ಗೋಕಾಕ್

ಯೋಗದಿಂದ ದೈಹಿಕ, ಮಾನಸಿಕ ಸದೃಢತೆ ಸಾಧ್ಯ : ಜಯಾನಂದ ಮಾದರ

ಯೋಗದಿಂದ ದೈಹಿಕ, ಮಾನಸಿಕ ಸದೃಢತೆ ಸಾಧ್ಯ : ಜಯಾನಂದ ಮಾದರ

ಲೋಕದರ್ಶನ ವರದಿ 

ಗೋಕಾಕ 24: ಯೋಗ ಅಭ್ಯಾಸವು ಉತ್ತಮ ಆರೋಗ್ಯಕ್ಕೆ ಕಾರಣವಾಗಿದೆ ಮತ್ತು ಅದರಿಂದ ದೈಹಿಕ ಹಾಗೂ ಮಾನಸಿಕ ಸದೃಢತೆ ಹೆಚ್ಚುತ್ತದೆ ಎಂದು ಕರ್ನಾಟಕ ಲಲಿತಕಲಾ ಅಕಾಡಮಿ ಸದಸ್ಯ ಹಾಗೂ ನಗರದ ಸಿದ್ಧಾರ್ಥ ಲಲಿತಕಲಾ ಕಾಲೇಜನ ಪ್ರಾಚಾರ್ಯ ಜಯಾನಂದ ಮಾದರ ಹೇಳಿದರು. 

        ಅವರು ರವಿವಾರ ದಿ.23ರಂದು ವಿವೇಕಾನಂದಯೋಗ ಮತ್ತು ಸಂಸ್ಕೃತಿ ವಿಕಾಸ ಸಂಘವು ನಗರದ ಕೆಎಲ್‌ಇ ಸಂಸ್ಥೆಯ ಆಂಗ್ಲ ಮಾದ್ಯಮ ಶಾಲಾ ಆವರಣದಲಿ ಪ್ರ-ಪ್ರಥಮ ಬಾರಿಗೆ ಬೆಳಗಾವಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ಹಾಗೂ ಯೋಗ ಸಾಧಕರಿಗೆ ಗೌರವ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. 

       ಚರ್ಮರೋಗ ತಜ್ಞ ಡಾ. ಪ್ರಮೋದ ಎತ್ತಿನಮನಿ ಸಾಹಿತಿ, ಚಿಂತಕ ಪೊ.ಸುರೇಶ ಮುದ್ದಾರ, ಶಿವಯೋಗಿ ತತ್ವವಿಚಾರ ವೇದಿಕೆ ಅಧ್ಯಕ್ಷ ಬಸವರಾಜ ಮುರಗೋಡ, ಸೊಂಟಕ್ಕಿ ಟ್ರಸ್ಟ್‌ ಅಧ್ಯಕ್ಷ ಲಕ್ಷ್ಮಣ ಸೊಂಟಕ್ಕಿ, ನಾಗನೂರನ ಅಥರ್ವ ಪ.ಪೂ.ಮಹಾವಿದ್ಯಾಲಯದ ಪ್ರಾಧ್ಯಾಪಕ ಚೇತನ ಜೋಗನ್ನವರ, ಅರಬಾವಿಯ ವಕೀಲ ಅಡಿವೆಪ್ಪಾ ಬಿಲಕುಂದಿ, ಘೋಡಗೇರಿಯ ಸುಜಾತಾ ಬೇಟಗಾರ, ಸಂದೀಪ ಅನ್ನಿಗೋಳ ಕ.ರ.ವೇ. ಗಜಸೇನೆಯ ಪವನ ಮಹಾಲಿಂಗಪೂರ ಅತಿಥಿಯಾಗಿ ಉಪಸ್ಥಿತರಿದ್ದರು. 

        ಯೋಗ ಸಾಧಕರಾದ ಬಳೋಬಾಳದ ಬಸಪ್ಪಾ ಬಡವಣ್ಣಿ, ಅಥಣಿಯ ಸತ್ತೆಪ್ಪಾ ಹೊಳೆಪ್ಪನವರ, ಬೆಂಗಳೂರಿನ ಅಂತರಾಷ್ಟ್ರೀಯ ಯೋಗ ಸಾಧಕಿ ಭಾರ್ಗವಿ, ಬಳ್ಳಾರಿಯ ಶಂಕರ ಯಾದವ ಅವರನ್ನು ಸನ್ಮಾನಿಸಲಾಯಿತು. 

       ಬೆಳಗಾವಿ ನಗರ ಸವದತ್ತಿ ತಾಲೂಕಿನ ಮುನವಳ್ಳಿ, ರಾಮದುರ್ಗ ತಾಲೂಕಿನ ಚುಂಚನೂರು, ಮೂಡಲಗಿ ತಾಲೂಕಿನ ಕುಲಗೋಡ ಮುಂತಾದ ಊರಿನ ಯೋಗ ಸ್ಪರ್ಧಾಳುಗಳು ಭಾಗವಹಿಸಿದ್ದರು. 

        ಸಂಘಟಕ ಹಾಗೂ ಸಂಘದ ಅಧ್ಯಕ್ಷ ಆನಂದ ಸೋರಗಾವಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಹಾಲವ್ವಾ ಅಂತರಗಟ್ಟಿ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ