ಗೋಕಾಕ್

ಗೋಕಾಕ ರಸ್ತೆ, ಘಟಪ್ರಭಾ ಅಮೃತ ಭಾರತ ನಿಲ್ದಾಣಗಳಾಗಿ ಪುನರಾಭಿವೃದ್ಧಿ: ಕಡಾಡಿ

ಗೋಕಾಕ ರಸ್ತೆ, ಘಟಪ್ರಭಾ ಅಮೃತ ಭಾರತ ನಿಲ್ದಾಣಗಳಾಗಿ ಪುನರಾಭಿವೃದ್ಧಿ: ಕಡಾಡಿ

ಲೋಕದರ್ಶನ ವರದಿ

ಘಟಪ್ರಭಾ 07: ಭಾರತೀಯ ರೈಲ್ವೆ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಬಡ ಜನರಿಗೂ ಕೂಡಾ ರೈಲು ನಿಲ್ದಾಣಗಳಲ್ಲಿ ಉತ್ತಮ ಸೌಲಭ್ಯಗಳನ್ನು ನೀಡುವ ಉದ್ದೇಶದಿಂದ ಘಟಪ್ರಭಾ ಹಾಗೂ ಗೋಕಾಕ ರೋಡ್ ರೈಲು ನಿಲ್ದಾಣಗಳನ್ನು ಅಮೃತ ಭಾರತ ನಿಲ್ದಾಣಗಳನ್ನಾಗಿ ಗುರುತಿಸಿ ಪುನರಾಭಿವೃದ್ಧಿ ಪಡಿಸಲಾಗುತ್ತಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ನೈರುತ್ಯ ರೈಲ್ವೆ ಸಲಹಾ ಸಮಿತಿ ಸದಸ್ಯ ಈರಣ್ಣ ಕಡಾಡಿ ಹೇಳಿದರು.

  ಅವರು ರವಿವಾರ ಮುಂಜಾನೆ 9 ಗಂಟೆಗೆ ರೈಲ್ವೆ ಇಲಾಖೆಯಿಂದ ಘಟಪ್ರಭಾ ರೈಲು ನಿಲ್ದಾಣದ ಆವರಣದಲ್ಲಿ ಹಮ್ಮಿಕೊಂಡ ಅಮೃತ ಭಾರತ ಸ್ಟೇಷನ್ ಯೋಜನೆಯಡಿ ದೇಶದ ಒಟ್ಟು 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಮಾಡುತ್ತ, ಪ್ರಧಾನಿ ನರೇಂದ್ರ ಮೋದಿಯವರು ದೇಶ ಅಭಿವೃದ್ಧಿಗಾಗಿ ಗ್ರಾಮೀಣ ಭಾಗದ ರೈಲು ನಿಲ್ದಾಣಗಳ ಅಭಿವೃದ್ಧಿಯು ಅತೀ ಮುಖ್ಯವಾಗಿದೆ. ಆದ್ದರಿಂದ ದೇಶದಲ್ಲಿ ಪುನರಾಭಿವೃದ್ಧಿಗೆ  ಆಯ್ಕೆ ಮಾಡಿದ 508 ರೈಲು ನಿಲ್ದಾಣಗಳ ಪೈಕಿ ಘಟಪ್ರಭಾ ರೈಲು ನಿಲ್ದಾಣ ಆಯ್ಕೆಯಾಗಿದ್ದು, ರೈಲು ನಿಲ್ದಾಣದ ಜೊತೆಗೆ ಪಟ್ಟಣದ ಅಭಿವೃದ್ಧಿ ಕೂಡಾ ಆಗಲಿದೆ ಎಂದು ಹೇಳಿದರು. 

ಬೆಳಗಾವಿ ಲೋಕಸಭಾ ಸದಸ್ಯೆ ಮಂಗಲಾ ಅಂಗಡಿ ಮಾತನಾಡಿ, ದಿ. ಸುರೇಶ ಅಂಗಡಿಯವರು ಅನೇಕ ಯೋಜನೆಗಳನ್ನು ತರುವ ಮೂಲಕ ಘಟಪ್ರಭಾ ರೈಲು ನಿಲ್ದಾಣದ ಅಭಿವೃದ್ಧಿಗೆ ಶ್ರಮಿಸಿದ್ದರು. ಅಮೃತ ಭಾರತ ಯೋಜನೆಗೆ ಘಟಪ್ರಭಾ ರೈಲು ನಿಲ್ದಾಣ ಆಯ್ಕೆಯಾಗಿ ಇನ್ನಷ್ಟು ಅಭಿವೃದ್ಧಿ ಅಗುತ್ತಿರುವುದು ಸೋತೋಷದ ವಿಷಯವಾಗಿದೆ ಎಂದರು.  

ಪ್ರಾಸ್ತಾವಿಕವಾಗಿ ಮಾತನಾಡಿದ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿ ಅನುಪ ಸಾಧು ಅವರು ಸುಮಾರು 18 ಕೋಟಿ ರೂ.ವೆಚ್ಚದಲ್ಲಿ ಘಟಪ್ರಭಾ ರೈಲು ನಿಲ್ದಾಣವನ್ನು ಪುನರಾಭಿವೃದ್ಧಿಗೊಳಿಸಲಾಗುತ್ತಿದ್ದು, ಕೆಲವೆ ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಅಮೃತ ಭಾರತ ನಿಲ್ದಾಣ ಯೋಜನೆಯಡಿ ನಿಲ್ದಾಣದಲ್ಲಿ ಚಿಲ್ಲರೆ ಮಾರಾಟ ಮಳಿಗೆಗಳು, ಆಹಾರ ಮಳಿಗೆಗಳು, ಮನರಂಜನೆ ಕೇಂದ್ರಗಳು ಮತ್ತು ಪ್ರಯಾಣಿಕರ ಸುಸಜ್ಜಿತ ತಂಗುದಾಣ, ಉಚಿತ ವೈಫೈ, ಅಂಗವಿಕರಿಗೆ, ವೃದ್ದರಿಗೆ ಲಿಫ್ಟ್ ಜೊತೆಗೆ ಸುಸಜ್ಜಿತ ಪಾರ್ಕಿಂಗ್  ವ್ಯವಸ್ಥೆ ಇರಲಿದೆ ಎಂದರು. 

ರಾಯಬಾಗ ಶಾಸಕರಾದ ಧುರ್ಯೋಧನ ಐಹೊಳಿ, ಖಾನಾಪೂರ ಶಾಸಕ ವಿಠ್ಠಲ ಹಲಗೇಕರ ಮಾತನಾಡಿದರು. ರೈಲ್ವೆ ಇಲಾಖೆಯಿಂದ ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಘಟಪ್ರಭಾ ರೈಲು ನಿಲ್ದಾಣ ಆಯ್ಕೆಯಾದ ಕುರಿತು ಸ್ಥಳೀಯ ಶಾಲಾ ಕಾಲೇಜುಗಳಲ್ಲಿ ನಡೆಸಲಾದ ನಿಬಂಧ ಹಾಗೂ ಸಾಂಸ್ಕ್ರತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾಥರ್ಿಗಳಿಗೆ ಗಣ್ಯರಿಂದ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ  ನೀಡಲಾಯಿತು.

ಪ್ರಧಾನಿ ನರೇಂದ್ರ ಮೋದಿಯವರು ವೀಡಿಯೋ (ವರ್ಚುವಲ್) ಮೂಲಕ 508 ರೈಲ್ವೆ ಸ್ಟೇಶನಗಳ ಅಡಿಗಲ್ಲು ಸಮಾರಂಭ ನೆರವೇರಿಸಿದ ನಂತರ ಗಣ್ಯರಿಂದ ರೈಲು ನಿಲ್ದಾಣದ ಆವರಣದಲ್ಲಿ ಘಟಪ್ರಭಾ ಸ್ಟೇಶನದ ಅಡಿಗಲ್ಲು ಸಮಾರಂಭ ನೆರವೇರಿಸಿದರು. 

ಮಾಜಿ ಶಾಸಕ ಎಮ್.ಎಲ್. ಮುತ್ತೆನ್ನವರ,  ಕೆ.ಎಚ್.ಐ ಆಸ್ಪತ್ರೆಯ ವೈದ್ಯಾಧಿಕಾರಿ ಸ್ವಾತಿ ವೈದ್ಯ, ಪುರಸಭೆ ಮುಖ್ಯಾಧಿಕಾರಿ ಎಂ.ಎಸ್.ಪಾಟೀಲ,ರೈಲ್ವೆ ಬೋರ್ಡ ಸದಸ್ಯ ಸುರೇಶ ಪಾಟೀಲ ಉಪಸ್ಥಿತರಿದ್ದರು 

ಸುದ್ದಿ ಓದಿ