ಮನರಂಜನೆ

‘ಓಂ: ಚಾಪ್ಟರ್ 1’ ಚಿತ್ರದಲ್ಲಿ ಐಪಿಎಸ್ ಅಧಿಕಾರಿ ನಿತ್ಯಾ ರೆಡ್ಡಿಯಾಗಿ ಸಾಯಿ ಪಲ್ಲವಿ

‘ಓಂ: ಚಾಪ್ಟರ್ 1’ ಚಿತ್ರದಲ್ಲಿ ಐಪಿಎಸ್ ಅಧಿಕಾರಿ ನಿತ್ಯಾ ರೆಡ್ಡಿಯಾಗಿ ಸಾಯಿ ಪಲ್ಲವಿ

ಮುಂಬೈ, ಅ. 27 : ನಟಿ ಸಾಯಿ ಪಲ್ಲವಿ ಅವರು ಮುಂಬರುವ ಆ್ಯಕ್ಷನ್ ಥ್ರಿಲ್ಲರ್ ಚಿತ್ರ ‘ಓಂ: ಚಾಪ್ಟರ್ 1’ರಲ್ಲಿ ಐಪಿಎಸ್ ಅಧಿಕಾರಿ ನಿತ್ಯಾ ರೆಡ್ಡಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಟೀಸರ್‌ನಲ್ಲಿ ಖಾಕಿ ಸಮವಸ್ತ್ರ ಧರಿಸಿರುವ ಸಾಯಿ ಪಲ್ಲವಿ ಅವರ ಪಾತ್ರದ ಮೊದಲ ನೋಟವನ್ನು ಪರಿಚಯಿಸಲಾಗಿದೆ.

ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಚಿತ್ರದಲ್ಲಿ ಸಾಯಿ ಪಲ್ಲವಿ ನ್ಯಾಯಕ್ಕಾಗಿ ಹೋರಾಡುವ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಟೀಸರ್‌ನಲ್ಲಿ ಅವರ ಶಕ್ತಿಯುತ ಹಾಗೂ ಪ್ರಭಾವಶಾಲಿ ಪ್ರವೇಶ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಆದರೆ, ಅವರ ಪಾತ್ರದ ಹಿನ್ನೆಲೆ ಮತ್ತು ಚಿತ್ರದ ಕಥಾಹಂದರದ ಕುರಿತು ಚಿತ್ರತಂಡ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಆರ್‌ಟೇಕ್ ಸ್ಟುಡಿಯೋಸ್‌ನ ನಿರ್ಮಾಪಕಿ ಶ್ರದ್ಧಾ ಅಗರ್ವಾಲ್ ಅವರು ಸಾಯಿ ಪಲ್ಲವಿ ಅವರ ಅಭಿನಯವನ್ನು ಮೆಚ್ಚಿಕೊಂಡಿದ್ದು, ಅವರ ನಟನೆಯಲ್ಲಿ ಪ್ರಾಮಾಣಿಕತೆ ಮತ್ತು ಸಹಜತೆ ಎದ್ದು ಕಾಣುತ್ತದೆ ಎಂದು ಹೇಳಿದ್ದಾರೆ. ನಿತ್ಯಾ ರೆಡ್ಡಿ ಚಿತ್ರದ ಪ್ರಮುಖ ಪಾತ್ರವಾಗಿದ್ದು, ಈ ಪಾತ್ರಕ್ಕೆ ಸಾಯಿ ಪಲ್ಲವಿಗಿಂತ ಸೂಕ್ತವಾದ ಆಯ್ಕೆ ಮತ್ತೊಬ್ಬರಿರಲು ಸಾಧ್ಯವಿಲ್ಲ. ಅವರನ್ನು ಚಿತ್ರತಂಡಕ್ಕೆ ಬರಮಾಡಿಕೊಳ್ಳಲು ಸಂತೋಷವಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಚಿತ್ರದಲ್ಲಿ ಧನುಷ್, ಮಮ್ಮೂಟ್ಟಿ, ಶ್ರೀಲೀಲಾ ಮತ್ತು ನಾಸಿರುದ್ದೀನ್ ಶಾ ಸೇರಿದಂತೆ ಹಲವು ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ.

ಆರ್‌ಟೇಕ್ ಸ್ಟುಡಿಯೋಸ್ ಮತ್ತು ವಂಡರ್‌ಬಾರ್ ಫಿಲ್ಮ್ಸ್ ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಾಣವಾಗಿರುವ ‘ಓಂ: ಚಾಪ್ಟರ್ 1’ ಚಿತ್ರವು ನವೆಂಬರ್ 20ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಸುದ್ದಿ ಓದಿ