ಗಂಗಾವತಿ

ಸಮೃದ್ಧ ಪರಿಸರದಿಂದ ಕೃಷಿಯಲ್ಲಿ ಪ್ರಗತಿ ಸಾಧ್ಯ: ಸಹದೇವ ಯರಗೊಪ್ಪ

ಸಮೃದ್ಧ ಪರಿಸರದಿಂದ ಕೃಷಿಯಲ್ಲಿ ಪ್ರಗತಿ ಸಾಧ್ಯ: ಸಹದೇವ ಯರಗೊಪ್ಪ

ಗಂಗಾವತಿ 26: ಪರಿಸರ ಬಗೆಗಿನ ನಿರ್ಲಕ್ಷ್ಯ ದೂರ ಮಾಡಿ ಪರಿಸರ ಕಾಳಜಿ ಹೊಂದಬೇಕಾಗಿದೆ. ಅರಣ್ಯ ಸಂಪತ್ತು ವೃದ್ಧಿಯಾದರೆ ಪರಿಸರ ಸಮೃದ್ಧವಾಗಲಿದೆ. ದಿನಕಳೆದಂತೆ ಪರಿಸರ ನಾಶದ ದುಷ್ಕೃತ್ಯಗಳು ಹೆಚ್ಚುತ್ತಿದ್ದು ಮುಂದಿನ ದಿನಗಳಲ್ಲಿ ಇದಕ್ಕೆ ಬಾರಿ ಬೆಲೆ ತೆರಬೇಕಾಗುತ್ತದೆ. ಪರಿಸರ ಸಮೃದ್ಧವಾಗಿದ್ದರೆ ಮಾತ್ರ ಕೃಷಿಯಲ್ಲಿ ಪ್ರಗತಿ ಕಾಣಲು ಸಾಧ್ಯವಾಗುತ್ತದೆ ಎಂದು ಉಪ ಕೃಷಿ ನಿರ್ದೇಶಕರಾದ ಸಹದೇವ ಯರಗೊಪ್ಪ ಅವರು ಹೇಳಿದರು. 

ಸ್ಥಳೀಯ ಜಯನಗರದ ಐಐಎಸ್‌ಎಜಿ ರೈತ ಉತ್ಪಾದಕರ ಕಂಪನಿಯ 2ನೇ ವಾರ್ಷಿ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೃಷಿ ಮತ್ತು ಕುರಿ, ಮೇಕೆ ಸಾಕಾಣಿಕೆ ಸಾಂಪ್ರದಾಯಿಕ ಪದ್ಧತಿಯಾಗಿದ್ದು, ಬದಲಾವಣೆಗೆ ತಕ್ಕಂತೆ ರೈತರು ಹೊಂದಿಕೊಳ್ಳಬೇಕಾಗಿದೆ. ಸದ್ಯ ರೈತರಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಅಂತವುಗಳಲ್ಲಿ ರೈತ ಉತ್ಪಾದಕರ ಕಂಪನಿಗಳು ಪ್ರಗತಿಗೆ ಅನುಕೂಲವಾಗಿವೆ. ರೈತ ರೈತನಾಗದೇ ಉದ್ಯಮಿಯನ್ನಾಗಿಸುವ ನಿಟ್ಟಿನಲ್ಲಿ ರೈತ ಉತ್ಪಾದಕರ ಕಂಪನಿಗಳನ್ನ ಪ್ರಾರಂಭಿಸಲಾಗಿದೆ. ರೈತರು ಸದುಪಯೋಗ ಪಡೆದುಕೊಳ್ಳುವ ಮೂಲಕ ಕೃಷಿಯೊಂದಿಗೆ ಕುರಿ ಮೇಕೆ, ಪಶು, ಕೋಳಿ ಸಾಕಾಣಿಕೆ ಮಾಡಿದರೆ ಉತ್ತಮ ಲಾಭ ಪಡೆಯಬಹುದು ಎಂದು ವಚನಗಳೊಂದಿಗೆ ವೈಚಾರಿಕೆ, ವೈಜ್ಞಾನಿಕತೆಯಿಂದ ಕೃಷಿಯಲ್ಲಿ ಪ್ರಗತಿ ಸಾಧಿಸುವ ಕುರಿತು ಸಮಗ್ರ ಮಾಹಿತಿ ನೀಡಿದರು. 

 ಮುಂದುವರೆದು ಮಾತನಾಡಿ, ಪ್ರತಿಯೊಬ್ಬರೂ ಜಾಗೃತಗೊಂಡು ಪರಿಸರ ಸಂರಕ್ಷಣೆಗೆ ಮುಂದಾಗಬೇಕಿದೆ. ಇಂದು ಪರಿಸರ ಸಂಪೂರ್ಣವಾಗಿ ನಾಶ ಪಡಿಸುವ ಮೂಲಕ ಕತ್ತಲೆಯ ಬದುಕಿಗೆ ಮಾನವ ಹವಣಿಸುತ್ತಿದ್ದಾನೆ. ಮನುಷ್ಯನ ದುರಾಸೆಗೆ ಭೂಮಿ, ಸಸ್ಯ ಸಂಪತ್ತು, ಪ್ರಕೃತಿ ನಾಶವಾಗುತ್ತಿದೆ. ಪ್ರಕೃತಿ ವಿನಾಶಕ್ಕೆ ಕಾರಣವಾಗುತ್ತಿರುವ ನಾವಿಂದು ಎಚ್ಚೆತ್ತುಕೊಳ್ಳಬೇಕಾದ ಕಾಲ ಬಂದಿದೆ ಎಂದರು. ಸರ್ಕಾರ ಕೂಡ ಕಿರು ಕಾಡು ನಿರ್ಮಾಣಕ್ಕೆ ಮುಂದಾಗಿದ್ದು, ಈಗಾಗಲೇ ಕೊಪ್ಪಳ ಜಿಲ್ಲೆಯಲ್ಲಿ ಕಾರ್ಯ ಪ್ರಗತಿಯಲ್ಲಿದೆ ಎಂದರು. ಪ್ರತಿಯೊಬ್ಬರು ಗಿಡ ಮರಗಳನ್ನು ನೆಟ್ಟು, ಪೋಷಿಸುವ ಜವಾಬ್ದಾರಿಯನ್ನು ಕೈಗೊಳ್ಳಬೇಕಾಗಿದೆ. ಉತ್ತಮ ಮಳೆ, ಬೆಳೆಯಾಗಬೇಕಾದರೆ, ಪರಿಸರ ಸಮೃದ್ಧವಾಗಿದ್ದರೆ ಮಾತ್ರ ಸಾಧ್ಯ ಎಂದು ಕರೆ ನೀಡಿದರು. 

ಕಾರ್ಯಕ್ರಮ ಉದ್ಘಾಟಿಸಿದ ಪಿಕಾರ್ಡ್‌ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ ಮಾತನಾಡಿ, ರೈತ ಉತ್ಪಾದಕರ ಸಂಸ್ಥೆಗಳು ರೈತರನ್ನು ಉದ್ಯಮಿಗಳನ್ನಾಗಿಸುವ ಯೋಜನೆ ಬಹುದೊಡ್ಡ ಯೋಜನೆಯಾಗಿದ್ದು, ರೈತರು ಸಮರ​‍್ಕವಾಗಿ ಸದುಪಯೋಗ ಪಡೆದುಕೊಳ್ಳಬೇಕು. ನಮ್ಮ ಪಿಕಾರ್ಡ್‌ ಬ್ಯಾಂಕ್‌ನಲ್ಲಿಯೂ ಸಹ ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ 5 ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುತ್ತಿದ್ದು ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. 

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ. ಯಮನಪ್ಪ ಬಿ.ಹೆಚ್‌. ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಐಐಎಸ್‌ಎಜಿ ರೈತ ಉತ್ಪಾದಕರ ಕಂಪನಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರದಿಂದ ಬರುವ ಯೋಜನೆಗಳನ್ನು ಕಂಪನಿ ಮುಖಾಂತರ ಸದಸ್ಯರಿಗೆ ತಲುಪಿಸುವಂತೆ ತಿಳಿಸಿದರು. ನಂತರ ಕುರಿಗಾಹಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು. 

ನಂತರ ಮುಖ್ಯ ಪಶು ವೈದ್ಯಾಧಿಕಾರಿ ಮಹೇಶಕುಮಾರ ಸಣ್ಣಕ್ಕಿ ಮಾತನಾಡಿ ಸರ್ಕಾರ ಪಶು ಮತ್ತು ಕುರಿ ಮೇಕೆಗಳಿಗೆ ಕಾಲುಬಾಯಿ ರೋಗ ತಡೆಗಾಗಿ ಉಚಿತ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದ್ದು ರೈತರು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. 

ಈ ಸಂದರ್ಭದಲ್ಲಿ ಭೀಮನಗೌಡ ಪಾಟೀಲ, ಜಯಪ್ರಕಾಶ ಜೆ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್, ಸಹಕಾರ ಅಭಿವೃದ್ಧಿ ಅಧಿಕಾರಿ ಬಸಪ್ಪ ಗಾಳಿ, ವರ್ಷಾ ಎನ್‌.ಜಿ.ಓ ಯೋಜನಾ ಸಂಯೋಜಕ ಶರಣಬಸವ ಪಾಟೀಲ, ಯೋಜನಾ ಸಂಯೋಜಕ ಪ್ರವೀಣಕುಮಾರ ಜಿ.ಕೆ, ಸೇರಿದಂತೆ ಇತರರಿದ್ದರು. 


ಸುದ್ದಿ ಓದಿ