12ರಂದು ಸ್ವಾತಂತ್ರ್ಯ ಅಮೃತ ಮಹೋತ್ಸವ ಅರ್ಥಪೂರ್ಣ ಆಚರಣೆ: ಪೂಜಾರಿ
ಲೋಕದರ್ಶನ ವರದಿ
ಗೋಕಾಕ 08: ಇದೇ ಶುಕ್ರವಾರ ದಿ. 12ರಂದು ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆಯನ್ನು ಸ್ವಾತಂತ್ರ್ಯೋತ್ಸವ ನಡಿಗೆಯ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುವದು ಎಂದು ಕಾಂಗ್ರೇಸ್ ಮುಖಂಡ ಅಶೋಕ ಪೂಜಾರಿ ಅವರು ಹೇಳಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಅವರು ಭಾರತ ದೇಶವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಸ್ವತಂತ್ರ ರಾಷ್ಟ್ರವನ್ನಾಗಿಸಲು ಲಕ್ಷಾಂತರ ಜನ ಸ್ವಾತಂತ್ರ್ಯ ಯೋಧರು ಜೀವ ಬಲಿದಾನ ನೀಡಿದ್ದಾರೆ. ಇಡೀ ದೇಶದ ಜನತೆ ಪೂಜ್ಯ ಮಹಾತ್ಮಾ ಗಾಂಧಿಜೀಯವರ ನೇತೃತ್ವದ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ತ್ಯಾಗ ಬಲಿದಾನಗಳೊಂದಿಗೆ ಕೋಟ್ಯಾಂತರ ಜನರು ನಡೆಸಿದ ಹೋರಾಟದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದರೂ ಸಹ ಆ ಹೋರಾಟದ ಸಂಘಟನೆಯ ಹಿಂದಿನ ಶಕ್ತಿ ಅಂದಿನ ಕಾಂಗ್ರೆಸ್ ಸಂಘಟನೆಯಾಗಿತ್ತು. ಅದೇ ಕಾರಣದಿಂದ ಸ್ವಾತಂತ್ರ್ಯ ದಿನೋತ್ಸವದ ಅಮೃತ ಮಹೋತ್ಸವದ ಅಮೃತ ಘಳಿಗೆ ಕಾಂಗ್ರೆಸ್ ಪಕ್ಷಕ್ಕೆ ದೇಶಾಭಿಮಾನ ಮತ್ತು ಸ್ವಾಭಿಮಾನದ ಸಂಕೇತವಾಗಿದೆ ಎಂದು ಸ್ವಾತಂತ್ರದ ಹೋರಾಟದಲ್ಲಿ ಕಾಂಗ್ರೆಸ್ ಸಂಘಟನೆಯ ಕೊಡುಗೆಯನ್ನು ಸ್ಮರಿಸಿದರು.
ಇದೇ ಕಾರಣದಿಂದ ದೇಶದಾದ್ಯಂತ ಕಾಂಗ್ರೆಸ್ ಸ್ವಾತಂತ್ರ ದಿನೋತ್ಸವದ ಅಮೃತ ಮಹೋತ್ಸವದ ಅಮೃತ ಘಳಿಗೆಯ ಮೆರವಣಿಗೆಯನ್ನು ರಾಷ್ಟ್ರಧ್ವಜವನ್ನು ಎತ್ತರಕ್ಕೆ ಹಿಡಿದು ಪಾದಯಾತ್ರೆಯ ಮುಖಾಂತರ ಆಚರಿಸುತ್ತಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಮತ್ತು ಬಲಿದಾನ ಮಾಡಿರುವ ಸ್ವಾತಂತ್ರ್ಯ ಹೋರಾಟಗಾರರನ್ನು ಮನಪೂರ್ವಕವಾಗಿ ಸ್ಮರಿಸುತ್ತಿರುವದು ಅರ್ಥಪೂರ್ಣ ಆಚರಣೆಯಾಗಿದೆ ಎಂದು ತಿಳಿಸಿದರು.
ಶುಕ್ರವಾರ ದಿ. 12ರಂದು ಗೋಕಾಕ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ಅಂದು ಮುಂ. 9ಗಂಟೆಗೆ ಗೋಕಾಕ ವಿಧಾನಸಭಾ ಮತಕ್ಷೇತ್ರದ ಪಾಮಲದಿನ್ನಿ ಗ್ರಾಮದಿಂದ ಹೊರಡುವ ಕಾಲ್ನಡಿಗೆ ಜಾಥಾವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರು ಉದ್ಘಾಟಿಸಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದರು.
ಕಾಲ್ನಡಿಗೆಯ ಜಾಥಾ ಕ್ಷೇತ್ರದ ಪಾಮಲದಿನ್ನಿ, ಮಲ್ಲಾಪೂರ ಪಿ.ಜಿ., ಘಟಪ್ರಭಾ, ಶಿಂಧಿಕುರಬೇಟ, ದುಪಧಾಳ, ಕೊಣ್ಣೂರ, ಸಾವಳಗಿ, ಮುತ್ನಾಳ, ಖಾನಾಪೂರ, ನಂದಗಾಂವ, ಶಿವಾಪೂರ(ಕೊ), ಮರಡಿಮಠ, ಮಾಣಿಕವಾಡಿ, ಗೋಕಾಕ ಪಾಲ್ಸ ಮತ್ತು ಗೋಕಾಕ ನಗರದಲ್ಲಿ ಸಂಚರಿಸಲಿದ್ದು ಸಂಗೊಳ್ಳಿ ರಾಯಣ್ಣಾ ವೃತ್ತದಲ್ಲಿ ಸಮಾರೋಪಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು, ಕಾರ್ಯರ್ತರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಮುಖಂಡರುಗಳಾದ ಸಿದ್ದಲಿಂಗ ದಳವಾಯಿ, ವಿವೇಕ ಜತ್ತಿ, ಪುಟ್ಟು ಖಾನಾಪೂರೆ, ಗೋಕಾಕ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಅಧ್ಯಕ್ಷ ಪ್ರಕಾಶ ಡಾಂಗೆ, ನಗರ ಘಟಕದ ಅಧ್ಯಕ್ಷ ಜಾಕೀರ ನಧಾಪ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಮ್ರಾನ ತಪಕೇರ, ನಗರ ಘಟಕದ ಅಧ್ಯಕ್ಷ ಮುಸ್ತಾಕ ಪುಲತಾಂಬೆ, ನಿಂಗಪ್ಪ ಅಮ್ಮಿನಭಾಂವಿ, ಸಿದ್ದು ಶಿರಸಂಗಿ ಮುಂತಾದವರು ಉಪಸ್ಥಿತರಿದ್ದರು.