ಗುರು-ಗುರಿ ಸಾಧನೆಗೆ ಪ್ರೇರಕ ಅಂಶ: ಅಂಶಗಳಾಗಿವೆ: ಡಿವೈಎಸ್ಪಿ ಶಾಂತವೀರ
ಲೋಕದರ್ಶನ ವರದಿ,
ಜಮಖಂಡಿ 23: ಗುರು-ಗುರಿ ಸಾಧನೆಗೆ ಪ್ರೇರಕದಾಯಕ ಅಂಶಗಳಾಗಿವೆ. ವಿದ್ಯಾರ್ಥಿಗಳ ಸಾಧನೆಗೆ ನಿಸ್ವಾರ್ಥದಿಂದ ಹೆಮ್ಮೆ ಪಡುವವರು ತಂದೆ-ತಾಯಿ ಹಾಗೂ ಗುರುಗಳು ಮಾತ್ರ. ಹಾಗಾಗಿ ತಂದೆ-ತಾಯಿ, ಗುರುಗಳೇ ವಿದ್ಯಾರ್ಥಿಗಳ ಹೀರೋ ಆಗಬೇಕು ಎಂದು ಡಿವೈಎಸ್ಪಿ ಶಾಂತವೀರ ಹೇಳಿದರು.
ನಗರದ ಬಸವಜ್ಯೋತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ 2023-24ನೇ ಸಾಲಿನ ವಿದ್ಯಾರ್ಥಿಗಳ ಸ್ವಾಗತ ಹಾಗೂ 2022-23ನೇ ಸಾಲಿನ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು,
ಗುರುವಿನ ಮಹತ್ವವನ್ನು ಚನ್ನಾಗಿ ತಿಳಿದುಕೊಂಡವರು ಜೀವನದಲ್ಲಿ ದೊಡ್ಡ ವ್ಯಕ್ತಿಗಳಾಗಿ ಬೆಳೆಯುತ್ತಾರೆ. ಗುರು-ಶಿಷ್ಯರ ಸಂಬಂಧ ಬಹಳ ಗಾಢವಾಗಿರುತ್ತದೆ. ಗುರುಗಳು ವಿದ್ಯಾಥರ್ಿಗಳ ಬಾಂಧವ್ಯದ ಸೇತುವೆ ಆಗಿರುತ್ತಾರೆ ಎಂದರು.
ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಸ್ನೇಹತ್ವ ಕನ್ನಡಿ ಮತ್ತು ನೆರಳಿನಂತಿರಬೇಕು. ಕನ್ನಡಿಗೆ ಸುಳ್ಳು ಗೊತ್ತಿಲ್ಲ. ನೆರಳು ಬಿಟ್ಟು ಇರುವುದಿಲ್ಲ.
ವಿಜ್ಞಾನದ ವಿಷಯಗಳು ಕಬ್ಬಿಣದ ಕಡಲೆ. ಸಾಧಾರಣ ಓದಿನಿಂದ ತಲೆಗೆ ಹತ್ತುವುದಿಲ್ಲ ಎಂಬ ಮನಸ್ಥಿತಿಯಿಂದ ಹೊರಗೆ ಬರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ಮಾತನಾಡಿ, ಪ್ರತಿಭೆಗೆ ಪುರಸ್ಕಾರ ನೀಡಬೇಕು. ಪುರಸ್ಕಾರದಿಂದ ಪ್ರತಿಭಾವಂತ ವಿದ್ಯಾರ್ಥಿಗಳ ಗೌರವ ಹೆಚ್ಚುತ್ತದೆ ಮತ್ತು ಪ್ರತಿಭೆಗೆ ಮನ್ನಣೆ ದೊರೆಯುತ್ತದೆ. ಅಲ್ಲದೆ ಪ್ರತಿಭೆಯನ್ನು ಉಳಿಸಿ ಬೆಳೆಸಿಕೊಳ್ಳುವ ಜವಾಬ್ದಾರಿ ಕೂಡ ಹೆಚ್ಚುತ್ತದೆ ಎಂದರು.
ವಿಶೇಷ ಸಾಧನೆಗೈದ ವಿಜ್ಞಾನ ವಿಭಾಗದ ದಾನೇಶ್ವರಿ ಠಕ್ಕನ್ನವರ ಹಾಗೂ ವಾಣಿಜ್ಯ ವಿಭಾಗದ ಕೀರ್ತನಾ ತೇರದಾಳ ವಿದ್ಯಾರ್ಥಿನಿಯರನ್ನು ದತ್ತಿನಿಧಿ ಶಿಷ್ಯವೇತನ ನೀಡಿ ಸನ್ಮಾನಿಸಲಾಯಿತು. ವಾಣಿಜ್ಯ ವಿಭಾಗದಲ್ಲಿ ಲೆಕ್ಕಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ವಿಷಯಗಳಿಗೆ ಅತಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗಾಗಿ ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ರೂ.25 ಸಾವಿರ ದತ್ತಿನಿಧಿ ಠೇವಣಿಯನ್ನು ಮಹಾವಿದ್ಯಾಲಯಕ್ಕೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಶಕುಂತಲಾ ಕಡ್ಡಿ ಇದ್ದರು. ಪೂಜಾ ಭಜಂತ್ರಿ, ಶ್ರುತಿ ಕೊನೆಗೋಳ ಪ್ರಾರ್ಥನೆ ಗೀತೆ ಹಾಡಿದರು. ಉಪನ್ಯಾಸಕಿ ಮಹಾದೇವಿ ಟಕ್ಕಳಕಿ ನಿರೂಪಿಸಿದರು. ಉಪನ್ಯಾಸಕ ಪಿ.ಎನ್. ವಜ್ರಮಟ್ಟಿ ವಂದಿಸಿದರು.