ಇಸ್ಕಾನ್ ದೇವಸ್ಥಾನಕ್ಕೆ ಯಾಂತ್ರಿಕ ಆನೆಯನ್ನು ಕೊಡುಗೆಯಾಗಿ ನೀಡಿದ ನಟ ಅದಿವಿ ಶೇಷ್
ವಿಶಾಖಪಟ್ಟಣಂ, ಅ. 27: ಪ್ರಾಣಿಗಳ ಮೇಲಿನ ದಯೆ ಮತ್ತು ಕಾಳಜಿಯನ್ನು ಉತ್ತೇಜಿಸುವ ಉದ್ದೇಶದಿಂದ ನಟ ಅದಿವಿ ಶೇಷ್ ಅವರು ವಿಶಾಖಪಟ್ಟಣಂನ ಇಸ್ಕಾನ್ನಲ್ಲಿರುವ ಶ್ರೀ ಶ್ರೀ ರಾಧಾ ದಾಮೋದರ ದೇವಸ್ಥಾನಕ್ಕೆ ‘ರಂಗಾ’ ಹೆಸರಿನ ಜೀವಂತ ಆನೆಯ ಗಾತ್ರದ ಯಾಂತ್ರಿಕ ಆನೆಯನ್ನು ಕೊಡುಗೆಯಾಗಿ ನೀಡಿದ್ದಾರೆ.
ಪೆಟಾ ಇಂಡಿಯಾ (PETA India) ಸಹಯೋಗದೊಂದಿಗೆ ಈ ಉಪಕ್ರಮ ಕೈಗೊಳ್ಳಲಾಗಿದ್ದು, ಧಾರ್ಮಿಕ ಆಚರಣೆಗಳು ಮತ್ತು ಉತ್ಸವಗಳಲ್ಲಿ ಜೀವಂತ ಆನೆಗಳನ್ನು ಬಳಸುವ ಬದಲು ಪ್ರಾಣಿಸ್ನೇಹಿ ಪರ್ಯಾಯಗಳನ್ನು ಅಳವಡಿಸಿಕೊಳ್ಳುವಂತೆ ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ.
ಈ ಕುರಿತು ಮಾತನಾಡಿದ ಅದಿವಿ ಶೇಷ್, ಧಾರ್ಮಿಕ ಸಂಪ್ರದಾಯಗಳು ಮತ್ತು ಆಚರಣೆಗಳು ಕೇವಲ ಭಕ್ತಿಯನ್ನು ಮಾತ್ರವಲ್ಲದೆ, ಸಕಲ ಜೀವಿಗಳ ಬಗೆಗಿನ ಪ್ರೀತಿ ಮತ್ತು ಸೂಕ್ಷ್ಮ ಸಂವೇದನೆಯನ್ನೂ ಪ್ರತಿಬಿಂಬಿಸಬೇಕು ಎಂದು ಹೇಳಿದರು.
ಆನೆಗಳು ತಮ್ಮ ಕುಟುಂಬದೊಂದಿಗೆ ಕಾಡಿನಲ್ಲಿ ಸ್ವತಂತ್ರವಾಗಿ ಬದುಕಬೇಕು. ಅವುಗಳನ್ನು ಸರಪಳಿಗಳಿಂದ ಬಂಧಿಸಿ, ತರಬೇತಿ ನೀಡಿ, ಧಾರ್ಮಿಕ ಮೆರವಣಿಗೆಗಳಲ್ಲಿ ಪ್ರದರ್ಶನಕ್ಕಾಗಿ ಬಳಸುವುದನ್ನು ನೋಡುವುದು ದುಃಖಕರ ಸಂಗತಿ ಎಂದು ಅವರು ಅಭಿಪ್ರಾಯಪಟ್ಟರು.
40 ವರ್ಷದ ನಟ, ಈ ಉಪಕ್ರಮವು ದೇಶಾದ್ಯಂತದ ದೇವಸ್ಥಾನಗಳು ಮತ್ತು ಸಮುದಾಯಗಳಿಗೆ ಪ್ರೇರಣೆಯಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು. ತಮ್ಮ ಸಂಪ್ರದಾಯಗಳನ್ನು ಗೌರವಿಸುವುದರ ಜೊತೆಗೆ ದಯೆ ಮತ್ತು ಕರುಣೆಯಿಂದ ಕೂಡಿದ ಪರ್ಯಾಯಗಳನ್ನು ಅಳವಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ಯಾಂತ್ರಿಕ ಆನೆ ‘ರಂಗಾ’ ಜೀವಂತ ಆನೆಗಳ ಬಳಕೆಗೆ ಪರ್ಯಾಯವಾಗಿದೆ. ಪ್ರಾಣಿಗಳನ್ನು ಬಂಧನದಲ್ಲಿಡದೆ, ಸರಪಳಿಗಳಿಂದ ಕಟ್ಟಿಹಾಕದೆ ಹಾಗೂ ಅವುಗಳಿಂದ ಬಲವಂತವಾಗಿ ಪ್ರದರ್ಶನ ಮಾಡಿಸದೆ ಧಾರ್ಮಿಕ ಆಚರಣೆಗಳ ವೈಭವ ಮತ್ತು ಮಹತ್ವವನ್ನು ಉಳಿಸಿಕೊಳ್ಳಲು ಈ ಯಾಂತ್ರಿಕ ಆನೆ ನೆರವಾಗಲಿದೆ.
ಇದೇ ವೇಳೆ, ವಿಶಾಖಪಟ್ಟಣಂ ಇಸ್ಕಾನ್ನ ಭಕ್ತರಿಗೆ ಅದಿವಿ ಶೇಷ್ ಶುಭಾಶಯಗಳನ್ನು ಕೋರಿದರು. ರಂಗಾ ಮುಂದಿನ ವರ್ಷಗಳಲ್ಲಿ ಭಕ್ತರ ಜೀವನದಲ್ಲಿ ಸಂತೋಷ, ಸಂಭ್ರಮ ಮತ್ತು ಭಕ್ತಿಭಾವವನ್ನು ಹೆಚ್ಚಿಸಲಿ ಎಂದು ಹಾರೈಸಿದರು.