ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಗೆ ಜು.13ರಂದು ಶಾಸಕ ಸವದಿ ಭೂಮಿ ಪೂಜೆ
ಅಥಣಿ 11: ಶಾಸಕ ಲಕ್ಷ್ಮಣ ಸವದಿ ಸತತ ಪ್ರಯತ್ನದ ಫಲವಾಗಿ ಅಮೃತ 2.0 ಯೋಜನೆಯಡಿ ಅಥಣಿ ಪಟ್ಟಣಕ್ಕೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದ ನಿರಂತರ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ಜುಲೈ 13 ಶನಿವಾರದಂದು ಮುಂಜಾನೆ ರಾಣಿ ಚೆನ್ನಮ್ಮ ವೃತ್ತದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಎದುರು 11 ಗಂಟೆಗೆ ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಭೂಮಿ ಪೂಜೆ ನೆರವೇರಿಸಲಿದ್ದಾರೆ.
18 ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಲಿರುವ ಈ ಯೋಜನೆಯ ಒಟ್ಟು ವೆಚ್ಚ 116.40 ಕೋಟಿ ರೂ.ಗಳಷ್ಟಿದ್ದು, ಈ ಯೋಜನೆಗೆ 50ಅ ಕೇಂದ್ರ, 40 ಅ ರಾಜ್ಯ ಮತ್ತು 10 ಅ ಸ್ಥಳೀಯ ಸಂಸ್ಥೆಯ ಅನುದಾನ ನಿಗದಿಯಾಗಿದೆ. 2011 ರ ಜನಗಣತಿ ಪ್ರಕಾರ ಅಥಣಿ ಪಟ್ಟಣದ ಜನಸಂಖ್ಯೆ 47847 ರಷ್ಟಿದ್ದು, 2025 ಕ್ಕೆ 62003 ರಷ್ಟು ಜನಸಂಖ್ಯೆ ಆಗಬಹುದು ಅಂದಾಜಿಸಿ ಪ್ರಸ್ತುತ ಯೋಜನೆಯನ್ನು 2040 ರ ಮಧ್ಯಂತರ ಮತ್ತು 2055 ಅಂತಿಮ ವರ್ಷ ಪರಿಗಣಿಸಿ ಕುಡಿಯುವ ನೀರಿನ ಅವಶ್ಯಕತೆ ಅನುಸಾರ ವಿನ್ಯಾಸ ಮಾಡಲಾಗಿದೆ. ಅಥಣಿ ಪಟ್ಟಣದಲ್ಲಿ ಈಗಾಗಲೇ 4.5 ದಶಲಕ್ಷ ಲೀಟರ್ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕ ಇದ್ದು, ಇದರೊಂದಿಗೆ ಹೆಚ್ಚುವರಿಯಾಗಿ 9.0 ದಶಲಕ್ಷ ಲೀಟರ್ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕದ ನಿರ್ಮಾಣದೊಂದಿಗೆ ಒಟ್ಟು 13.5 ದಶಲಕ್ಷ ಲೀಟರ್ ದಷ್ಟಾಗಲಿದೆ. ಈ ಯೋಜನೆಯಡಿ ಹುಲಗಬಾಳ ಗ್ರಾಮದ ಹತ್ತಿರ ಕೃಷ್ಣಾ ನದಿ ದಡದಲ್ಲಿ ಜಾಕವೆಲ್ ಒಳಗೊಂಡಂತೆ ಇತರೆ ಮೂಲ ಸ್ಥಾವರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅಥಣಿ ಪಟ್ಟಣದಲ್ಲಿ ಈಗಾಗಲೇ ಇರುವ ಜಲಸಂಗ್ರಹಾಗಾರಗಳನ್ನು ಒಳಗೊಂಡಂತೆ ಹೆಚ್ಚುವರಿಯಾಗಿ 5 ಹೊಸ ಮೇಲ್ಮಟ್ಟದ ಜಲಸಂಗ್ರಹ ಗಾರಗಳನ್ನು ಜತ್ತ ರೋಡ ಚಮಕೇರಿ ಮಡ್ಡಿ, ಹುಡ್ಕೋ ಕಾಲನಿ ಮಿನಿ ವಿಧಾನ ಸೌಧ ಹಿಂದೆ, ಮದ್ದಿನ ಮಡ್ಡಿ, ಸಾಯಿ ನಗರ ಚರ್ಚ ಹತ್ತಿರ ಮತ್ತು ಸಂಗಮೇಶ ನಗರಗಳಲ್ಲಿ ನಿರ್ಮಿಸಲಾಗುವುದು ಎಂದು ಮಂಡಳಿಯ ಅಥಣಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿತಂತರ ಆರ್.ಕೆ. ಉಮೇಶ ತಿಳಿಸಿದ್ದಾರೆ.
ಈಗಿದ್ದ ವ್ಯವಸ್ಥೆಯಲ್ಲಿ ಅಥಣಿ ಪಟ್ಟಣಕ್ಕೆ ಮೂರು ದಿನಗಳಿಗೊಮ್ಮೆಯಂತೆ ಕುಡಿಯುವ ನೀರು ಪೂರೈಸಲಾಗುತ್ತಿದೆ ಇದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ಕೊರತೆಯಾಗುತ್ತಿತ್ತು ಈ ಕೊರತೆಯನ್ನು ನೀಗಿಸಲು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿಯವರ ಸತತ ಪ್ರಯತ್ನದ ಫಲವಾಗಿ ಈ ಯೋಜನೆಗೆ ಮಂಜೂರಾತಿ ದೊರಕಿದೆ. ಯೋಜನೆಯ ಕಾಮಗಾರಿಯನ್ನು ಸಾಂಗಲಿಯ ಸಹ್ಯಾದ್ರಿ ಕನ್ಸಟ್ರಕ್ಷನ್ಸ ನಿರ್ವಹಿಸಲಿದೆ.