ಪ್ರೊ. ರಾಜು ಆಲಗೂರ ಅವರಿಗೆ ಕೈ ಟಿಕೆಟ್ ನೀಡಬೇಕು: ಡಿಎಸ್? ಎಸ್ ಸಮಿತಿ ಆಗ್ರಹ
ಜಮಖಂಡಿ 11: 2023 ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ ನಾಗಠಾಣ ಮೀಸಲು ಮತಕ್ಷೇತ್ರಕ್ಕೆ ಪ್ರೊ. ರಾಜು ಆಲಗೂರ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿ.ಜಿ.ಸಾಗರಬಣ ಸಂಘಟನೆಯಿಂದ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಅಖಂಡ ವಿಜಯಪುರ ಜಿಲ್ಲೆಯಲ್ಲಿ ಸುಮಾರು 30 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದ ಪ್ರೊ. ರಾಜು ಆಲಗೂರ ಅವರು ಬುದ್ಧ, ಬಸವ, ಅಂಬೇಡ್ಕರವರ ಚಿಂತನೆಗಳನ್ನು ಮೈಗೂಡಿಸಿಕೊಂಡು ದಲಿತ ಸಂಘರ್ಷ ಸಮಿತಿಯ ಅಖಂಡ ವಿಜಯಪುರ ಜಿಲ್ಲೆಯ ಜಿಲ್ಲಾ ಸಂಚಾಲಕರಾಗಿಯೂ ಕೆಲಸ ಮಾಡಿದ್ದು, ಹೋರಾಟದ ಹಿನ್ನಲೆಯುಳ್ಳ ಜಾತ್ಯಾತೀತ ನಾಯಕರಾಗಿ. ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಪಕ್ಷ ಇಂತಹವರನ್ನು ಪರಿಗಣಿಸದೇ ಕಳೆದ 2018 ರ ವಿಧಾನಸಭೆ ಚುಣಾವಣೆಯಲ್ಲಿಯೂ ಕಡೆಗಣಿಸಿ, 2019 ರ ಲೋಕಸಭೆ ಟಿಕೆಟ್ ಭರವಸೆ ನೀಡಿ ಅದನ್ನು ಜೆ.ಡಿ.ಎಸ್. ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಜೆ.ಡಿ.ಎಸ್. ಪಕ್ಷಕ್ಕೆ ಬಿಟ್ಟುಕೊಟ್ಟು ಆಲಗೂರ ಅವರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಪಕ್ಷದ ವರಿಷ್ಠರು, ರಾಜ್ಯ ನಾಯಕರು ಚುನಾವಣೆ ಪೂರ್ವದಲ್ಲಿ ಪ್ರತಿ ಸಮಯದಲ್ಲಿ ಕೋಮುವಾದವನ್ನು ವಿರೋಧಿಸಿ, ಜಾತ್ಯಾತೀತ ದೃಷ್ಠಿಕೋನದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿರುವವರನ್ನು ಗುರುತಿಸಿ ಸ್ಥಾನಮಾನ ಕೊಡಲಾಗುವುದೆಂದು ಹೇಳುತ್ತಿದ್ದರು. ಹೋರಾಟದ ಹಿನ್ನಲೆಯಿಂದ ಬಂದು ಕೋಮುವಾದವನ್ನು ಗಟ್ಟಿಯಾಗಿ ವಿರೋಧಿಸಿಕೊಂಡು ಬಂದಿರುವ ಪ್ರೋ, ರಾಜು ಆಲಗೂರ ಅವರಿಗೆ ಟಿಕೆಟ್ ತಪ್ಪಿಸುತ್ತಿದ್ದಾರೆ. ನಿಜವಾಗಿಯೂ ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ಮಾತಿಗೆ ಬದ್ಧತೆ ಇದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಹಾಗೂ ನಾಗಠಾಣ ಕ್ಷೇತ್ರದ ಜನರಿಗೆ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸಿ ಗೆಲ್ಲುವ ಮುಂಚೂಣಿಯಲ್ಲಿರುವ ಆಲಗೂರ ಅವರಿಗೆ ಟಿಕೆಟ್ ನೀಡಿ, ಸತತವಾಗಿ ಎರಡು ಸಲ ಆದ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಪರಶುರಾಮ ಕಾಂಬಳೆ, ತಾಲೂಕಾ ಸಂಚಾಲಕ ಸದಾಶಿವ ಐನಾಪೂರ, ರಬಕವಿ-ಬನಹಟ್ಟಿ ತಾಲೂಕಾ ಸಂಚಾಲಕ ಬಸವರಾಜ ದೊಡಮನಿ, ನ್ಯಾಯಾವಾದಿ ಶಶಿಕಾಂತ ದೊಡಮನಿ, ತಾಲೂಕಾ ಸಂಘಟನಾ ಸಂಚಾಲಕ ಶ್ಯಾಮರಾವ ಮಾದರ ಇದ್ದರು.