ಅಥಣಿ

ಲಿಂಗಾಯತರ ನಿರ್ಲಕ್ಷ್ಯ, ಹಾಲುಮತ ಸಮಾಜಕ್ಕೆ ಟಿಕೆಟ್ ತಪ್ಪಿದ್ದರಿಂದ ಹಿನ್ನಡೆ ಉಂಟಾಗಿರಬಹುದು: ಶಿವು ಗುಡ್ಡಾಪುರ

ಲಿಂಗಾಯತರ ನಿರ್ಲಕ್ಷ್ಯ, ಹಾಲುಮತ ಸಮಾಜಕ್ಕೆ ಟಿಕೆಟ್ ತಪ್ಪಿದ್ದರಿಂದ ಹಿನ್ನಡೆ ಉಂಟಾಗಿರಬಹುದು: ಶಿವು ಗುಡ್ಡಾಪುರ

ಅಥಣಿ 08: ಲಿಂಗಾಯತ ಪ್ರಾಬಲ್ಯವಿರುವ ಅಥಣಿ ಕ್ಷೇತ್ರದಲ್ಲಿ ಲಿಂಗಾಯತ ಧುರೀಣರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ಮತ್ತು  ಚುನಾವಣೆಯಲ್ಲಿ ಹಾಲು ಮತ ಸಮಾಜಕ್ಕೆ ಟಿಕೆಟ್ ತಪ್ಪಿಸಿದ್ದರಿಂದ ಹಿನ್ನಡೆ ಉಂಟಾಗಿರಬಹುದು ಎಂದು ಕಾಂಗ್ರೆಸ್ ಮುಖಂಡ ಶಿವು ಗುಡ್ಡಾಪುರ ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಚುನಾವಣೆಯಲ್ಲಿ ಟಿಕೆಟ್ ಪಕ್ಕಾ ಆದ ದಿನದಿಂದಲೂ ಲಿಂಗಾಯತರನ್ನು ನಿರ್ಲಕ್ಷಿಸುತ್ತಲೇ ಬಂದರು. ಆದರೂ ಎಲ್ಲ ಲಿಂಗಾಯತರು ಕೂಡ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿದರು ಕೂಡ ಕೊನೆವರೆಗೂ ಲಿಂಗಾಯತರಿಗೆ ಪ್ರಾಶಸ್ತ್ಯ ಕೊಡಲೇ ಇಲ್ಲದಿರುವುದು ಮತ್ತು ಚುನಾವಣೆಗೆ ಮೊದಲು ಚಿಕ್ಕೋಡಿ ಲೋಕಸಭಾ ಕ್ಷೇತ್ರವನ್ನು ಹಾಲುಮತ ಸಮಾಜಕ್ಕೆ ಬಿಟ್ಟುಕೊಡುವುದಾಗಿ ಸಚಿವ ಸತೀಶ ಜಾರಕಿಹೊಳಿ ಘೋಷಿಸಿದ್ದರು. ಆದರೆ ಕೊನೆ ಸಮಯದಲ್ಲಿ ತಮ್ಮ ಮಗಳಿಗೆ ಟಿಕೆಟ್ ಗಿಟ್ಟಿಸಿಕೊಂಡರು. ಇದರಿಂದ ಕ್ಷೇತ್ರದಲ್ಲಿ ನಾವು ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಹಾಲು ಮತದವರು ಅಸಮಾಧಾನ ವ್ಯಕ್ತ ಪಡಿಸಿದ್ದರು. ಈ ಎಲ್ಲ ಕಾರಣಗಳಿಂದಲೂ ಚುನಾವಣೆಯಲ್ಲಿ ಹಿನ್ನಡೆ ಉಂಟಾಗಿರಬಹುದು ಎಂದರು.  

ಚುನಾವಣೆಯಲ್ಲಿ ಮೂಲ ಮತ್ತು ಬಿಜೆಪಿಯಿಂದ ವಲಸೆ ಬಂದವರು ಎನ್ನುವ ಭೇದ ಭಾವ ಇಲ್ಲದೆ ಎಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ. ಆದರೂ ಸಚಿವರು ಕಾರ್ಯಕರ್ತರ ವಿಶ್ವಾಸಕ್ಕೆ ಮರ್ಮಾಘಾತ ನೀಡಿರುವುದು ಸರಿಯಲ್ಲ ಎಂದರು.  

ತೆಲಸಂಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಮ್‌.ಖೊಬ್ರಿ ಮಾತನಾಡಿ, ಚುನಾವಣೆ ನಿರ್ವಹಿಸಲು ಸತೀಶ ಜಾರಕಿಹೊಳಿ ಮಾಲಿಕತ್ವದ ಕಾರಖಾನೆಯ ಸಿಬ್ಬಂದಿಗಳನ್ನು ಎಲ್ಲ ಬೂತಗಳಲ್ಲಿ ನೇಮಕ ಮಾಡಿದ್ದರು. ಹಾಗೆನಿದ್ದರೆ ನಿಮ್ಮ ಸಿಬ್ಬಂದಿಗಳು ನಿಮ್ಮ ಗಮನಕ್ಕೆ ತರಬಹುದಿತ್ತು. ಆದರೂ ಸಚಿವರು ಯಾರದೋ ಮಾತು ಕೇಳಿಯೋ ಅಥವಾ ತಾವೇ ಸಂಶಯ ಪಟ್ಟು ಹಗಲಿರಳು ದುಡಿದ ಕಾರ್ಯಕರ್ತರಿಗೆ ನೋವಾಗುವಂತೆ ಮಾಡಿದ್ದಾರೆ ಎಂದ ಅವರು ಸಚಿವ ಸತೀಶ ಜಾರಕಿಹೊಳಿ ಕಾಂಗ್ರೆಸ್ ಕಾರ್ಯಕರ್ತರ ಆತ್ಮ ಸ್ಥೈರ್ಯ ಕುಗ್ಗಿಸುವಂತಹ ಹೇಳಿಕೆಗಳನ್ನು ಕೊಡುವ ಮೂಲಕ ಪಕ್ಷದ ಸಂಘಟನೆಗೆ ಹಿನ್ನಡೆ ಉಂಟು ಮಾಡುತ್ತಿದ್ದಾರೆ ಎಂದರು.   

ಕಾಂಗ್ರೆಸ್ ಮುಖಂಡ ಶಿವಾನಂದ ದಿವಾನಮಳ ಮಾತನಾಡಿ, ಅಥಣಿ ಮತಕ್ಷೇತ್ರದಲ್ಲಿ ಕೇಂದ್ರದ ಮಾಜಿ ಸಚಿವ ಶಂಕರಾನಂದ ಅವರ ನಂತರ ನಡೆದ ಎಲ್ಲ ಲೋಕಸಭಾ ಚುನಾವಣೆಗಳಲ್ಲಿಯೂ ಬಿಜೆಪಿಗೆ ಹೆಚ್ಚೂವರಿ ಮತಗಳು ಬಂದಿದ್ದು, ಈಗಲೂ ಅದೇ ಮುಂದುವರೆದಿದೆ ಎಂದ ಅವರು ಒಂದು ವೇಳೆ ಲಕ್ಷ್ಮಣ ಸವದಿ ಬಹಿರಂಗವಾಗಿ ಬಿಜೆಪಿ ಪರವಾಗಿ ನಿಂತಿದ್ದರೆ ಅಥಣಿ ಮತ್ತು ಕಾಗವಾಡ ಕ್ಷೇತ್ರಗಳಲ್ಲಿ ಕನಿಷ್ಠ 75 ರಿಂದ 85 ಸಾವಿರದಷ್ಟು ಹೆಚ್ಚೂವರಿ ಮತಗಳು ಬಿಜೆಪಿಗೆ ಬರುತ್ತಿದ್ದವು ಎಂದರು.  

ಪತ್ರಿಕಾ ಗೋಷ್ಠಿಯಲ್ಲಿ ಧುರೀಣರಾದ ಶಿದರಾಯ ಯಲ್ಲಡಗಿ, ರಾಮನಗೌಡ ಪಾಟೀಲ, ಸಂತೋಷ ಸಾವಡಕರ, ಅಪ್ಪು ನೇಮಗೌಡ, ರಾಮನಗೌಡ ಪಾಟೀಲ, ಡಿ.ಬಿ.ಠಕ್ಕಣ್ಣವರ, ಆಸೀಫ್ ತಾಂಬೋಳಿ, ಸಿ.ಎಸ್‌.ನೇಮಗೌಡ, ಅನಂತ ಬಸರಿಖೋಡಿ ಮಾತನಾಡಿದರು.   

ಪುರಸಭಾ ಸದಸ್ಯರಾದ ಮಲ್ಲೇಶ ಹುದ್ದಾರ, ದೀಲೀಪ ಲೋಣಾರೆ, ರಾಜಶೇಖರ ಗುಡೋಡಗಿ, ಕಲ್ಲೇಶ ಮಡ್ಡಿ, ಧುರೀಣರಾದ ಹಣಮಂತ ಕಾಲವೆ, ನರಸು ಬಡಕಂಬಿ, ಶ್ರೀಶೈಲ ನಾಯಿಕ, ಪ್ರದೀಪ ನಂದಗಾಂವ, ಬಸವರಾಜ ಮರನೂರ, ಮಹಾಂತೇಶ ಠಕ್ಕಣ್ಣವರ, ಜಡೆಪ್ಪ ಕುಂಬಾರ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ