ಗೋಕಾಕ್

ಮಹಾ ದಾಸೋಹಿ ಸಿರಸಂಗಿ ಲಿಂಗರಾಜರು: ಡಾ.ಸಿ.ಕೆ ನಾವಲಗಿ

ಮಹಾ ದಾಸೋಹಿ ಸಿರಸಂಗಿ ಲಿಂಗರಾಜರು: ಡಾ.ಸಿ.ಕೆ ನಾವಲಗಿ

ಗೋಕಾಕ 12: ಸಿರಸಂಗಿ ಸಂಸ್ಥಾನದ 13ನೇ ದೊರೆ ಲಿಂಗರಾಜರನ್ನು ಮಹಾದಾನಿ, ಅವರು ಬರೆದ ಮೃತ್ಯು ಪತ್ರವನ್ನು ‘ದಾನಪತ್ರ’ ಎಂದು ಕರೆಯುವುದಕ್ಕಿಂತ ಅವರನ್ನು “ಮಹಾದಾಸೋಹಿ” ಅದನ್ನು “ಮಹಾದಾಸೋಹ ಪತ್ರ” ಎಂದು ಕರೆಯುವುದೇ ಸೂಕ್ತವೆಂದು ಜಾನಪದ ವಿದ್ವಾಂಸ, ಸಾಹಿತ್ಯ ಸಂಸ್ಕೃತಿ ಚಿಂತಕ ಡಾ.ಸಿ.ಕೆ ನಾವಲಗಿ ಅಭಿಪ್ರಾಯಿಸಿದರು.  

ಅವರು, ಗೋಕಾಕ್ ಕೆಎಲ್‌ಇ ಸಂಸ್ಥೆಯ ಪದವಿ ಮಹಾವಿಶ್ವವಿದ್ಯಾಲಯದಲ್ಲಿ ಅಂಗ ಸಂಸ್ಥೆಗಳೆಲ್ಲ ಸೇರಿ ಹಮ್ಮಿಕೊಂಡ ತ್ಯಾಗವೀರ ಸಿರಸಂಗಿ ಲಿಂಗರಾಜರ 163ನೇ ಜಯಂತಿ ಉತ್ಸವದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. 

 ‘ದಾನ’ ಪದ ಇತ್ತೀಚೆಗೆ ಹೀನಾರ್ಥದಲ್ಲಿ ಬಳಕೆಯಾಗುತ್ತಿದ್ದು, ಅದರ ಸ್ಥಾನದಲ್ಲಿ ‘ದಾಸೋಹ’ ಪದ ಬಳಸಿದರೆ ಲಿಂಗರಾಜರ ತ್ಯಾಗದ ಘನ ವ್ಯಕ್ತಿತ್ವದ ಪಾವಿತ್ರ್ಯ ಮತ್ತು ಅರ್ಥವಿಸ್ತಾರವನ್ನು ಬಿಂಬಿಸುತ್ತದೆ. ಹಾಗಾಗಿ ಇನ್ನು ಮುಂದೆ ಕಲಿಯುಗದ “ಮಹಾದಾಸೋಹಶೂರ” ಸಿರಸಂಗಿ ಲಿಂಗರಾಜರೆಂದು ಕರೆಯುವುದು ಅತ್ಯಂತ ಸೂಕ್ತವೆಂದರು. ಲಿಂಗರಾಜರು ತಮ್ಮ ಇಡೀ ಜೀವನದಲ್ಲಿ ತನ್ನವರಿಂದಲೇ ತುಂಬ ಕಷ್ಟ-ನಷ್ಟ ಅನುಭವಿಸಿದರೂ, ಸಂಸ್ಥಾನದ ಕೋಟಿ ಕೋಟಿ ಸ್ಥಿರ ಮತ್ತು ಚರ ಆಸ್ತಿಯನ್ನು ತಮ್ಮ ‘ಮೃತ್ಯುಪತ್ರ’ದ ಮೂಲಕ ಸಮಸ್ತ ಗುರು-ಲಿಂಗ-ಜಂಗಮ ಸಮಾಜಕ್ಕೆ ಧಾರೆಯೆರೆದರು. ಅವರ ದೂರದೃಷ್ಟಿ, ಪ್ರತಿಭೆ, ಕುಶಾಗ್ರಮತಿ ಮತ್ತು ಮಾನವ ಪ್ರೇಮದ ಸಂಕೇತವೇ ಮೃತ್ಯುಪತ್ರವೆಂದರು.  

ಸಮಾಜದ ಶಿಕ್ಷಣ, ಕೃಷಿ, ವ್ಯಾಪಾರ, ವಹಿವಾಟು, ಸಾಹಿತ್ಯ, ಸಂಸ್ಕೃತಿ, ಕಲೆ, ಭಾಷೆ, ದೇವಾಲಯ, ಮಠ-ಪೀಠ ಪುರೋಭಿವೃದ್ಧಿಗಾಗಿ ತನುಮನ ಧನ ಸಹಾಯ ನೀಡಿದ ಉದಾರ ಹೃದಯಿ ಲಿಂಗರಾಜರು ಸಮಾಜದ ಕಾಮಧೇನು-ಕಲ್ಪವೃಕ್ಷ. 20ನೇ ಶತಮಾನದ ಶರಣ ಜೀವಿಯಾದ ಇವರು ಎಲ್ಲರಂತೆ ಬಂದರು, ಹೋದರು ಅಂತಲ್ಲ! ಅವರು ಬಂದರೂ ಎಲ್ಲರ ಅಂತರಂಗದಲ್ಲಿ ತಮ್ಮ ಕರ್ತೃತ್ವ ಶಕ್ತಿಯಿಂದ ನಿರಂತರ ನೆಲೆ ನಿಂತವರೆಂದು ಹೇಳಿದ ಡಾ. ನಾವಲಗಿ ಅವರ ಜೀವನ-ಸಾಧನೆ ಮುಂದಿನ ಪೀಳಿಗೆಗೂ ಅನುಕರಣೀಯವೆಂದರು.  

ಸ್ಥಾನಿಕ ಅಧ್ಯಕ್ಷ ಎಂ.ಡಿ ಚುನಮರಿ, ಪ್ರಿ.ಜಿ.ಎಂ ಅಂದಾನಿ ಅನುಪಕೌಶಿಕ ವೇದಿಕೆಯಲ್ಲಿದ್ದರು. ಪ್ರೊ. ಜ್ಯೋತಿಮಾಸ್ತಿ ಹೊಳಿ,  ಪ್ರಿ.ಮೇವುಂಡಿಮಠ, ಪ್ರೊ. ಪಾಟೀಲ್ ಅಂಗಡಿ, ಚುನಮುರಿ ಉಪಸ್ಥಿತರಿದ್ದರು. 


ಸುದ್ದಿ ಓದಿ