ಮಿನಿ ಕಾಡು ಸೃಷ್ಟಿಸುವ ಅವಶ್ಯಕತೆ ಇದೆ: ಕೆ.ಎಸ್.ಅಗಸನಾಳ
ಜಮಖಂಡಿ 13: ತಾಲೂಕಿನ ಪ್ರತಿ ಇಲಾಖೆಯಿಂದ ಮರಗಳಿಂದಾಗುವ ಲಾಭ ಮತ್ತು ಮರ ನಾಶದಿಂದಾಗುವ ಹಾನಿಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ಇಲಾಖೆಯ ಪ್ರತಿಯೊಂದು ಆವರಣದಲ್ಲಿ ಮಿನಿ ಕಾಡು ಸೃಷ್ಟಿಸುವ ಅವಶ್ಯಕತೆ ಇದೆ ಎಂದು ಉಪ ಕೃಷಿ ನಿರ್ದೇಶಕ ಕೆ.ಎಸ್.ಅಗಸನಾಳ ತಿಳಿಸಿದರು.
ನಗರದ ಕೃಷಿ ಇಲಾಖೆ ಆವರಣದಲ್ಲಿ ನಡೆದ ಕೋಟಿ ವೃಕ್ಷ ಅಭಿಯಾನದ ಅಂಗವಾಗಿ ಉಪ ಕೃಷಿ ನಿರ್ದೇಶಕ ಕೆ.ಎಸ್.ಅಗಸನಾಳ, ಸಹಾಯಕ ಕೃಷಿ ನಿರ್ದೇಶ ಎಸ್.ಬಿ. ಪಟ್ಟಿಹಾಳ ನೇತೃತ್ವದಲ್ಲಿ ಇಲಾಖೆ ಆವರಣವನ್ನು ಹಸೀರೀಕರಣಗೊಳಿಸುವ ನಿಟ್ಟಿನಲ್ಲಿ ವಿವಿಧ ಸಸಿಗಳಾದ ಪೇರಲ, ಆಲದ ಸಸಿ, ಗಾಳಿ ಮರ, ಸಿಲ್ವರ ಓಕ್, ನೇರಳೆ, ಪತ್ರಿ, ಹತ್ತಿಗಿಡ, ಅರಳಿಗಿಡ, ಅಶೋಕಗಿಡ, ಬಳೊಲಗಿಡ, ಚಿಕ್ಕು, ಕಾಡುನೆಲ್ಲಿ, ಬಸರಿಗಿಡ, ಹಲಸು, ಸಂಪಿಗೆ, ಹೊಂಗೆ, ಬೇವು ಮುಂತಾದ ಸುಮಾರು 120 ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ನೀರುಣಿಸಲಾಯಿತು.
ನಂತರ ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಪಟ್ಟಿಹಾಳ ಮಾತನಾಡಿ, ಜಾಗತಿಕ ತಾಪ ಮಾನವನ್ನು ತಡೆಗಟ್ಟಲು ಮತ್ತು ಮಾಲೀನ್ಯವನ್ನು ಕಡಿಮೆ ಮಾಡಲು ಉತ್ತಮ ಮಾರ್ಗಗಳಲ್ಲಿ ಒಂದಾದ ಮರಗಳನ್ನು ನೆಡುವ ಮತ್ತು ಪೋಷಿಸುವ ಅಗತ್ಯವಿದೆ. ಆಹಾರ ಸಂಪನ್ಮೂಲಗಳ ಉತ್ಪಾದನೆಯನ್ನು ಹೆಚ್ಚಿಸುವುದು, ಉತ್ಪಾದಕತೆಯನ್ನು ಹೆಚ್ಚಿಸಲು ಹೊಲದ ಸುತ್ತಲು ಮರಗಳನ್ನು ಹಚ್ಚುವುದು. ಇದರಿಂದ ಬರವನ್ನು ತಡೆಗಟ್ಟಿ, ಭೂ ಸವೆತವನ್ನು ತಡೆಯಲು ಸಹಾಯವಾಗುತ್ತದೆ ಎಂದರು.
ಅಭಿಯಾನದಲ್ಲಿ ಕೃಷಿ ಅಧಿಕಾರಿ ಶ್ರೀನಿವಾಸ ಪಾಟೀಲ, ಎಸ್.ಐ.ತೇಲಿ, ಎಸ್.ಎಂ ಬಿರಾದಾರ, ಶಂಕರರಾವ ಪವಾರ, ಎಂ.ಎಸ್.ಬುಜರುಖ್, ಆರ್.ಎನ್ ತುಳಸಿಗೇರಿ, ಆತ್ಮ ಯೋಜನೆಯ ಸಿಬ್ಬಂದಿ, ಮಣ್ಣು ಪರೀಕ್ಷಾ ಕೇಂದ್ರದ ಸಿಬ್ಬಂದಿ, ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.