ದತ್ತಾತ್ರೇಯ ದೇವಾಲಯದ ಸ್ತಬ್ಧಚಿತ್ರಕ್ಕೆ ರಾಜ್ಯೋತ್ಸವ ಮೆರವಣಿಗೆಯಲ್ಲಿ ಪ್ರಥಮ ಸ್ಥಾನ
ಲೋಕದರ್ಶನ ವರದಿ
ವಿಜಯಪುರ .6 : ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 1ರಂದು ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಸ್ತಬ್ಧಚಿತ್ರಗಳ ಮೆರವಣಿಗೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ವತಿಯಿಂದ ರೂಪಿಸಲಾದ ಚಟ್ಟರಕಿ ಗ್ರಾಮದ ಐತಿಹಾಸಿಕ ಶ್ರೀ ದತ್ತಾತ್ರೇಯ ದೇವಾಲಯದ ಸ್ತಬ್ಧಚಿತ್ರವು ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದೆ. ದೇವರಹಿಪ್ಪರಗಿ ತಾಲೂಕಿನ ಚಟ್ಟರಕಿ ಗ್ರಾಮದಲ್ಲಿರುವ 12ನೇ ಶತಮಾನದ ಕಲ್ಯಾಣಿ ಚಾಲುಕ್ಯರ ಕಾಲದ ಶ್ರೀ ದತ್ತಾತ್ರೇಯ ದೇವಾಲಯದ ಐತಿಹಾಸಿಕ ಹಿನ್ನೆಲೆ, ಧಾರ್ಮಿಕ ಪರಂಪರೆ ಹಾಗೂ ವಾಸ್ತುಶಿಲ್ಪದ ವೈಶಿಷ್ಟ್ಯವನ್ನು ಬಿಂಬಿಸುವಂತೆ ಸ್ತಬ್ಧಚಿತ್ರವನ್ನು ವಿನ್ಯಾಸಗೊಳಿಸಲಾಗಿತ್ತು.
ಜಿಲ್ಲೆಯ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ಈ ಸ್ತಬ್ಧಚಿತ್ರವು ಮೆರವಣಿಗೆಯಲ್ಲಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿ ಪ್ರಥಮ ಬಹುಮಾನ ಗಳಿಸಿದೆ. ನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ. ಪಾಟೀಲ ಅವರು ಹಾಗೂ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ಅಧಿಕಾರಿಗಳು ಪ್ರಥಮ ಬಹುಮಾನವನ್ನು ಪ್ರದಾನ ಮಾಡಿದರು.
ವಿಭಾಗೀಯ ಸಾರಿಗೆ ಅಧಿಕಾರಿ ಎಂ.ಎಸ್. ಹಿರೇಮಠ, ವಿಭಾಗೀಯ ತಾಂತ್ರಿಕ ಅಧಿಕಾರಿ ಎ.ಎಚ್. ಮದಭಾವಿ ಸೇರಿದಂತೆ ನಿಗಮದ ಎಲ್ಲ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿ, ಸ್ತಬ್ಧಚಿತ್ರದ ಪರಿಕಲ್ಪನೆ ಮತ್ತು ನಿರ್ಮಾಣ ಕಾರ್ಯಕ್ಕೆ ಸಹಕರಿಸಿದ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು, ಕನ್ನಡ ಕ್ರಿಯಾ ಸಮಿತಿಯ ಶಿವರಾಯ ಬೈಚಬಾಳ, ಬಸಲಿಂಗಪ್ಪ ಅಂಗಡಿ ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಾಗಿದೆ ಎಂದು ವಿಜಯಪುರ ವಿಭಾಗದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.