ಜಮಖಂಡಿ

ಸಾವಿತ್ರಿಬಾಯಿ ಫುಲೆಯವರ ಆದರ್ಶವನ್ನು ಅಳವಡಿಸಿಕೊಳ್ಳಬೇಕು: ಪೂರ್ಣಿಮಾ ಮಾಳಿ

ಸಾವಿತ್ರಿಬಾಯಿ ಫುಲೆಯವರ ಆದರ್ಶವನ್ನು ಅಳವಡಿಸಿಕೊಳ್ಳಬೇಕು: ಪೂರ್ಣಿಮಾ ಮಾಳಿ

ಜಮಖಂಡಿ 06: ಅವಮಾನದ ನಂಜನ್ನು ಕುಡಿದು ಅಕ್ಷರದ ಜ್ಯೋತಿಯನ್ನು ಬೆಳಗಿದ, ಮೂಢನಂಬಿಕೆಯ  ಕುಣಿಕೆಯನ್ನು ಹರಿದ, ದೀನದಲಿತರ ಸೇವೆಗಾಗಿ ಬಾಳನ್ನು ಮುಡಿಪಾಗಿಟ್ಟ ಸಾವಿತ್ರಿಬಾಯಿ ಪುಲೆಯವರು ನಾವೆಲ್ಲರೂ ಅವರ ಆದರ್ಶವನ್ನು ಅಳವಡಿಸಿಕೊಳ್ಳಬೇಕು ಎಂದು ಸಾವಿತ್ರಿಬಾಯಿ ಪುಲೆ ಸಂಘದ ಅಧ್ಯಕ್ಷೆ ಪೂರ್ಣಿಮಾ ಮಾಳಿ ಹೇಳಿದರು.  

ನಗರದ ಮಾಳಿ ಸಮಾಜದ ಭವನದಲ್ಲಿ ನಡೆದ ಭಾರತದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಪುಲೆಯವರ ದಿನೋತ್ಸವದ  ಕಾರ್ಯಕ್ರಮದಲ್ಲಿ ಮಾತನಾದ ಅವರು, ಯಾವ ಸೌಕರ್ಯವೂ ಇಲ್ಲದ ಕಾಲದಲ್ಲಿ ಅಕ್ಷರದ ದೀಪವನ್ನು ದೀನದಲಿತರ ಎದೆಯಲ್ಲಿ ಹಚ್ಚಿದ ಸಾವಿತ್ರಿ ಬಾಯಿ ಪುಲೆಯವರಿಗೆ ಜ್ಯೋತಿಬಾ ಪುಲೆಯವರು ಬೆನ್ನೆಲುಬಾಗಿ ನಿಂತಿದ್ದರು. ಹತ್ತಾರು ಶಾಲೆಗಳನನ್ನು ತೆರೆದು ಮಹಿಳೆಯರ ಬಾಳನ್ನು ಬೆಳಗುವುದರ ಜೊತೆಗೆ ಅನಾಥರ ,ರೋಗಿಗಳ ಪಾಲಿಗೆ ಊರುಗೋಲಾಗಿದ್ದರು. ಎಂದರು. 

ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ಶಿಕ್ಷಕಿ ಚಂದ್ರಕಲಾ ತುಪ್ಪದ. ಸಾವಿತ್ರಿ ಬಾಯಿ ಪುಲೆಯವರು ಶಾಲೆಗೆ ಕಲಿಸಲು ಹೋಗುವಾಗ ಕಲ್ಲೇಟನ್ನು ತಿಂದರು, ಅವಮಾನವನ್ನು ಅನುಭವಿಸಿದರು. ಅದೆಲ್ಲವನ್ನು ಸನ್ಮಾನ ಎಂದು ಭಾವಿಸಿ ಸಮಾಜ ಸೇವೆಯನ್ನುಗೈದು ಇತಿಹಾಸವಾದರು. ಆದರೆ ಇಂದಿನ ಮಕ್ಕಳಿಗೆ ಎಲ್ಲ ಸೌಲಭ್ಯಗಳಿದ್ದು ಜೀವನದಲ್ಲಿ ಬರುವ ಸೋಲಿಗೆ ಅಂಜದೆ ಮುಂದೆ ಬರಬೇಕು ಎಂದರು. 

ಮಾಳಿಗಲ್ಲಿಯ ಯುವಕರು, ವಿದ್ಯಾರ್ಥಿಗಳು ಸೇರಿ ಸಾವಿತ್ರಿಬಾಯಿಯವರ ಕುರಿತು ಒಂದು ಚಿಕ್ಕ ಸಾಕ್ಷ್ಯ ಚಿತ್ರವನ್ನು ಯೂಟೂಬ್‌ನಲ್ಲಿ ಬಿಡುಗಡೆಗೊಳಿಸಿದರು. ಕಾವ್ಯಾ ಬಾಂಗಿ ಪ್ರಾರ್ಥಿಸಿದರು, ಸವಿತಾ ಮೆಂಡಿಗೇರಿ ಸ್ವಾಗತಿಸಿದರು, ಲಕ್ಷ್ಮೀ ಮಾಳಿ ನಿರೂಪಿಸಿ. ವಂದಿಸಿದರು. 

ಈ ಸಂದರ್ಭದಲ್ಲಿ  ಕಾಡಪ್ಪಾ ಮಾಳಿ, ಗುರುಪಾದಪ್ಪ ಮೆಂಡಿಗೆರಿ, ಶಿವಪ್ಪಾ ತಾನಪ್ಪಗೋಳ ಸೇರಿದಂತೆ ಮಹಿಳಾ ಸಂಘಗಳ ಪದಾಧಿಕಾರಿಗಳು ಇದ್ದರು.  

ಸುದ್ದಿ ಓದಿ