ಅಡೆತಡೆಗಳನ್ನು ಅವಕಾಶಗಳನ್ನಾಗಿಸಿಕೊಂಡು ಗುರಿಯತ್ತ ಮುನ್ನುಗ್ಗಬೇಕು: ಮಕ್ಕೋಜಿ
ಜಮಖಂಡಿ 30: ಸಾಧನೆಯ ಹಾದಿಯಲ್ಲಿ ಸಾಗುವಾಗ ಅಡೆತಡೆಗಳು ನಮ್ಮನ್ನು ಪಕ್ಕಕ್ಕೆ ಸರಿಸಬಾರದು. ತೊಂದರೆಗಳಿಗೆ ನಲುಗಬಾರದು. ಅಡೆತಡೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡು ಮೂಲ ಗುರಿಯತ್ತ ಮುನ್ನುಗ್ಗಬೇಕು ಎಂದು ತಹಶೀಲ್ದಾರ್ ಸದಾಶಿವ ಮಕ್ಕೋಜಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಬಸವಜ್ಯೋತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ 2023-24ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸಾಧನೆಯ ಹಾದಿಯಲ್ಲಿ ಪ್ರಯತ್ನ ಪ್ರಾಮಾಣಿಕವಾಗಿದ್ದರೆ ದೇವರು ಕೂಡ ನಮ್ಮ ಜೊತೆಗೆ ಇರುತ್ತಾನೆ. ಊಟ, ನಿದ್ರೆ ಇಲ್ಲದಿದ್ದರೂ, ಆರ್ಥಿಕ ಸಂಕಷ್ಟವಿದ್ದರೂ ಗುರಿ ಮುಟ್ಟುವ ಪ್ರಯತ್ನವನ್ನು ಎಂದಿಗೂ ಕೈಬಿಡಬಾರದು. ಆತ್ಮಸಾಕ್ಷಿಗೋಸ್ಕರ ಪ್ರಾಮಾಣಿಕರಾಗಿರಬೇಕು. ಅಡ್ಡದಾರಿ ಹಿಡಿದು ಪಶ್ಚಾತ್ತಾಪ ಪಡುವ ಸಂದರ್ಭವನ್ನು ತಂದುಕೊಳ್ಳಬಾರದು. ಪಾಲಕರ, ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಯ ಮೇಲೆ ನಂಬಿಕೆಯಿದ್ದರೆ ಅಡ್ಡದಾರಿ ಹಿಡಿಯಲು ಬಿಡುವುದಿಲ್ಲ. ಆದ್ದರಿಂದ ನಂಬಿಕೆ ಬಹಳ ಮುಖ್ಯ ಎಂದು ಕಿವಿಮಾತು ಹೇಳಿದರು.
ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದು ಹೋದ ಸಮಯ ಹಿಂತಿರುಗಿ ಬರುವುದಿಲ್ಲ. ಆದರೆ, ಸಮಯವನ್ನು ವ್ಯರ್ಥ ಮಾಡಿಕೊಂಡವರನ್ನು ಹಿಂದೆ ತಿರುಗಿ ನೋಡುವಂತೆ ಮಾಡುತ್ತದೆ. ಯಾರು ಸಮಯವನ್ನು ಗೌರವಿಸುತ್ತಾರೋ ಅವರನ್ನು ಸಮಯ ಗೌರವಿಸುತ್ತದೆ ಎಂದರು.
ಉಪನ್ಯಾಸಕ ಪಿ.ಎನ್. ವಜ್ರಮಟ್ಟಿ, ವಿದ್ಯಾರ್ಥಿಗಳಾದ ಸುಕನ್ಯಾ ಸುತಗುಂಡಿ, ಶಬಾನಾ ನದಾಫ, ಪ್ರಿಯಾಂಕಾ ಲಕ್ಕೂರ, ರಮೇಶ ಜಮಖಂಡಿ, ನೀಲಾ ಸೊನ್ನದ, ಪವನ ಕುಲಕರ್ಣಿ, ಶ್ರುತಿ ಕೋನೆಗೋಳ ತಮ್ಮ ಅನಿಸಿಕೆ ಹಂಚಿಕೊಂಡರು. ವಿದ್ಯಾಲತಾ ಗಣಾಚಾರಿ, ಸುಮಾ ಮಠಪತಿ ಪ್ರಾರ್ಥನೆ ಗೀತೆ ಹಾಡಿದರು. ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಡಾ.ಮಹಾದೇವ ಕುಂಬಾರ ಅತಿಥಿಗಳನ್ನು ಪರಿಚಯಿಸಿದರು. ಶಿಲ್ಪಾ ಸೆಕ್ಕಿ, ಶೋಭಾ ಕಣಬೂರ ನಿರೂಪಿಸಿದರು. ಉಪನ್ಯಾಸಕ ಆನಂದ ಕಬ್ಬೂರ ವಂದಿಸಿದರು.