ಧಾರವಾಡ - ಹುಬ್ಬಳ್ಳಿ

ಪ್ರಯೋಗದಿಂದ ಪ್ರಗತಿಯತ್ತ ವಿಜ್ಞಾನ ವಸ್ತು ಪ್ರದರ್ಶನ : ಜೆ. ಜಿ ಸೈಯದ

ಪ್ರಯೋಗದಿಂದ ಪ್ರಗತಿಯತ್ತ ವಿಜ್ಞಾನ ವಸ್ತು ಪ್ರದರ್ಶನ : ಜೆ. ಜಿ ಸೈಯದ

ಲೋಕದರ್ಶನ ವರದಿ 

            ಧಾರವಾಡ 07 : ವಿಜ್ಞಾನ ಪ್ರದರ್ಶನಗಳು ಕೇವಲ ಮಾದರಿಗಳ ಪ್ರದರ್ಶನವಲ್ಲ, ಅವು ಯುವ ಮನಸ್ಸುಗಳ, ಸೃಜನಶೀಲ ಚಿಂತನೆಯ ಮತ್ತು ಭವಿಷ್ಯದ ಸಾಧ್ಯತೆಗಳ ಪ್ರದರ್ಶನಗಳಾಗಿವೆ. ಪ್ರತಿಯೊಂದು ಮಾದರಿಯು ಒಂದು ಪ್ರಶ್ನೆಯನ್ನು ಪ್ರತಿನಿಧಿಸುತ್ತದೆ. ಪ್ರತಿಯೊಂದು ಪ್ರಯೋಗವು ಒಂದು ಅನ್ವೇಷಣೆಯನ್ನು ಪ್ರತಿನಿಧಿಸುತ್ತದೆ.

        ಪ್ರತಿಯೊಂದು ನಾವೀನ್ಯತೆಯು ಉತ್ತಮ ಭವಿಷ್ಯದತ್ತ ಇಡುವ ಒಂದು ಹೆಜ್ಜೆಯನ್ನು ಪ್ರತಿನಿಧಿಸುವ ಮೂಲಕ ಪ್ರಯೋಗದಿಂದ ಪ್ರಗತಿಯತ್ತ ಕೊಂಡುಯ್ಯುತ್ತದೆ ಎಂದು ಡಯಟ್ ಪ್ರಚಾರ್ಯ ಜೆ.ಜಿ.ಸೈಯದ ಅಭಿಪ್ರಾಯಪಟ್ಟರು.      ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಏರಿ​‍್ಡಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.    

          ವಿಜ್ಞಾನ ಪ್ರದರ್ಶನಗಳು ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಬೆಳೆಸುತ್ತದೆ. ಹೊಸ ಮಾದರಿಗಳನ್ನು ವಿನ್ಯಾಸಗೊಳಿಸಲು, ವಿಭಿನ್ನ ಆಲೋಚನೆಗಳನ್ನು ರೂಪಿಸಲು ಮತ್ತು ನೈಜ ಜೀವನದ ಸಮಸ್ಯೆಗಳಿಗೆ ಸೃಜನಾತ್ಮಕ ಪರಿಹಾರಗಳನ್ನು ಕಂಡುಕೊಳ್ಳಲು ಪ್ರೇರೇಪಿಸುತ್ತದೆ. ಮಾಡುತ್ತಾ ಕಲಿಯುವ ಅನುಭವ ನೀಡುತ್ತದೆ. ಕೇವಲ ಕಂಠಪಾಠಕ್ಕೆ ಸೀಮಿತವಾಗದೆ, ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಆಳವಾದ ಜ್ಞಾನವನ್ನು ಪಡೆಯಲು ಸಹಾಯ ಮಾಡುತ್ತದೆ.

         ಸಮಾಜಮುಖಿ ವಿಜ್ಞಾನವನ್ನು ಉತ್ತೇಜಿಸುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನಗಳು ಮಾನವ ಜೀವನವನ್ನು ಹೇಗೆ ಸುಧಾರಿಸುತ್ತವೆ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಹೇಗೆ ಕೊಡುಗೆ ನೀಡುತ್ತವೆ ಎಂಬುದನ್ನು ತಿಳಿಸುತ್ತದೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಭವಿಷ್ಯದ ವಿಜ್ಞಾನಿಗಳು, ಸಂಶೋಧಕರು ಮತ್ತು ತಂತ್ರಜ್ಞರನ್ನು ರೂಪಿಸಲು ಉತ್ತಮ ವೇದಿಕೆಯಾಗಿವೆ. ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ, ಕುತೂಹಲ, ಪ್ರಯೋಗಶೀಲತೆ ಮತ್ತು ವೈಜ್ಞಾನಿಕ ದೃಷ್ಟಿಕೋನ ಬೆಳೆಸುವುದು ಇಂದಿನ ಶಿಕ್ಷಣದ ಪ್ರಮುಖ ಉದ್ದೇಶವಾಗಿದೆ.

            ಕಲಿಕೆಯನ್ನು ಅನುಭವಾಧಾರಿತವಾಗಿಸಿ, ವಿಜ್ಞಾನವನ್ನು ಜೀವನಕ್ಕೆ ಹತ್ತಿರವಾಗಿಸುವ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಭವಿಷ್ಯದ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿವೆ ಎಂದರು.    ಹಿರಿಯ ಉಪನ್ಯಾಸಕ ದೀಪಕ ಕುಲಕರ್ಣಿ ಮಾತನಾಡಿ ವಿದ್ಯಾರ್ಥಿಗಳಿಗೆ ತಮ್ಮ ತರಗತಿಯ ಕಲಿಕೆಯನ್ನು ಪ್ರಾಯೋಗಿಕವಾಗಿ ಅನ್ವಯಿಸಲು ಹಾಗೂ ಹೊಸ ಆಲೋಚನೆಗಳನ್ನು ಮಾದರಿಗಳ ರೂಪದಲ್ಲಿ ವ್ಯಕ್ತಪಡಿಸಲು ಪ್ರಯತ್ನಿಸಬೇಕು. ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಎದುರಾಗುವ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳುವತ್ತ ದೃಷ್ಟಿಹರಿಸಬೇಕು ಎಂದರು.  


ಸುದ್ದಿ ಓದಿ