ಇಂಡಿಯಲ್ಲಿ ಹೆಚ್ಚುತ್ತಿರುವ ಚೈನೀಸ್ ಫಾಸ್ಟ್ಫುಡ್ ಅಂಗಡಿಗಳು: ಆಹಾರ ಸುರಕ್ಷತೆ ಬಗ್ಗೆ ಸಾರ್ವಜನಿಕರ ಆತಂಕ

ಇಂಡಿಯಲ್ಲಿ ಹೆಚ್ಚುತ್ತಿರುವ ಚೈನೀಸ್ ಫಾಸ್ಟ್ಫುಡ್ ಅಂಗಡಿಗಳು: ಆಹಾರ ಸುರಕ್ಷತೆ ಬಗ್ಗೆ ಸಾರ್ವಜನಿಕರ ಆತಂಕ  Proliferation of Chinese Fast-Food Stalls in Indi: Public Concern Over Food Safety

ಇಂಡಿ 02 : ಪಟ್ಟಣ ಹಾಗೂ ತಾಲೂಕಿನ ವಿವಿಧ ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಚೈನೀಸ್ ಫಾಸ್ಟ್ಫುಡ್ ಅಂಗಡಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಆಹಾರದ ಗುಣಮಟ್ಟ, ಸ್ವಚ್ಛತೆ ಹಾಗೂ ಆಹಾರ ಸುರಕ್ಷತಾ ನಿಯಮಗಳ ಪಾಲನೆ ಕುರಿತು ಸಾರ್ವಜನಿಕರಲ್ಲಿ ಆತಂಕ ವ್ಯಕ್ತವಾಗುತ್ತಿದೆ.  

ಸಂಜೆ ವೇಳೆಯಲ್ಲಿ ರಸ್ತೆ ಬದಿ ಹಾಗೂ ಪ್ರಮುಖ ವೃತ್ತಗಳಲ್ಲಿ ಕಾರ್ಯನಿರ್ವಹಿಸುವ ಅನೇಕ ಫಾಸ್ಟ್ಫುಡ್ ಅಂಗಡಿಗಳಲ್ಲಿ ನೂಡಲ್ಸ್‌, ಫ್ರೈಡ್ ರೈಸ್, ಗೋಬಿ ಮಂಚೂರಿಯನ್ ಸೇರಿದಂತೆ ವಿವಿಧ ಖಾದ್ಯಗಳನ್ನು ಮಾರಾಟ ಮಾಡಲಾಗುತ್ತಿದೆ. ಕೆಲವು ಅಂಗಡಿಗಳಲ್ಲಿ ಕೃತಕ ಬಣ್ಣ, ಅಧಿಕ ಪ್ರಮಾಣದ ರುಚಿ ವರ್ಧಕ   ಹಾಗೂ ಮರುಬಳಕೆಯ ಅಡುಗೆ ಎಣ್ಣೆ ಬಳಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.  

ಆರೋಗ್ಯ ತಜ್ಞರ ಪ್ರಕಾರ, ಇಂತಹ ಆಹಾರವನ್ನು ನಿರಂತರವಾಗಿ ಸೇವಿಸುವುದರಿಂದ ಜೀರ್ಣಾಂಗ ಸಮಸ್ಯೆಗಳು, ಗ್ಯಾಸ್ಟ್ರಿಕ್, ಅಲ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಇತರೆ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು. ಆದ್ದರಿಂದ ಸಾರ್ವಜನಿಕರು ಇಂತಹ ಆಹಾರದ ಸೇವನೆಯಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಲಾಗಿದೆ.  

ಕೆಲವು ಫಾಸ್ಟ್ಫುಡ್ ಕೇಂದ್ರಗಳು ಅಗತ್ಯ ಆಹಾರ ಸುರಕ್ಷತಾ ಪರವಾನಗಿ ಪಡೆದುಕೊಂಡಿವೆಯೇ, ಸ್ವಚ್ಛತಾ ನಿಯಮಗಳನ್ನು ಪಾಲಿಸುತ್ತಿವೆಯೇ ಎಂಬ ಬಗ್ಗೆ ಪರೀಶೀಲನೆ ನಡೆಸುವಂತೆ ಸಾರ್ವಜನಿಕರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಗೆ ಮನವಿ ಮಾಡಿದ್ದಾರೆ.  

ಈ ಕುರಿತು ಹಿರಿಯ ವೈದ್ಯರು ಹಾಗೂ ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ ಮಾತನಾಡಿ, ಕೃತಕ ಬಣ್ಣ, ಅಧಿಕ ಪ್ರಮಾಣದ ಎಂಎಸ್ಜಿ ಮತ್ತು ಟ್ರಾನ್ಸ್ಫ್ಯಾಟ್ ಹೊಂದಿರುವ ಆಹಾರವನ್ನು ಹೆಚ್ಚಾಗಿ ಸೇವಿಸುವುದರಿಂದ ದೀರ್ಘಾವಧಿಯಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ಸಾರ್ವಜನಿಕರು ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸಬೇಕು. ಜೊತೆಗೆ, ಆಹಾರ ಸುರಕ್ಷತಾ ಇಲಾಖೆ ನಿಯಮಿತ ತಪಾಸಣೆ ನಡೆಸಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.