ಅಭಿಪ್ರಾಯ

ಡಾಲರ್ ಎದುರು ಕುಸಿದ ರೂಪಾಯಿ! ಸಂಪೂರ್ಣ ವಿಶ್ಲೇಷಣೆ…

ಡಾಲರ್ ಎದುರು ಕುಸಿದ ರೂಪಾಯಿ! ಸಂಪೂರ್ಣ ವಿಶ್ಲೇಷಣೆ…

ಮುಂಬೈ: ಜುಲೈ 19: ರೂಪಾಯಿ ಮಂಗಳವಾರ ಮೊದಲ ಬಾರಿಗೆ ಪ್ರತಿ ಡಾಲರ್‌ಗೆ 80ರ ಗಡಿ ದಾಟಿ ದುರ್ಬಲಗೊಂಡಿದೆ. ಕಳೆದ ಒಂದು ವರ್ಷದಲ್ಲಿ ರೂಪಾಯಿ ಮೌಲ್ಯದಲ್ಲಿ ಸುಮಾರು 7 ಪ್ರತಿಶತದಷ್ಟು ಕುಸಿತವಾಗಿದೆ.

ನಿನ್ನೆ ಅಂದರೆ ಸೋಮವಾರದ ವಹಿವಾಟಿಗೆ ಹೋಲಿಸಿದರೆ 79.9775 ಕುಸಿತಕಂಡು ಮಂಗಳವಾರ ಆರಂಭಿಕವಾಗಿ ಮಾರುಕಟ್ಟೆಯಲ್ಲಿ ಕರೆನ್ಸಿಯು ಪ್ರತಿ ಡಾಲರ್‌ಗೆ ರೂ. 80.0175ರಲ್ಲಿ ವಹಿವಾಟು ನಡೆಸುತ್ತಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ರೂಪಾಯಿ ಮಂಗಳವಾರ ಅಂದರೆ ಇಂದು 79.85 ರಿಂದ 80.15ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಬಹುದು ಎಂದು ಅಂದಾಜಿಸಿದ್ದಾರೆ.

ಡಿಸೆಂಬರ್ 2014 ರಿಂದ ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿಯ ಬೆಲೆಯು ಶೇಕಡಾ 25ರಷ್ಟು ಕುಸಿದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಹೇಳಿದ್ದರು. ಇತ್ತೀಚಿನ ದಿನಗಳಲ್ಲಿ ರೂಪಾಯಿ ಮೌಲ್ಯ ಕುಸಿತಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಕಳೆದ ಫೆಬ್ರವರಿಯಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವೇ ಕಾರಣ ಎಂದು ಹಣಕಾಸು ಸಚಿವರು ತಿಳಿಸಿದ್ದರು.

ಈ ಸಮಯದಲ್ಲಿ, ಕಳೆದ ಕೆಲವು ದಿನಗಳಲ್ಲಿ ಬ್ರಿಟಿಷ್ ಪೌಂಡ್, ಜಪಾನೀಸ್ ಯೆನ್ ಮತ್ತು ಯುರೋಪಿಯನ್ ಒಕ್ಕೂಟದ ಕರೆನ್ಸಿಯು ಭಾರತೀಯ ಕರೆನ್ಸಿಗಿಂತ ಯುರೋ ಡಾಲರ್ ಎದುರು ಹೆಚ್ಚು ದುರ್ಬಲವಾಗಿದೆ ಎಂದು ಹಣಕಾಸು ಸಚಿವರು ಹೇಳಿದ್ದರು. ಈ ದೇಶಗಳ ಕರೆನ್ಸಿಗೆ ಹೋಲಿಸಿದರೆ ಭಾರತೀಯ ಕರೆನ್ಸಿ ಬಲಗೊಂಡಿದೆ ಎಂದು ವಿತ್ತ ಸಚಿವೆ ತಿಳಿಸಿದ್ದರು.

ಮಾರುಕಟ್ಟೆ ತಜ್ಞರ ಪ್ರಕಾರ ಅಮೆರಿಕದಲ್ಲಿ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ರೂಪಾಯಿ ಕುಸಿಯುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ, ಯುರೋಪಿಯನ್ ಯೂನಿಯನ್ ಮಾರುಕಟ್ಟೆಗಳಲ್ಲಿನ ಹಿಂಜರಿತದಿಂದಾಗಿ ತಮ್ಮ ಬಂಡವಾಳವನ್ನು ವಾಪಸ್ ಪಡೆದು ಹೂಡಿಕೆಯ ಸುರಕ್ಷಿತ ತಾಣವಾದ ಅಮೆರಿಕದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಇದಕ್ಕಾಗಿಯೇ ಡಾಲರ್, ಯುರೋಪಿಯನ್ ಯೂನಿಯನ್ ಮತ್ತು ಏಷ್ಯಾದ ದೇಶಗಳ ಕರೆನ್ಸಿಗೆ ಹೋಲಿಕೆ ಮಾಡಿದಾಗ ಅಮೆರಿಕನ್ ಕರೆನ್ಸಿ ಸ್ಥಿರವಾಗಿ ಬಲಗೊಳ್ಳುತ್ತಿದೆ. ಅಮೆರಿಕದಲ್ಲಿ ಹೆಚ್ಚುತ್ತಿರುವ ಹಣದುಬ್ಬರದಿಂದ ಅಲ್ಲಿನ ಹೂಡಿಕೆದಾರರು ವಿದೇಶಗಳಿಂದ ಹೂಡಿಕೆ ಕಡಿಮೆ ಮಾಡಿ ದೇಶಿಯ ಮಾರುಕಟ್ಟೆಗೆ ಹಾಕುತ್ತಿರುವುದರಿಂದ ಡಾಲರ್ ಬಲಗೊಳ್ಳುತ್ತಿದೆ.

ಕೆಲ ದಿನ ರೂಪಾಯಿಯ ಮೇಲೆ ಒತ್ತಡ
ಮಾರುಕಟ್ಟೆ ತಜ್ಞರ ಪ್ರಕಾರ, ಕೆಲವು ದಿನಗಳವರೆಗೆ ರೂಪಾಯಿ ಮೇಲೆ ಸ್ವಲ್ಪ ಒತ್ತಡವಿರುತ್ತದೆ. ಆದರೆ ದೇಶವು ಉತ್ತಮವಾದ ಫಾರೆಕ್ಸ್ ಮೀಸಲು ($ 575 ಮಿಲಿಯನ್) ಹೊಂದಿದೆ. ಈ ಕಾರಣದಿಂದಾಗಿ ರಿಸರ್ವ್ ಬ್ಯಾಂಕ್ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಶೀಘ್ರದಲ್ಲೇ ಆರ್‌ಬಿಐ ಈ ವಿಷಯದಲ್ಲಿ ಮಧ್ಯಪ್ರವೇಶಿಸಲಿದೆ ಎಂದು ಮೂಲಗಳು ತಿಳಿಸಿವೆ.

ಒಂದು ತಿಂಗಳಲ್ಲಿ ರೂಪಾಯಿ ಮೌಲ್ಯ:
19 ಜುಲೈ – 80.01 / ಡಾಲರ್
14 ಜುಲೈ – 79.94 / ಡಾಲರ್
13 ಜುಲೈ – 79.68 / ಡಾಲರ್
12 ಜುಲೈ – 79.65 / ಡಾಲರ್
5 ಜುಲೈ  – 79.37 / ಡಾಲರ್
1 ಜುಲೈ – 79.12 / ಡಾಲರ್
28 ಜೂನ್ -78.57 / ಡಾಲರ್
22 ಜೂನ್-78.39 / ಡಾಲರ್

ಕಚ್ಚಾ ತೈಲ ಬೆಲೆಯಿಂದ ದುರ್ಬಲ :
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳವಾಗುತ್ತಿರುವುದರಿಂದ ರೂಪಾಯಿ ಮೌಲ್ಯದ ಕುಸಿತಕ್ಕೆ ಕಾರಣವಾಗಿದೆ. ಕಚ್ಚಾ ತೈಲ ಉತ್ಪಾದನೆ ಹೆಚ್ಚಿಸುವುದಾಗಿ ಸೌದಿ ಅರೇಬಿಯಾ ಒಪ್ಪಿಕೊಂಡಿತ್ತು. ಆದರೆ, ಈ ಭರವಸೆಯನ್ನು ಸೌದಿ ಅರೇಬಿಯಾ ಪೂರೈಸಲು ವಿಫಲವಾದ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳಲ್ಲಿ ಶೇಕಡಾ ಐದು ರಷ್ಟು ಜಿಗಿತವಾಗಿದೆ.

ಇದರಿಂದಾಗಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಸೌದಿ ಅರೇಬಿಯಾ ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರಿಗೆ ನೀಡಿದ ಭರವಸೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಮಾರುಕಟ್ಟೆಯಲ್ಲಿ ಕಚ್ಚಾ ತೈಲವು ದುಬಾರಿಯಾಗುತ್ತಿದೆ. ಕಚ್ಚಾ ತೈಲವು ದುಬಾರಿಯಾಗುತ್ತಿದ್ದಂತೆ, ಡಾಲರ್ ಬಲಗೊಳ್ಳುತ್ತಿದೆ ಮತ್ತು ರೂಪಾಯಿ ದುರ್ಬಲಗೊಳ್ಳುತ್ತಿದೆ.

ಸುದ್ದಿ ಓದಿ