ಪಂಚಮಸಾಲಿ ಬೃಹತ್ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ: ಪಾಟೀಲ
ಅಥಣಿ 20: ಹುಕ್ಕೇರಿಯಲ್ಲಿ ಅಕ್ಟೋಬರ 21 ರಂದು ನಡೆಯುವ ಪಂಚಮಸಾಲಿ ಸಮಾಜದ ಬೃಹತ್ ಸಮಾವೇಶಕ್ಕೆ ಅಥಣಿಯಿಂದ ಹೆಚ್ಚು ಜನ ಭಾಗವಹಿಸಬೇಕೆಂದು ಅಥಣಿ ತಾಲೂಕಾ ಪಂಚಮಸಾಲಿ ಸಮಾಜದ ಗೌರವಾಧ್ಯಕ್ಷ ರಮೇಶಗೌಡ ಪಾಟೀಲ ಹೇಳಿದರು.
ಅಥಣಿ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕೂಡಲ ಸಂಗಮದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ಹತ್ತು ಹಲವಾರು ಹಂತದ ಚಳುವಳಿ ಹಾಗೂ ಹೋರಾಟ ಮಾಡಲಾಗಿದೆ ಆದರೂ ಸಹ ಸರಕಾರಕ್ಕೆ ನಮ್ಮ ಸಮಾಜದ ಮೇಲೆ ಕರುಣೆ ಇಲ್ಲದಾಗಿದೆ, ಈ ಬಾರಿಯ ಹೋರಾಟ ನಮ್ಮ ಕೊನೆಯ ಹೋರಾಟದಂತಾಗಿದೆ. ಮಡಿಯುವ ಮುನ್ನ ಮೀಸಲಾತಿ ಪಡಿ ಎಂಬ ಘೋಷ ವಾಕ್ಯದೊಂದಿಗೆ ಈ ಹೋರಾಟ ನಡೆಯಲಿದೆ. ನಾವು ನಮ್ಮ ಮನೆ ಬಿಟ್ಟು ಮೀಸಲಾತಿಯನ್ನು ಪಡೆದೆ ಮನೆಗೆ ಬರುತ್ತೇವೆ ಎಂದು ಧೃಢ ಸಂಕಲ್ಪ ಮಾಡೋಣ, ಅದರ ಮೊದಲ ಹಂತವಾಗಿ ನಡೆಯುವ ಹುಕ್ಕೇರಿ ಬೃಹತ್ ಸಮಾವೇಶದಲ್ಲಿ ನಾವೆಲ್ಲರೂ ಬೃಹತ್ ಸಂಖ್ಯೆಯಲ್ಲಿ ಭಾಗಿಯಾಗಿ ಸರಕಾರಕ್ಕೆ ನಡುಕ ಹುಟ್ಟಿಸುವ ಕೆಲಸ ಮಾಡೋಣ ಎಂದ ಅವರು ಹುಕ್ಕೇರಿಯಲ್ಲಿ ನಡೆಯುವ ಬೃಹತ್ ಪಂಚಮಸಾಲಿ ಸಮಾವೇಶಕ್ಕೆ ಅಥಣಿಯಿಂದ ಸಾವಿರಾರು ಜನರು ಭಾಗಿಯಾಗಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಪಂಚಮಸಾಲಿ ತಾಲೂಕಾ ಅಧ್ಯಕ್ಷ ಅವಿನಾಶ ನಾಯಿಕ ಮಾತನಾಡಿ ನಾವು ಈ ವರೆಗೂ ಮಾಡಿದ ಹೋರಾಟ ಯಶಸ್ವಿಯಾಗಲು ಇನ್ನು ಕೆಲವೇ ಮೆಟ್ಟಿಲುಗಳಿವೆ ಈಗ ನಾವು ಧೃತಿ ಗೆಡದೆ ಶೃಇಗಳ ಕೈ ಭದ್ರ ಪಡಿಸೋಣ, ನಾವು ಜಗದ್ಗುರುಗಳ ಹೆಜ್ಜೆಯೊಂದಿಗೆ ಹೆಜ್ಜೆ ಹಾಕಿ ಹೋರಾಟವನ್ನು ಯಶಸ್ವಿಯಾಗಿಸೋಣ ಎಂದರು.
ಸಮಾಜದ ಮುಖಂಡರಾದ ಪ್ರಕಾಶ ಗೌಡ ಪಾಟೀಲ, ಸುರೇಶ ಬುಕಿಟಗಾರ, ಶಿವು ಸಿಂಧೂರ, ಮಲ್ಲಿಕಾರ್ಜುನ ಅಂದಾನಿ, ಶಿವಾನಂದ ಮಾಲಗಾವಿ, ಗುರು ಆಜೂರ, ಚಿದಾನಂದ ಪಾಟೀಲ ಸೇರಿದಂತೆ ಹಲವರು ಭಾಗಿಯಾಗಿದ್ದರು.