ಗ್ರಾಮೀಣ ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ವೇದಿಕೆ
ದೇವರಹಿಪ್ಪರಗಿ 06 : ಶರವೇಗದಲ್ಲಿ ಬೆಳೆಯುತ್ತಿರುವ ಇಂದಿನ ಪ್ರಪಂಚದಲ್ಲಿ ಮಕ್ಕಳ ಪ್ರತಿಭೆಯನ್ನು ಗುರ್ತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿಯಂತಹ ಶೈಕ್ಷಣಿಕ ಕಾರ್ಯಕ್ರಮಗಳು ಮಗುವಿನ ಭವಿಷ್ಯದ ದೃಷ್ಟಿಯಿಂದ ತುಂಬಾ ಉತ್ತಮ ಕಾರ್ಯಕ್ರಮಗಳಾಗಿವೆ ಶಿಕ್ಷಣ ಪ್ರೇಮಿ ಶೇಖರಗೌಡ ಪಾಟೀಲ ಅವರು ಹೇಳಿದರು.ತಾಲ್ಲೂಕಿನ ಕೋರವಾರ ಗ್ರಾಮದ ಮಾನಸಾ ಆಂಗ್ಲ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕೋರವಾರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಗ್ರಾ.ಪಂ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಮುಖಂಡರಾಗಿರುವ ರಾಜಶೇಖರ ಛಾಯಾಗೋಳ ಅವರು ಮಾತನಾಡಿ ಗ್ರಾಮಾಂತರ ಪ್ರದೇಶಗಳ ಬಡಮಕ್ಕಳನ್ನು ಸ್ಪರ್ಧಾತ್ಮಕವಾಗಿ ತಯಾರಿ ಮಾಡುವ ನಿಟ್ಟಿನಲ್ಲಿ ಸರ್ಕಾರವು ಶಿಕ್ಷಕರ ಹೆಚ್ಚಿನ ಹೊರೆಯನ್ನು ಕಡಿಮೆ ಮಾಡಿ ಗುಣಮಟ್ಟದ ಹಾಗೂ ಅತ್ಯಾಧುನಿಕ ಕಲಿಕೆಗೆ ಮತ್ತಷ್ಟು ಒತ್ತು ನೀಡಬೇಕು ಎಂದರು.ಕೋರವಾರದ ಸಮೂಹ ಸಂಪನ್ಮೂಲ ವ್ಯಕ್ತಿ ಬಾಬು ನಡುವಿನಕೇರಿ ಹಾಗೂ ಶಿಕ್ಷಕ ಅರುಣ ಕೋರವಾರ ಮಾತನಾಡಿದರು. ದಿನವೀಡೀ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತ ಮಕ್ಕಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಸ್ಥಳೀಯ ಮಾನಸಾ ಶಾಲೆಯ ಅಧ್ಯಕ್ಷೆ ಭೀಮಬಾಯಿ ಸೋಲಂಕರ, ಕೆಬಿಎಂಪಿಎಸ್ ಕೋರವಾರ ಶಾಲೆಯ ಮುಖ್ಯಗುರುಮಾತೆ ಬಿ.ಬಿ.ಅಗ್ನಿ, ನಿವೃತ್ತ ಮುಖ್ಯಗುರು ಬಸವರಾಜ ಬಿರಾದಾರ, ಶಿಕ್ಷಕರ ಸಂಘದ ಕಾರ್ಯದರ್ಶಿ ಬಸವರಾಜ ನಾಗರಾಳ,ಕೊಕಟನೂರ ಶಾಲೆಯ ಎಂ.ಎಂ. ಮೋಮಿನ, ಪ್ರೇಮಸಿಂಗ ಚವ್ಹಾಣ, ಬಿ.ಎಸ್. ಬೆಳ್ಳುಂಡಗಿ, ಅಶೋಕ ನಾಯ್ಕೋಡಿ ಸೇರಿದಂತೆ ಕೋರವಾರ ಕ್ಲಸ್ಟರಿನ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.