ದೇಸಾಯಿ ಕೋಟೆಯ ಪರಿಸರ ವ್ಯವಸ್ಥಿತವಾಗಿಡಲು ಆಗ್ರಹಿಸಿ ಮನವಿ
ಸವದತ್ತಿ 05: ಪಟ್ಟಣದ ಮದ್ಯಭಾಗದಲ್ಲಿನ ದೇಸಾಯಿ ಕೋಟೆಯು ಕ್ರಮೇಣ ನಿರ್ಲಕ್ಷಕ್ಕೊಳಗಾಗುತ್ತಿದ್ದು, ಅಭಿವೃದ್ಧಿಯತ್ತ ಅಧಿಕಾರಿಗಳು ಗಮನ ಹರಿಸಬೇಕೆಂದು ಒತ್ತಾಯಿಸಿ ಪಟ್ಟಣದ ಯುವಕರು ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಪ್ರಸಿದ್ಧಿಯಾಗಿರುವ ಕೋಟೆಯನ್ನು ರಕ್ಷಣೆ ಮಾಡುವ ಕರ್ತವ್ಯ ನಮ್ಮೆಲ್ಲರ ಮೇಲಿದ್ದು, ಇಲ್ಲಿ ಕಾವಲುಗಾರರು ಇಲ್ಲದೆ ಇರುವುದರಿಂದ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ. ರಾತ್ರಿ ಕುಡುಕರ ಹಾವಳಿ ಹೆಚ್ಚಾಗುತ್ತಿದ್ದು, ಅಲ್ಲಿ ಪ್ರಸಿದ್ಧವಾದ ಶ್ರೀ ಕಾಡಶಿದ್ದೇಶ್ವರ ದೇವಸ್ಥಾನವಿರುವದರಿಂದ ಇಲ್ಲಿನ ಪರಿಸರವನ್ನು ವ್ಯವಸ್ಥಿತವಾಗಿ ಕಾಪಾಡಬೇಕಿದೆ. ಕೋಟೆಯ ಆವರಣದಲ್ಲಿ ಉತ್ತಮವಾದಂತ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಿದೆ. ಅನೇಕ ಪ್ರವಾಸಿಗರು ಕೋಟೆಗೆ ಭೇಟಿ ನೀಡುತ್ತಿದ್ದು, ಕೋಟೆಯ ಒಳಾಂಗಣದಲ್ಲಿ ಶಾಲಾ ವಿದ್ಯಾರ್ಥಿಗಳು ಓದಲು ಬರುತ್ತಿರುವದರಿಂದ ಇಲ್ಲಿ ಉತ್ತಮ ಶೌಚಾಲಯಗಳನ್ನು ನಿರ್ಮಿಸಬೇಕಿದೆ. ಕೋಟೆಯ ಆವರಣದಲ್ಲಿ ಅನೈತಿಕ ಚಟುವಟಿಕೆಗಳನ್ನು ತಡೆಯುವಲ್ಲಿ ಪೊಲೀಸ್ ಇಲಾಖೆಯವರು ನಿಗಾವಹಿಸಬೇಕು ಎಂದು ಸ್ಥಳೀಯ ಯುವಕರು ಪುರಸಭೆ ಮುಖ್ಯಾಧಿಕಾರಿಗಳಿಗೆ ಹಾಗೂ ಸವದತ್ತಿ ಪೋಲಿಸ ಠಾಣೆಯ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದಾರೆ.
ದೇವಸ್ಥಾನದ ಅರ್ಚಕ ರಾಜು ಅಳಗವಾಡಿ, ಪ್ರಜ್ವಲ್ ಕುಲಕರ್ಣಿ, ಮಲ್ಲಿಕಾರ್ಜುನ ಕಲ್ಲೂರ, ಸಂಜು ಬಾಚಗುಂಡಿ, ಸಂಜು ಹಾದಿಮನಿ, ಪ್ರವಿಣ ಮ್ಯಾಕಲ್ಮರಡಿ, ಶ್ರೀಧರ ಮೊರಬದ, ಈಶ್ವರ ಕಗದಾಳ, ದರ್ಶನ ಕಾಳಗಿ, ವಿಜಯ ಚರಂತಿಮಠ, ಅರುಣಸಿಂಗ ರಜಪೂತ, ಕಾರ್ತಿಕ ಕುಲಕರ್ಣಿ, ಪ್ರವೀಣ ಕರಿಗಾರ ಉಪಸ್ಥಿತರಿದ್ದರು.