತೆ ವಿವಿಧ ಶರಣರಿಗೆ ಬಸವಣ್ಣ ಅವರು ಅನುಭವ ಮಂಟಪದಲ್ಲಿ ಸಮಾನ ಅವಕಾಶ ಕಲ್ಪಿಸಿದ್ದರು. ಸಮಾಜದಲ್ಲಿದ್ದ ಅಸ್ಪೃಶ್ಯತೆಯಂತಹ ಅನಿಷ್ಠ ಪದ್ಧತಿಗಳನ್ನು ದೂರ ಮಾಡುವಲ್ಲಿ ಹಡಪದ ಅಪ್ಪಣ್ಣ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ನ್ಯಾಯವಾದಿ ಬಸವರಾಜ ಜೇಕಿನಕಟ್ಟಿ ಮಾತನಾಡಿ, ಹಡಪದ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಸಮುದಾಯದ ಅಭಿವೃದ್ಧಿಗೆ ಅಗತ್ಯವಾದ ಸೌಲಭ್ಯಗಳು ಹಾಗೂ ನ್ಯಾಯಯುತ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಶ್ರೀ ಹಡಪದ ಅಪ್ಪಣ್ಣ ಕ್ರೆಡಿಟ್ ಕೋ-ಆಪ್ ಸೊಸೈಟಿಯ ಅಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ, ಹಡಪದ ಅಪ್ಪಣ್ಣ ಅವರು 12ನೇ ಶತಮಾನದ ವಚನ ಚಳವಳಿ ಹಾಗೂ ಸಾಮಾಜಿಕ ಕ್ರಾಂತಿಯ ಪ್ರಮುಖ ಶರಣರಲ್ಲಿ ಒಬ್ಬರಾಗಿದ್ದರು. ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಅನುಭವ ಮಂಟಪದ ಕಾರ್ಯನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಯಲ್ಲಪ್ಪ ಗೊಣೆಣ್ಣವರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಎಸ್.ಎಫ್. ಮಣಕಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಡ್ಡಪ್ಪ ಜಲದಿ, ಹಡಪದ ಸಮಾಜದ ತಾಲೂಕು ಅಧ್ಯಕ್ಷ ಮಂಜುನಾಥ ಕೌಶರದ, ಗೌರವಾಧ್ಯಕ್ಷ ಗುರುಬಸಪ್ಪ ಹಡಪದ, ಈರ್ಪ ಹಡಪದ, ಮುತ್ತುರಾಜ ಕೌಶರದ, ವೀರೇಶ ಹಡಪದ, ಶಿವರಾಜ ಹಡಪದ ಸೇರಿದಂತೆ ಸಮಾಜದ ಮುಖಂಡರು, ಜನಪ್ರತಿನಿಧಿಗಳು ಹಾಗೂ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.