ಅಥಣಿ

ಮಹಾಂತ ಸದ್ಗುರು ಗಂಗಾಗಿರಿ ಮಹಾರಾಜರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ

ಮಹಾಂತ ಸದ್ಗುರು ಗಂಗಾಗಿರಿ ಮಹಾರಾಜರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ

ಅಥಣಿ 26: ಪ್ರವಾದಿ ಹಜರತ್ ಮಹ್ಮದ ಪೈಗಂಬರ ಕುರಿತಾಗಿ ಮಹಾರಾಷ್ಟ್ರದ ಅಹ್ಮದ ನಗರ ಜಿಲ್ಲೆಯ ಶ್ರೀರಾಮಪುರ ತಾಲೂಕಿನ ಸರಾಳ ಭೇಟ ಸಂಸ್ಥಾನ ಮಠದ ಮಹಾಂತ ಸದ್ಗುರು ಗಂಗಾಗಿರಿ ಮಹಾರಾಜರು ಅವಹೇಳನಕಾರಿ ಭಾಷಣ ಮಾಡಿದ್ದು, ಈ ಸ್ವಾಮೀಜಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಇಸ್ಲಾ ಸಮಾಜದ ಮುಖಂಡ, ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಆಗ್ರಹಿಸಿದರು. ಅಥಣಿ ಅಂಜುಮನ್ ಎ ಇಸ್ಲಾಂ ಮತ್ತು ಜಮಿಯತ್ ಉಲೇಮಾ ಎ ಹಿಂದ  ಸಂಘಟನೆಗಳ ನೇತೃತ್ವದಲ್ಲಿ ಅಂಬೇಡ್ಕರ ವೃತ್ತದಲ್ಲಿ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.  

ಸಂವಿಧಾನದ ಆಶಯದಂತೆ ಭಾರತದಲ್ಲಿ ಎಲ್ಲ ಧರ್ಮ, ಸಮಾಜ ಬಂಧುಗಳು ಸಮಾನ ರೀತಿಯಲ್ಲಿ ಜೀವನ ನಡೆಸಲು ಅನುವು ಮಾಡಿಕೊಟ್ಟಿದ್ದರೂ ಕೂಡ ರಾಮಗಿರಿಯ ಮಹಾಂತ ಸ್ವಾಮೀಜಿ ಪ್ರವಾದಿ ಹಜರತ್ ಮೊಹ್ಮದ ಪೈಗಂಬರರ ಕುರಿತು ಮಾತನಾಡಿರುವುದು ಇಸ್ಲಾ ಸಮಾಜದ ಬಾಂಧವರಿಗೆ ನೋವನ್ನುಂಟು ಮಾಡಿದ್ದು, ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಇಂತಹ ಸ್ವಾಮೀಜಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸಿದರು. 

ಇಸ್ಲಾಂ ಸಮಾಜದ ಮುಖಂಡ ಅಸ್ಲಂ ನಾಲಬಂದ ಮಾತನಾಡಿ, ಮಹಾರಾಷ್ಟ್ರದ ಸ್ವಾಮೀಜಿಯೋರ್ವರು ಮಾಡಿದ ಭಾಷಣ ಸಮಾಜದ ಸಾಮರಸ್ಯ ಹಾಳು ಮಾಡಿದ್ದು, ಇದರಿಂದ ಕೇವಲ ಇಸ್ಲಾಂ ಸಮಾಜದ ಬಂಧುಗಳಿಗೆ ಮಾತ್ರವಲ್ಲ ಎಲ್ಲರಿಗೂ ನೋವಾಗಿದೆ ಎಂದ ಅವರು ಈ ರೀತಿ ಬೇರೆ ಯಾರೂ ಯಾವ ಧರ್ಮದ ಕುರಿತಾಗಿಯೂ ಅವಹೇಳನಕಾರಿಯಾಗಿ ಮಾತನಾಡಬಾರದು. ಇದಕ್ಕಾಗಿ ವಿಶೇಷ ಕಾನೂನು ರಚಿಸಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸಿದರು. 

ಇಸ್ಲಾಂ ಧರ್ಮಗುರು ಮುಫ್ತಿಸಾಬ ಹಬೀಬುಲ್ಲಾ ಮುಲ್ಲಾ ಮಾತನಾಡಿ, ಈ ರೀತಿ ಹೇಳಿಕೆಗಳು ದೇಶದ ಸಾಮರಸ್ಯ ಹಾಳು ಮಾಡುತ್ತವೆ ಹೀಗಾಗಿ ವಿಶೇಷ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಮುಖಂಡ ಯುನ್ನುಸ್ ಮುಲ್ಲಾ ಸೇರಿ ಅನೇಕರು ಮುಖಂಡರು ಮಾತನಾಡಿದರು. ಅಂಜುಮನ್ ಇಸ್ಲಾಂ ಸಂಘಟನೆಯ ಅಧ್ಯಕ್ಷ ಸೈಯ್ಯದಮೀನ್ ಗದ್ಯಾಳ,  ಅಯ್ಯಾಜ ಮಾಸ್ಟರ್‌. ಬಾಬು ಖೇಮಲಾಪೂರ. ಸೈಯದ್ ಗಡ್ಡೇಕರ.  ಆಸೀಫ್ ತಾಂಬೋಳಿ. ಯೂನುಸ್ ಮುಲ್ಲಾ. ಮುಸ್ತಾಕ್ ಮುಲ್ಲಾ, ಮೌಲಾನಾ ಜುಬೇರ್, ಮೌಲಾನಾ ಸಹೇಲ್ ಹೆರವಾಡೆ, ಆಬೀದ್ ಮಾಸ್ಟರ್‌. ಅಮಾನುಲ್ಲಾ ಮುಲ್ಲಾ. ಜುಬೇರ್ ನಾಲಬಂದ. ಇಮ್ರಾನ್ ಪಟಾಯಿತ್ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಇಸ್ಲಾಂ ಸಮಾಜ ಬಾಂಧವರು ಪಾಲ್ಗೊಂಡಿದ್ದರು. 


ಸುದ್ದಿ ಓದಿ