ಶೌರ್ಯ, ಸಾಹಸದ ವೀರ ಮಹಿಳೆ ಒನಕೆ ಓಬವ್ವ
ಲೋಕದರ್ಶನ ವರದಿ
ಕಂಪ್ಲಿ 11 : ಚಿತ್ರದುರ್ಗ ಮದಕರಿ ಸಾಮ್ರಾಜ್ಯವನ್ನು ರಕ್ಷಿಸಿದ ಒನಕೆ ಓಬವ್ವ ಶೌರ್ಯ, ಸಾಹಸದ ವೀರ ಮಹಿಳೆಯಾಗಿ ಇಡೀ ಸಮಸ್ಥ ಮಹಿಳಾ ಸಮುದಾಯಕ್ಕೆ ಮಾದರಿಯಾಗಿದ್ದಾರೆ ಎಂದು ಪ್ರಭಾರ ಉಪ ತಹಶೀಲ್ದಾರ್ ರಮೇಶ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಛೇರಿ ಸಭಾಂಗಣದಲ್ಲಿ ಒನಕೆ ಓಬವ್ವ ಜಯಂತಿ’ಯ ಕಾರ್ಯಕ್ರಮದಲ್ಲಿ ಓಬವ್ವ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಬುಧವಾರ ಸಲ್ಲಿಸಿ, ಅವರು ಮಾತನಾಡಿ, ದೇಶ ಹಾಗೂ ನಾಡು ಕಂಡ ಆದರ್ಶಪ್ರಾಯ ವೀರವನಿತೆ ಒನಕೆ ಓಬವ್ವ. ಈಕೆಯ ಸ್ವಾಮಿ ನಿಷ್ಠೆ, ತ್ಯಾಗ, ಸಾಹಸ ಹಾಗೂ ಧೈರ್ಯ ಇಂದಿನ ಮಹಿಳೆಯರಿಗೆ ಸ್ಫೂರ್ತಿದಾಯಕವಾಗಬೇಕು’ ಎಂದರು.
ಕರ್ನಾಟಕ ರಾಜ್ಯ ದಿಶಾ ಸಮಿತಿ ಸದಸ್ಯ ಎ.ಸಿ.ದಾನಪ್ಪ ಮಾತನಾಡಿ, ಓಬವ್ವ ಸಾಮಾನ್ಯ ಹೆಣ್ಣು ಮಗಳಾದರೂ, ತನ್ನ ರಾಜನಿಷ್ಠೆ, ನಾಡಪ್ರೇಮದಿಂದಾಗಿ ದುರ್ಗಕ್ಕಷ್ಟೆ ಅಲ್ಲ, ಕನ್ನಡ ನಾಡಿಗೆ ಹೆಮ್ಮೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಛಲುವಾದಿ ಸಮಾಜದ ಅಧ್ಯಕ್ಷ ಸಿ.ಎ.ಚನ್ನಪ್ಪ ಮಾತನಾಡಿ, ಇಂದಿನ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದರ ಜತೆಗೆ ಉತ್ತಮ ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಕಲಿಕೆಯಲ್ಲಿ ಹೆಚ್ಚು ಆಸಕ್ತಿ ವಹಿಸುವ ಮೂಲಕ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು’ ಎಂದರು. ನಂತರ ದಲಿತ ಮುಖಂಡರಾದ ಚನ್ನಬಸವರಾಜ, ಬಿ.ಲಕ್ಷ್ಮಣ ಮಾತನಾಡಿದರು. ಈ ಸಂದರ್ಭದಲ್ಲಿ ಶಿರಸ್ತೇದಾರ ಪಂಪಾಪತಿ, ಕಂದಾಯ ನೀರೀಕ್ಷ ಸುರೇಶ, ಸರ್ವೆ ಇಲಾಖೆಯ ಎಡಿಎಲ್ಆರ್ ನರಸಪ್ಪ, ಇಸಿಒ ಟಿ.ಎಂ.ಬಸವರಾಜ, ನಿಲಯ ಪಾಲಕ ಕೆ.ವಿರುಪಾಕ್ಷಪ್ಪ ಸೇರಿದಂತೆ ಸಿಬ್ಬಂದಿಗಳು ಇದ್ದರು.