ಬೆಳಗಾವಿ

ವಿವಿಧ ವಿಷಯಗಳ ಕುರಿತು ಎಮ್‌ಎಲ್‌ಸಿ ಡಾ. ತಳವಾರ ಚರ್ಚೆ

ವಿವಿಧ ವಿಷಯಗಳ ಕುರಿತು ಎಮ್‌ಎಲ್‌ಸಿ ಡಾ. ತಳವಾರ ಚರ್ಚೆ


ಬೆಳಗಾವಿ 23: ಕರ್ನಾಟಕ ರಾಜ್ಯದ ವಿಧಾನ ಪರಿಷತ್ತಿನ  ಸದಸ್ಯರು ಹಾಗೂ ಕರ್ನಾಟಕ ವಿಧಾನಮಂಡಲದ  ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ  ಕಲ್ಯಾಣ ಸಮಿತಿಯ ಸದಸ್ಯ ಡಾ. ತಳವಾರ ಸಾಬಣ್ಣಾ ಅವರು ಕರ್ನಾಟಕ  ರಾಜ್ಯದ ಅದರಲ್ಲೂ ವಿಶೇಷವಾಗಿ ಕಲಬುರಗಿ  ಹಾಗೂ ಬೆಳಗಾವಿ ವಿಭಾಗಗಳಲ್ಲಿ ಬರುವ  ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು,  ಸರ್ಕಾರಿ ಹಾಸ್ಟೆಲ್‌ಗಳು ಮತ್ತು  ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿ/ವಿದ್ಯಾರ್ಥಿನಿಯರುಗಳು ಮತ್ತು ಪೋಷಕರೊಂದಿಗೆ  ಸಂವಾದ ನಡೆಸಿರುತ್ತಾರೆ. ಈ ಹಿನ್ನೆಲೆಯಲ್ಲಿ,  ಕರ್ನಾಟಕ ವಿಧಾನಮಂಡಲದ ಹಿಂದುಳಿದ  ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ  ಸಮಿತಿ ಸದಸ್ಯರು ದಿ. 21ರಂದು ನಡೆದ ಸಭೆಯಲ್ಲಿ ಉನ್ನತ ಶಿಕ್ಷಣ  ಇಲಾಖೆಗೆ ಸಂಬಂಧಿಸಿದ ಹಲವಾರು ವಿಷಯಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿದರು.    

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸ್ನಾತಕೋತ್ತರ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಇರುವ ಅನಾನುಕೂಲತೆಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದಾಗ ಮುಂದಿನ ಶೈಕ್ಷಣಿಕ  ವರ್ಷದಿಂದ ಹಂತ ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಲು ಇಲಾಖೆ ಪ್ರಯತ್ನಿಸುತ್ತಿದೆ  ಎಂದು ಉನ್ನತ ಶಿಕ್ಷಣ ಇಲಾಖೆಯವರು  ಮಾಹಿತಿ ನೀಡಿದರು. ವಿಶ್ವವಿದ್ಯಾಲಯಗಳಲ್ಲಿರುವ ಮಾಹಾಪುರುಷರ ಅಧ್ಯಯನ ಪೀಠಗಳ  ಸ್ಥಿತಿಗತಿಗೆ ಸಂಬಂಧಿಸಿದಂತೆ ಕೇಳಿದ ಮಾಹಿತಿಗೆ ವಿಶ್ವವಿದ್ಯಾಲಯಗಳು ಸರ್ಕಾರವು ಒದಗಿಸಿದ ಸಂಪನ್ಮೂಲಗಳಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಇಲಾಖೆಯವರು ತಿಳಿಸಿದರು.  ಬಹಳಷ್ಟು ವಿಶ್ವವಿದ್ಯಾಲಯಗಳಲ್ಲಿ ಮಹಾಪುರುಷರ ಅಧ್ಯಯನ ಪೀಠಗಳ ಶೈಕ್ಷಣಿಕ ಚಟುವಟಿಕೆಗಳು ಕೈಗೊಳ್ಳದಿರುವುದರಿಂದ ಉನ್ನತ ಶಿಕ್ಷಣ ಇಲಾಖೆ ಅವುಗಳ ಪುನಶ್ಚೇತನಕ್ಕೆ ತೀವ್ರವಾಗಿ ಪ್ರಯತ್ನಿಸಬೇಕು ಎಂದು ಮಾನ್ಯ ಸದಸ್ಯರು ಆಗ್ರಹಿಸಿದರು. ಇದರಿಂದ ಮಹಾಪುರುಷರ ಹೆಸರಿನಲ್ಲಿ ಸ್ಥಾಪಿತವಾದ ಅಧ್ಯಯನ ಪೀಠಗಳಿಗೆ ಒಂದು ಗೌರವ  ಮತ್ತು ಅರ್ಥ ಬರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.   

ಕಲಬುರಗಿ, ಯಾದಗಿರಿ, ಬೆಳಗಾವಿ,  ಧಾರವಾಡ, ವಿಜಯಪುರ, ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಸರ್ಕಾರಿ ಪ್ರಥಮ  ದರ್ಜೆ ಕಾಲೇಜುಗಳಿಗೆ ಮಾನ್ಯ ವಿಧಾನ  ಪರಿಷತ್ ಸದಸ್ಯರು ಭೇಟಿ ನೀಡಿದಾಗ ಅತಿಥಿ  ಉಪನ್ಯಾಸಕರು ತಮ್ಮ ಸೇವಾ ಭದ್ರತೆ ಮತ್ತು  ಇತರೆ ಸಮಸ್ಯೆಗಳನ್ನು ನಿವೇದಿಸಿಕೊಂಡಿದ್ದರು.  ಸದರಿ ವಿಷಯದ ಮಾಹಿತಿಯನ್ನು ಸಭೆಯಲ್ಲಿ  ಪ್ರಸ್ತಾಪಿಸಿ ಅತಿಥಿ ಉಪನ್ಯಾಸಕರಿಗೆ ಸೇವಾ  ಭದ್ರತೆ ನೀಡಬೇಕೆಂದು ಮಾನ್ಯ ಸದಸ್ಯರು ಒತ್ತಾಯಿಸಿದರು.   

ಖಾಸಗಿ ಪದವಿ ಕಾಲೇಜುಗಳಲ್ಲಿ ನಿವೃತ್ತಿ  ಹೊಂದಿರುವ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳ  ಪಿಂಚಣಿ (ಎನ್‌.ಪಿ.ಎಸ್) ಜಾರಿಗೊಳಿಸಲು ಕೈಗೊಂಡ ಕ್ರಮಗಳೇನು ಎಂಬ ಪ್ರಶ್ನೆಗೆ  ಅನುದಾನಿತ ಕಾಲೇಜುಗಳಲ್ಲಿ  ದಿ. 01-04-2006ಕ್ಕಿಂತ ಮೊದಲು ನೇಮಕಾತಿಯಾಗಿದ್ದ ಶಿಕ್ಷಕ ಶಿಕ್ಷಕೇತರ  ಸಿಬ್ಬಂದಿಗಳಿಗೆ ಟಿ.ಬಿ.ಎಸ್‌. ಯೋಜನೆಯಡಿಯಲ್ಲಿ  ಪಿಂಚಣಿ ಇತ್ಯರ್ಥಪಡಿಸಲಾಗುತ್ತಿದೆ.  ದಿ. 01-04-2006 ನಂತರದಲ್ಲಿ  ನೇಮಕಯಾದ ಸಿಬ್ಬಂದಿಗಳಿಗೆ ಪಿಂಚಣಿ  ಮತ್ತು ಇತರೆ ಸೌಲಭ್ಯಗಳನ್ನು ನೂತನ ಪಿಂಚಣಿ  ಪದ್ಧತಿ (ಎನ್‌.ಪಿ.ಎಸ್) ದಿ. 31-03-2006ರ  ಸರ್ಕಾರದ ಆದೇಶದ ಅನ್ವಯ  ಜಾರಿಗೊಳಿಸಲಾಗಿದೆ. ದಿ. 01-04-2006ರ   ನಂತರದ ಎಲ್ಲಾ ನೇಮಕಾತಿಗಳು ಹೊಸ  ನೇಮಕಾತಿಗಳಾಗಿದ್ದು, ಸರ್ಕಾರದ ಆದೇಶದನ್ವಯ  ನೂತನ ಪಿಂಚಣಿ ಪದ್ದತಿ ಯೋಜನೆಯಡಿಯ  ವ್ಯಾಪ್ತಿಗೆ ಒಳಪಡಿಸತಕ್ಕದಾಗುತ್ತದೆ. ಆದರೆ,  ಖಾಸಗಿ ಸಂಸ್ಥೆಗಳ ವಂತಿಕೆಯನ್ನು (ಇಟಠಿಟಠಜಡಿ ಅಠಣಡಿಛಣಣಠ) ಆಡಳಿತ  ಮಂಡಳಿಗಳೇ ತಮ್ಮ ಸ್ವಂತ ಸಂಪನ್ಮೂಲಗಳಿಂದ  ಭರಿಸಿಕೊಳ್ಳಬೇಕೆಂದು ತಿಳಿಸಲಾಗಿದೆ ಎಂದು ಅಧಿಕಾರಿಗಳು ಉತ್ತರಿಸಿದರು. ಉನ್ನತ ಶಿಕ್ಷಣ  ಇಲಾಖೆ ಅಧಿಕಾರಿಗಳು ಹಣಕಾಸು  ಇಲಾಖೆಯೊಂದಿಗೆ ಚರ್ಚಿಸಿ ಇದಕ್ಕೆ ಒಂದು  ಪರಿಹಾರ ಕಂಡುಕೊಳ್ಳಬೇಕು ಎಂದು  ಮಾನ್ಯ ಸದಸ್ಯರು ಸಲಹೆ ನೀಡಿದರು.    

ಉತ್ತರ ಕರ್ನಾಟಕದ ತಾಲೂಕು/ಜಿಲ್ಲಾ ಸ್ಥಳಗಳಲ್ಲಿರುವ ಸರ್ಕಾರಿ ಪ್ರಥಮ  ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳು ಬಸ್ ವ್ಯವಸ್ಥೆಯ ಕೊರತೆಯ ಕಾರಣದಿಂದ ತರಗತಿಗಳಿಗೆ ಅಡಚಣೆಯಾಗುತ್ತಿದೆ ಹಾಗೂ  ಇದರಿಂದ ತರಗತಿಗಳು ಮಧ್ಯಾಹ್ನವೇ ಬಿಟ್ಟು  ಊರಿಗೆ ತೆರಳಬೇಕಾಗಿದೆ ಎಂಬ ವಿಷಯವನ್ನು  ಅಧಿಕಾರಿಗಳ ಗಮನಕ್ಕೆ ತಂದರು. ವಿದ್ಯಾರ್ಥಿಗಳು  ಬಸ್ ವ್ಯವಸ್ಥೆಯ ಕೊರತೆಯನ್ನು ಲಿಖಿತ  ರೂಪದಲ್ಲಿ ಕಾಲೇಜಿನ ಪ್ರಾಚಾರ್ಯರುಗಳಿಗೆ  ತಿಳಿಸಿದರು ಸಹ ಪ್ರಾಚಾರ್ಯರುಗಳು  ಮೇಲಾಧಿಕಾರಿಗಳ ಗಮನಕ್ಕೆ ಈ ವಿಷಯವನ್ನು  ತರದೇ ವಿದ್ಯಾರ್ಥಿಗಳ ತರಗತಿಗೆ ತೊಂದರೆ  ಉಂಟಾಗುತ್ತದೆ ಎಂಬ ವಿಷಯವನ್ನು ಸದಸ್ಯರು  ಸಭೆಯಲ್ಲಿ ಪ್ರಸ್ತಾಪಿಸಿದರು. ಹೀಗಾಗಿ,  ಉನ್ನತ ಶಿಕ್ಷಣ ಇಲಾಖೆಯವರು ಸಾರಿಗೆ  ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ  ಯಾವ ತಾಲೂಕುಗಳ ಮಾರ್ಗಗಳಲ್ಲಿ  ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ  ಎಂಬುದನ್ನು ಗುರುತಿಸಿ ತಕ್ಷಣವೇ ಬಸ್ಸುಗಳ ವ್ಯವಸ್ಥೆ ಮಾಡಬೇಕೆಂದು ಮಾನ್ಯ ಸದಸ್ಯರು  ಆಗ್ರಹಿಸಿದರು.   

  ಉನ್ನತ ಶಿಕ್ಷಣ ಪಡೆಯುತ್ತಿರುವ ಗ್ರಾಮೀಣ ಮತ್ತು ಪ.ಜಾ./ ಪ.ಪಂ./ ಹಿಂದುಳಿದ ವರ್ಗಗಳ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ  ಗುಣಮಟ್ಟದ ಶಿಕ್ಷಣ ನೀಡಲು ಉನ್ನತ ಶಿಕ್ಷಣ ಇಲಾಖೆ ಸಂಪೂರ್ಣ ಪ್ರಯತ್ನ  ಮಾಡಬೇಕು ಮತ್ತು ಅದಕ್ಕೆ ಬೇಕಾದ ಪೂರಕ  ಶೈಕ್ಷಣಿಕ ಹಾಗೂ ಭೌತಿಕ ಸವಲತ್ತುಗಳನ್ನು  ನೀಡಬೇಕೆಂದು ವಿಧಾನ ಪರಿಷತ್ತಿನ ಸದಸ್ಯ ತಳವಾರ ಸಾಬಣ್ಣಾ ಅವರು  ಅಧಿಕಾರಿಗಳನ್ನು ಒತ್ತಾಯಿಸಿದರು.  


ಸುದ್ದಿ ಓದಿ