ಅಥಣಿ

ಮಲ್ಲಿಕಾರ್ಜುನ ಕ್ರೆಡಿಟ್ ಸೌಹಾರ್ದ ಸಹಕಾರಿಯ ನೂತನ ಕಟ್ಟಡ ಪೂಜೆ

ಮಲ್ಲಿಕಾರ್ಜುನ ಕ್ರೆಡಿಟ್ ಸೌಹಾರ್ದ ಸಹಕಾರಿಯ ನೂತನ ಕಟ್ಟಡ ಪೂಜೆ

ಅಥಣಿ 14:  ಅಥಣಿಯ ಮಲ್ಲಿಕಾರ್ಜುನ ಕ್ರೆಡಿಟ್ ಸೌಹಾರ್ದ ಸಹಕಾರಿಯ ನೂತನ ಕಟ್ಟಡವನ್ನು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಶಿವಾನಂದ ದಿವಾನಮಳ ಅಧ್ಯಕ್ಷತೆಯಲ್ಲಿ ಉದ್ಘಾಟಿಸಿದರು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ, ಸೌಹಾರ್ದ ಸಹಕಾರಿಯ ಅಧ್ಯಕ್ಷ ಶಿವಾನಂದ ದಿವಾನಮಳ ಅಧ್ಯಕ್ಷತೆಯಲ್ಲಿ ಕಳೆದ 14 ವರ್ಷಗಳಿಂದಲೂ ಆರ್ಥಿಕ ಸುಸ್ಥಿರ ದಲ್ಲಿ ಮುನ್ನಡೆದುಕೊಂಡು ಬಂದಿದ್ದು, ಇದಕ್ಕೆ ಪ್ರಮುಖವಾಗಿ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ ಮತ್ತು ಸಂಘದ  ಸದಸ್ಯರು ಕಾರಣ ಎಂದ ಅವರು  ರಾಜ್ಯದಲ್ಲಿ ಅನೇಕ ಸೌಹಾರ್ದ ಸಹಕಾರಿಗಳು ಆಡಳಿತ ಮಂಡಳಿಗಳ ತಪ್ಪು ನೀತಿಯಿಂದ ದಿವಾಳಿಯಾಗಿ ಠೇವಣಿದಾರರ ಹಣ ನುಂಗಿ ಹಾಕಿವೆ ಆದರೆ ಇಲ್ಲಿಯ ಸಹಕಾರಿ ಸಂಘ ಮಾತ್ರ ದಿನದಿಂದ ದಿನಕ್ಕೆ ಆರ್ಥಿಕ ಧೃಢವಾಗುತ್ತಿರುವುದು ಅಭಿನಂದನಾರ್ಹ ಸಂಗತಿ ಎಂದರು.       

ರಾಜ್ಯದಲ್ಲಿ ಈಗಿದ್ದ ಸಹಕಾರಿ ಕಾನೂನಿನಲ್ಲಿ ಕೆಲ ಅವಶ್ಯಕ  ಬದಲಾವಣೆಗಳು, ತಿದ್ದುಪಡಿತರುವ ಮೂಲಕ ಸಹಕಾರಿ ಕಾನೂನಿಗೆ  ಬಲ ನೀಡಬೇಕೆಂದು ನನ್ನ ಅಧ್ಯಕ್ಷತೆಯಲ್ಲಿ  7 ಜನರ ಸಮಿತಿ ರಚನೆಯಾಗಿದ್ದು, ಎಲ್ಲ ಅಧ್ಯಯನ ಮುಕ್ತಾಯಗೊಂಡು ಮುಂಗಾರು ಅಧಿವೇಶನದಲ್ಲಿ ಮಂಡನೆಯಾಗಿ ರಾಜ್ಯಪಾಲರ ಅಂಕಿತಕ್ಕೆ ಹೋಗಿದೆ ಎಂದ ಅವರು ರಾಜ್ಯ ಸೌಹಾರ್ದ ಸಹಕಾರಿ ಕಾನೂನನ್ನು ತೆಗೆದು ಹಾಕಿ ಇಡೀ ರಾಜ್ಯಕ್ಕೆ ಒಂದೇ ಒಂದು ಸಹಕಾರಿ ಕಾನೂನು ಬರುವಂತೆ ಮಾಡಿ ಎಂದು ನಮ್ಮ ಮೇಲೆ ಒತ್ತಡ ಇದ್ದರೂ ಕೂಡ ಸೌಹಾರ್ದ ಕಾನೂನು ಉಳಿಸಿದ್ದೇವೆ ಎಂದರು.         

ರಾಜ್ಯದಲ್ಲಿ ಅನೇಕ ಸೌಹಾರ್ದ ಸಂಘಗಳು, ಬ್ಯಾಂಕುಗಳು ದಿವಾಳಿಯಾಗಿದ್ದು, ಇದರ ಪರಿಣಾಮ ಲಕ್ಷಾಂತರ ಜನ ತಮ್ಮ ಠೇವಣಿ ಹಣ ಕಳೆದುಕೊಂಡಿದ್ದಾರೆ ಎಂದ ಅವರು ಮುಂದಿನ ದಿನಗಳಲ್ಲಿ ಸರಿಯಾದ ರೀತಿಯಲ್ಲಿ ಸಂಘಗಳನ್ನು ಮುನ್ನಡೆಸಿಕೊಂಡು ಹೋಗುವ ಮೂಲಕ ಜನರ ವಿಶ್ವಾಸ ಉಳಿಸಿಕೊಂಡು ಹೋಗಬೇಕು ಎಂದು ಕಿವಿ ಮಾತು ಹೇಳಿದರು. ಮಲ್ಲಿಕಾರ್ಜುನ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ದಿವಾನಮಳ ಮಾತನಾಡಿ, 2009 ರಲ್ಲಿ ಶ್ರೀ ಮರುಳ ಶಂಕರ ದೇವರ ಹಾಗೂ ಲಿಂ. ಚನ್ನಬಸವ ಸ್ವಾಮೀಜಿ ಸಾನಿಧ್ಯದಲ್ಲಿ ಪ್ರಾರಂಭಗೊಂಡ ಮಲ್ಲಿಕಾರ್ಜುನ ಕ್ರೆಡಿಟ್ ಸೌಹಾರ್ದ ಸಹಕಾರಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದ್ದು, ಇದಕ್ಕೆ ಪ್ರಮುಖವಾಗಿ ಸಂಘದ ಆಡಳಿತ ಮಂಡಳಿ, ಸಿಬ್ಬಂದಿ, ಠೇವಣಿ ಹಾಗೂ ಸಾಲಗಾರರ ಸಹಕಾರವೇ ಕಾರಣ ಎಂದರು.      

ಮಲ್ಲಿಕಾರ್ಜುನ ಕ್ರೆಡಿಟ್ ಸಹಕಾರಿಯ ಆಡಳಿತ ಮಂಡಳಿಯ ಯಾವ ಸದಸ್ಯರೂ ಕೂಡ 2009 ರಿಂದಲೂ ಲಾಭಾಂಶದಲ್ಲಿನ ಸಭೆಯ ಭತ್ತಾ ಪಡೆದುಕೊಳ್ಳದೆ ಅದೇ ಭತ್ತಾದಿಂದ ಬರುವ ಹಣವನ್ನು ಠೇವಣಿ ಇಡಲಾಗಿತ್ತು  ಎಂದ ಅವರು ಆ ಠೇವಣಿ ಹಣದಲ್ಲಿಯೇ ಕ್ರೆಡಿಟ್ ಸೌಹಾರ್ದ ಸಹಕಾರಿಯ ನೂತನ ಕಟ್ಟಡ ನಿರ್ಮಿಸಲಾಗಿದೆ ಎಂದರು. ಕಳೆದ ಅನೇಕ ದಶಕಗಳಿಂದಲೂ ಕ್ಷೇತ್ರ ಶ್ರೀಶೈಲಕ್ಕೆ ಪಾದಯಾತ್ರೆ ಮೂಲಕ ತೆರಳುವ ಸಮಯದಲ್ಲಿಯೇ ಈ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವನ್ನು ಪ್ರಾರಂಭಿಸುವ ಪ್ರೇರಣೆ ಅಥವಾ ಯೋಚನೆ ನಮಗೆ ಬಂದ ಪರಿಣಾಮವೇ ಇಂದು ಶ್ರೀಶೈಲ ಮಲ್ಲಿಕಾರ್ಜುನ ಹೆಸರಿನಲ್ಲಿ ಸಹಕಾರಿ ಸಂಘ ಪ್ರಾರಂಭಿಸಿದ್ದೇವೆ ಎಂದ ಅವರು ಸದ್ಯದ ಸ್ಥಿತಿಯಲ್ಲಿ 19 ಕೋಟಿ 24 ಲಕ್ಷಕ್ಕೂ ಹೆಚ್ಚು ದುಡಿಯುವ ಬಂಡವಾಳ,  1549 ಸದಸ್ಯರು,  60 ಲಕ್ಷ 55 ಸಾವಿರಕ್ಕೂ ಹೆಚ್ಚು ಶೇರ್ ಬಂಡವಾಳ, 1 ಕೋಟಿ 84 ಲಕ್ಷಕ್ಕೂ ಹೆಚ್ಚು ಕಾಯ್ದಿಟ್ಟ ನಿಧಿ, 16 ಕೋಟಿ 22 ಲಕ್ಷಕ್ಕೂ ಹೆಚ್ಚು  ಠೇವಣಿ ಹೊಂದಿರುವ ನಮ್ಮ ಸಹಕಾರಿ ಸಂಸ್ಥೆ ಸಾಲಗಾರ ಸದಸ್ಯರಿಗೆ  14 ಕೋಟಿ 25 ಲಕ್ಷಕ್ಕೂ ಹೆಚ್ಚು ಸಾಲ ವಿತರಿಸುವ ಮೂಲಕ 47 ಲಕ್ಷಕ್ಕೂ ಹೆಚ್ಚು ಲಾಭಾಂಶ ಪ್ರಸಕ್ತ ಸಾಲಿನಲ್ಲಿ ಆಗಿದೆ ಎಂದರು. ಸಮಾರಂಭದ ಸಾನಿಧ್ಯವನ್ನು ಗಚ್ಚಿನ ಮಠದ ಶ್ರೀ ಶಿವಬಸವ ಸ್ವಾಮೀಜಿ ವಹಿಸಿ ಮಾತನಾಡಿ ಮಲ್ಲಿಕಾರ್ಜುನ ಕ್ರೆಡಿಟ್ ಸೌಹಾರ್ದ ಸಹಕಾರಿ ಶತಮಾನೋತ್ಸವ ಆಚರಿಸಿಕೊಳ್ಳಲಿ ಎಂದು ಶುಭ ಹಾರೈಸಿದರು. ಸಾನಿಧ್ಯ ವಹಿಸಿದ್ದ ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ, ತೆಲಸಂಗ ಹಿರೇಮಠದ ವಿರೇಶ್ವರ ದೇವರು ವಹಿಸಿ ಮಾತನಾಡಿದರು.  

ಮುಖ್ಯ ಅತಿಥಿಗಳಾಗಿ  ಕರ್ನಾಟಕ ಸೌಹಾರ್ದ ಸಹಕಾರಿಯ ಬೆಳಗಾವಿಯ ಪ್ರಾಂತೀಯ ವ್ಯವಸ್ಥಾಪಕರಾದ ಬಸವರಾಜ ಹೊಂಗಲ್, ಬೆಳಗಾವಿಯ ಲೆಕ್ಕ ಪರಿಶೋಧಕ ಅಶೋಕ ಮೆಣಸಿ, ಸ್ಥಳೀಯ ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ನೂಲಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಇಂಜನೀಯರ್ ರಾಜಶೇಖರ ಟೊಪಗಿ, ಸಾಂಗಲಿಯ ಇಂಜನೀಯರ್ ಗೀರೀಶ ಪಾಟೀಲ, ಅಥಣಿಯ ಆರ್ಕಿಟೆಕ್ಟ ತುಕಾರಾಮ ಮಾಳಿ ಇವರನ್ನು  ಕೂಡ ಸನ್ಮಾನಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಹಣಮಂತ ಕಾಲವೆ ಉಪಸ್ಥಿತರಿದ್ದರು. 


ಸುದ್ದಿ ಓದಿ