ಕೃಷಿ ಸಂಜೀವಿನಿ ವಾಹನಕ್ಕೆ ಶಾಸಕ ರಮೇಶ ಭೂಸನೂರ ಅವರು ಚಾಲನೆ
ಸಿಂದಗಿ 29: ರೈತರು ಕೃಷಿ ಸಂಜೀವಿನಿ ಸಹಾಯವಾಣಿ ಸಂಖ್ಯೆ 155313 ಕರೆ ಮಾಡಿ ತಮ್ಮ ಜಮೀನುಗಳ ಬೆಳೆ ಬಗ್ಗೆ ತಿಳಿಸಬಹುದು. ರೈತರ ಹೊಲಗಳಲ್ಲಿ ಮಣ್ಣಿನ ಪರೀಕ್ಷೆ, ಕೀಟನಾಶಕ, ರಸಗೊಬ್ಬರ ಪ್ರಮಾಣ ಬಗ್ಗೆ ನೇರವಾಗಿ ರೈತರ ಜಮೀನುಗಳಿಗೆ ಬಂದು ಪರೀಕ್ಷೆ ಮಾಡುತ್ತದೆ. ಜಮೀನುಗಳಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆ ಸವೆತ, ಅತಿಯಾದ ಬೆಳೆ ಬೆಳವಣಿಗೆ, ಕೀಟ ಮತ್ತು ರೋಗದಂತಹ ನೈಸರ್ಗಿಕ ವಿಪತ್ತುಗಳಿಗೆ ಪರಿಹಾರ ಒದಗಿಸುತ್ತದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಆವರಣದಲ್ಲಿ ಕೃಷಿ ಸಂಜೀವಿನಿ ವಾಹನಕ್ಕೆ ಚಾಲನೆ, ಕೃಷಿ ಯಾಂತ್ರೀಕರಣ ಯೋಜನೆಯಡಿ ಫಲಾನುಭವಿಗಳಿಗೆ ಮಿನಿ ಟ್ರ್ಯಾಕ್ಟರ್ ವಿತರಣೆ, ಬಿತ್ತನೆ ಬಿಜ ವಿತರಣೆ ಹಾಗೂ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಮುಂಗಾರು 2022ರ ಮಾಹಿತಿ ಪತ್ರ ಬಿಡುಗಡೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ಥಳೀಯ ಮಟ್ಟದಲ್ಲಿ ರೈತರು ಖರೀದಿ ಮಾಡಿದ ರಸಗೊಬ್ಬರಗಳಲ್ಲಿ ಮಿಶ್ರಣ ಆಗಿರುವ ಸಾಂದ್ರತೆ ಪರೀಶೀಲನೆ ಮಾಡಲಾಗುತ್ತದೆ. ಒಟ್ಟಾರೆ ರೈತನಿಗೆ 'ಕೃಷಿ ಸಂಜೀವಿನಿ' ಯೋಜನೆ ಬಹಳ ಉಕಾರಿಯಾಗಿದ್ದು, ರೈತರಿಗೆ ಈ ಯೋಜನೆ ಬಗ್ಗೆ ಅರಿವು ಮೂಡಿಸಲು ಕೃಷಿ ಇಲಾಖೆ ಮತ್ತಷ್ಟು ಯೋಜನೆ ರೂಪಿಸಿಕೊಂಡಿದೆ. ಆದ್ದರಿಂದ ರೈತರು ಕೃಷಿ ಸಂಜೀವಿನಿ ಯೋಜನೆಯ ಸದುಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.
ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆ ಹೆಚ್ಚುತ್ತಲೇ ಇದೆ. ಇದರಿಂದ ಸಹಜವಾಗಿಯೇ ಕೃಷಿ ಯಂತ್ರೋಪಕರಣಗಳ ಬೇಡಿಕೆ ಹೆಚ್ಚುತ್ತಿದೆ. ಅಲ್ಲದೆ, ರೈತರು ಕೂಡ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಲು ಉತ್ಸುಕರಾಗಿದ್ದಾರೆ. ಹೀಗಾಗಿ ರೈತರು ಕೃಷಿ ಯಂತ್ರೋಪಕರಣ ಕೊಳ್ಳಲು ಸರ್ಕಾರವೇ ಸಹಾಯಧನ ನೀಡುತ್ತಿದೆ. ಇದಕ್ಕಾಗಿ ಕೃಷಿ ಯಾಂತ್ರೀಕರಣ ಯೋಜನೆಯನ್ನು ಜಾರಿ ಮಾಡಿದೆ. ಕೃಷಿ ಯಾಂತ್ರೀಕರಣ ಯೋಜನೆಯಡಿ ಕ್ಷೇತ್ರದ 4 ಜನ ರೈತ ಫಲಾನುಭವಿಗಳಿಗೆ ಸಹಾಯಧನದ ಮೂಲಕ ಮಿನಿ ಟ್ರ್ಯಾಕ್ಟರ್ ವಿತರಿಸಲಾಗುತ್ತಿದೆ. ಸಕಾಲಕ್ಕೆ ಬೆಳೆ ವಿಮೆ ತುಂಬಬೇಕು ಎಂದು ಹೇಳಿದರು.
ಕರ್ನಾಟಕ ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿ, ಸರ್ಕಾರ ರೈತರ ಆರ್ಥಿಕ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ರೈತರ ಅನಕೂಲಕರಕ್ಕಾಗಿ ರೈತ ಉತ್ಪಾದಕ ಕಂಪನಿ (ಎಫ್‌ಪಿಓ)ಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ರೈತರು ಎಫ್‌ಪಿಓಗಳಿಗೆ ಸದಸ್ಯತ್ವ ಪಡೆದುಕೊಳ್ಳ ಬೇಕು ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ವಾಯ್. ಸಿಂಗೆಗೋಳ ಮಾತನಾಡಿ, ಲ್ಯಾಬ್ ಟು ಲ್ಯಾಂಡ್ ಪ್ರಾಜೆಕ್ಟ್ ಮತ್ತು ಆ್ಯಂಬುಲೆನ್ಸ್ ಸೈರನ್ ಅನ್ನು ಈ ಕೃಷಿ ಸಂಜೀವಿನಿ ವಾಹನಕ್ಕೆ ಅಳವಡಿಸಲಾಗಿದೆ. 155313 ಟೋಲ್ ಫ್ರೀ ನಂಬರ್ (ಸಹಾಯವಾಣಿ) ರೈತರು ಕರೆ ಮಾಡಿ ತಮ್ಮ ಸಮಸ್ಯೆಗಳನ್ನ ತಿಳಿಸಬಹದಾಗಿದೆ. 2022ನೇ ಸಾಲಿನ ಮುಂಗಾರು ಹಂಗಾಮಿನ ಹವಾಮಾನ ಆಧಾರಿತ ಬೆಳೆ ವಿಮೆ ನೋಂದಣಿಗೆ ಅರ್ಜಿ ಆಹ್ವಾನಿಸಲಾಗಿದೆ. ರೈತರು ನಿಗದಿತ ಸಮಯದಲ್ಲಿ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳ ಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಯಾಂತ್ರೀಕರಣ ಯೋಜನೆಯಡಿ ಕ್ಷೇತ್ರದ ರೈತ ಫಲಾನುಭವಿಗಳಿಗೆ ಸಹಾಯಧನದ ಮೂಲಕ 4 ಮಿನಿ ಟ್ರ್ಯಾಕ್ಟರ್, ಬಿತ್ತನೆ ಬಿಜಗಳನ್ನು ಶಾಸಕ ರಮೇಶ ಭೂಸನೂರ ವಿತರಿಸಿದರು.
ಪುರಸಭೆ ಸದಸ್ಯ ಬಾಷಾಸಾಬ ತಾಂಬೋಳಿ, ಕೃಷಿ ಅಧಿಕಾರಿಗಳಾದ ಎ.ಎಸ್. ಹುಣಶ್ಯಾಳ, ಶಿವಾನಂದ ಹೂವಿನಹಳ್ಳಿ, ಗೋವಿಂದರೆಡ್ಡಿ ಮೆದಕಿನಾಳ, ಎಲ್.ಆರ್. ರಾಠೋಡ, ಸಿಬ್ಬಂದಿಗಳಾದ ಶಿವರ್ಣಣ ಗೊಂಗಿ, ಉಮೇಶ ಶಿವಯೋಗಿಮಠ, ವಿಜಯಪುರ ಜಿಲ್ಲೆಯ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಮಹಾದೇವ ಅಂಬಲಿ, ಸಿದ್ದು ಬುಳ್ಳಾ, ರವಿ ನಾಯ್ಕೋಡಿ, ಸಿದ್ರಾಯ ಪೂಜಾರಿ, ಹುಶೇನಿ ಅಡಾಡಿ ಸೇರಿದಂತೆ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.