ಎಳ್ಳು-ಬೆಲ್ಲ ವಿನಿಮಯದಿಂದ ಬಾಂಧವ್ಯ ವೃದ್ಧಿ: ಮಟೋಳಿ
ಜಮಖಂಡಿ 16: ನಿಸರ್ಗದ ಬದಲಾವಣೆಗಳ ಜೊತೆಗೆ ನಮ್ಮ ವರ್ತನೆಗಳಲ್ಲೂ ಬದಲಾವಣೆಗಳು ಬರಬೇಕು. ಮಕರ ಸಂಕ್ರಮಣದ ಶುಭ ಗಳಿಗೆಯಲ್ಲಿ ಸಮತೆ ಮತ್ತು ಸೈರಣೆಯನ್ನು ತಂದುಕೊಳ್ಳಬೇಕು ಎಂದು ನಿವೃತ್ತ ಪ್ರಾಚಾರ್ಯ ಡಾ.ಸಂಗಮೇಶ ಮಟೋಳಿ ಹೇಳಿದರು.
ಮಕರ ಸಂಕ್ರಮಣದ ಅಂಗವಾಗಿ ಸಾಹಿತ್ಯ ಸೌರಭ ವೇದಿಕೆಯ ಆಶ್ರಯದಲ್ಲಿ ಇಲ್ಲಿನ ಕಚೇರಿ ರಸ್ತೆ ಪಕ್ಕದ ಹೊಸಟ್ಟಿ ಕಟ್ಟಡದಲ್ಲಿ ಹಮ್ಮಿಕೊಂಡಿದ್ದ ಕವನ ವಾಚನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಳ್ಳು-ಬೆಲ್ಲವನ್ನು ವಿನಿಮಯ ಮಾಡಿಕೊಳ್ಳುವುದರಿಂದ ಬಾಂಧವ್ಯ ವೃದ್ಧಿಸುತ್ತದೆ. ಎಳ್ಳು-ಬೆಲ್ಲ ತಿನ್ನುವುದರಿಂದ ಆಂತರಿಕ ಶುದ್ಧಿಯಾಗುವುದರ ಜೊತೆಗೆ ಚೈತನ್ಯ ಹೆಚ್ಚಾಗುತ್ತದೆ. ಕವಿಗಳು ಎಲೆ ಮರೆಯ ಕಾಯಿಯಂತಾಗದೆ ಕಣ್ಣಿಗೆ ಕಾಣುವ ಹಣ್ಣುಗಳಾಗಬೇಕು ಎಂದರು.
ಬಸವಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬದಲಾವಣೆ ಜಗದ ನಿಯಮ. ಆದ್ದರಿಂದ ಬದುಕು ನಿಂತ ನೀರಾಗಬಾರದು. ನಿಂತ ನೀರು ಸೋಮಾರಿತನದ ಸಂಕೇತವಾಗಿದೆ. ಸದಾ ಸಕ್ರಿಯರಾಗಿರಬೇಕು. ಅಂದಾಗ ಬದುಕಿನ ನಿಜವಾದ ಅರ್ಥ ತಿಳಿಯುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಕೀಲ ಡಾ.ಟಿ.ಪಿ. ಬಾಂಗಿ, ಅಥಣಿಯ ನಿವೃತ್ತ ಶಿಕ್ಷಕ ಪ್ರಕಾಶ ಖೋತ ಹಾಗೂ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಉಪಪ್ರಾಚಾರ್ಯ ಮಹಾಂತೇಶ ನರಸನಗೌಡ್ರ, ಸಾಹಿತಿ ಬಾಹುಬಲಿ ಬಿರದಾರಪಾಟೀಲ, ಚುಟುಕು ಸಾಹಿತಿ ನೀ ಶ್ರೀಶೈಲ, ಮುಖ್ಯ ಶಿಕ್ಷಕ ನಾರಾಯಣ ಶಾಸ್ತ್ರಿ, ಭಾಗ್ಯಶ್ರೀ ಕೋಟಿ, ಶ್ರೀಶೈಲ ಬಡಿಗೇರ, ಉಪನ್ಯಾಸಕ ಪ್ರವೀಣ ಕುಲಕರ್ಣಿ, ನಿವೃತ್ತ ಮುಖ್ಯ ಶಿಕ್ಷಕ ಎಂ.ಡಿ. ಸಂಖ, ನಿವೃತ್ತ ತಹಶೀಲ್ದಾರ್ ರಾಜಶೇಖರ ಹಿರೇಮಠ ಸ್ವರಚಿತ ಕವನಗಳನ್ನು ವಾಚಿಸಿದರು.
ಬಿ.ಎಂ. ಕೋಟೆನ್ನವರ, ಬಿ.ಎನ್. ಅಸ್ಕಿ ಪ್ರಾರ್ಥನೆ ಗೀತೆ ಹಾಡಿದರು. ಸಾಹಿತ್ಯ ಸೌರಭ ವೇದಿಕೆಯ ಸಂಚಾಲಕ ಆರ್.ಕೆ. ಹೊಸಟ್ಟಿ ಸ್ವಾಗತಿಸಿದರು. ಬಸವರಾಜ ಗಿರಗಾಂವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನೋದ ಬಿರಾದಾರ ನಿರೂಪಿಸಿದರು. ಉಪನ್ಯಾಸಕ ಎಸ್.ಎಂ. ಕುಂಬಾರ ವಂದಿಸಿದರು.