ನರೇಗಾ ಕೂಲಿ ಕಾರ್ಮಿಕರು ಗೂಳೆ ಹೋಗದಂತೆ ಎಚ್ಚರವಹಿಸಿ : ಇಓ ಗಂಗಾಧರ ಕಂದಕೂರ ಸೂಚನೆ
ಬೈಲಹೊಂಗಲ 16: ತಾಲೂಕ ಪಂಚಾಯತ ಸಭಾಂಗಣದಲ್ಲಿ ಇಂದು ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ ರವರ ಅಧ್ಯಕ್ಷತೆಯಲ್ಲಿ ಎಲ್ಲಾ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ವಿವಿಧ ಯೋಜನೆಗಳ ಪ್ರಗತಿ ಪರೀಶೀಲನಾ ಸಭೆಯನ್ನು ಹಮ್ಮಿಕೊಂಡಿದ್ದರು. ಪ್ರಸ್ತುತ ದಿನದಲ್ಲಿ ಬರಗಾಲ ಇರುವುದರಿಂದ ಗ್ರಾಮೀಣ ಪ್ರದೇಶದಲ್ಲಿನ ಜನರು ಬೇರೆ-ಬೇರೆ ನಗರ-ಪಟ್ಟಣಗಳಿಗೆ (ವಲಸೆ) ಗೂಳೆ ಹೋಗದಂತೆ ಎಚ್ಚರವಹಿಸಿ ಎಂದು ತಾಪಂ ಇಓ ಗಂಗಾಧರ ಕಂದೂಕರ ಸೂಚಿಸಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬೇಡಿಕೆ ಅಭಿಯಾನವನ್ನು ಈಗಾಗಲೇ ಪ್ರಾರಂಭಿಸಿದ್ದು ಬೇಡಿಕೆ ಸಲ್ಲಿಸಿರುವ ಪ್ರತಿಯೊಂದು ಕುಟುಂಬಕ್ಕೆ 15 ದಿನಗಳ ಒಳಗಡೆ ಕೂಲಿ ಕೆಲಸವನ್ನು ನೀಡುವುದರ ಮೂಲಕ ಅವಕಾಶ ಮಾಡಿಕೊಡಬೇಕು ಎಂದರು ತದನಂತರ ಪ್ರತಿಯೊಂದು ಕಾಮಗಾರಿ ಸ್ಥಳದಲ್ಲಿ ಮಹಿಳೆಯರು, ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರು ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ನೀರಿನ ಅಭಾವ ಹೆಚ್ಚಾಗುತ್ತಿದ್ದು ತ್ವರಿತಗತಿಯಲ್ಲಿ ಕುಡಿಯುವ ನೀರಿನ ಟ್ಯಾಂಕರಗಳ ಮೂಲಕ ಕುಡಿಯುವ ನೀರನ್ನು ಒದಗಿಸಿ ಸಮಸ್ಯೆಯಾಗದಂತೆ ಎಚ್ಚರವಹಿಸಿ ಮತ್ತು ಓಣಿಗಳಲ್ಲಿ ಹಾಗೂ ರಸ್ತೆಗಳಲ್ಲಿ ನೀರಿನ ಪೈಪಗಳು ಸೊರಿಕೆಯಾಗದಂತೆ ಹಾಗೂ ನೀರು ಪೋಲಾಗದಂತೆ ಎಚ್ಚರವಹಿಸಿ ಸಮಯಕ್ಕೆ ಸರಿಯಾಗಿ ನೀರು ಗಂಟಿ ನೀರು ಬಿಡುವುದು ಮತ್ತು ನೀರಿನ ಟ್ಯಾಂಕರಗಳನ್ನು ಸ್ವಚ್ಛವಾಗಿಡಿ ಎಂದು ತಿಳಿಸಿದರು.
ಕಸ ವಿಲೇವಾರಿ ಘಟಗಳು ಈಗಾಗಲೇ ಪ್ರಾರಂಭವಿದ್ದು ಅದೇ ರೀತಿಯಲ್ಲಿ ಗ್ರಾಮೀಣ ಪ್ರದೇಶಗಳನ್ನು ಸ್ವಚ್ಛವಾಗಿಡಲು ಕಸ ವಿಲೇವಾರಿ ವಾಹನಗಳು ಪ್ರತಿದಿನ ಓಣಿಗಳಲ್ಲಿ ಸಂಚರಿಸಬೇಕು ಅದರಿಂದ ಬಂದಿರುವ ಕಸವನ್ನು ಬೇರಿ್ಡಸುವ ಕೆಲಸವನ್ನು ಸ್ಚಚ್ಛತಾಗಾರರು ನಿರ್ವಹಿಸಬೇಕು ಎಂದು ಕರೆ ನೀಡಿದರು.
ಪ್ರತಿಯೊಂದು ಗ್ರಾಮ ಹಾಗೂ ಪಂಚಾಯತಿಗಳಲ್ಲಿ ಲೋಕಸಭಾ ಚುನಾವಣೆಯ ಮತದಾನದ ಜಾಗೃತಿಗಳನ್ನು ಮಾಡುವ ಮೂಲಕ ಜನ ಜಾಗೃತಿ ಕಡ್ಡಾಯವಾಗಿ ಮಾಡಿ ವರದಿ ಮಾಡಿಕೊಳ್ಳುವಂತೆ ತಿಳಿಸಿದರು.
ವಿಜಯ ಪಾಟೀಲ ಸಹಾಯಕ ನಿರ್ದೇಶಕ (ಗ್ರಾ.ಉ) ರಘು ಬಿ ಎನ್ ಸಹಾಯಕ ನಿರ್ದೇಶಕ (ಪಂ.ರಾಜ್) ರಾಜಶೇಖರ ಕಡೆಮನಿ ತಾಪಂ ಯೋಜನಾಧಿಕಾರಿ, ಎಲ್ಲಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇತರರು ಹಾಜರಿದ್ದರು.