ಸಂಭ್ರಮ ಸಡಗರದಿಂದ ಶೀಗಿ ಹುಣ್ಣಿಮೆ ಆಚರಣೆ
ಯರಗಟ್ಟಿ 26 : ರೈತರ ಬದುಕಿನಲ್ಲಿ ವಿಶೇಷ ಮಹತ್ವ ಹೊಂದಿರುವ ಶೀಗಿ ಹುಣ್ಣಿಮೆ ಹಬ್ಬವನ್ನು ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತ ಕುಟುಂಬಗಳು ಸಂಭ್ರಮ ಸಡಗರ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಿದರು.ವರ್ಷವೀಡೀ ಅನ್ನ ನೀಡುವ ಭೂತಾಯಿಗೆ ಕೃತಜ್ಞತೆ ಸಲ್ಲಿಸುವ ಸಂಕೇತವಾಗಿ ರೈತರು ಕುಟುಂಬ ಸಮೇತರಾಗಿ ಹೊಲಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.ಹೊಲದಲ್ಲಿ ಪಾಂಡವರನ್ನು ಪ್ರತಿಷ್ಠಾಪಿಸಿ, ಭೂತಾಯಿಗೆ ನೈವೇದ್ಯ ಅರ್ಿಸಿ ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಸುಖಶಾಂತಿಗಾಗಿ ಪ್ರಾರ್ಥಿಸಿದರು.
ಮನೆಯಲ್ಲಿಯೇ ತಯಾರಿಸಿದ ಹೋಳಿಗೆ, ಕಡಬು, ವಿವಿಧ ಬಗೆಯ ಪಲ್ಯ, ಚಟ್ನಿ, ಅನ್ನ ಸೇರಿದಂತೆ ಬಗೆಬಗೆಯ ಖಾದ್ಯಗಳನ್ನು ಹೊಲಕ್ಕೆ ತೆಗೆದುಕೊಂಡು ಹೋಗಿ, ಕುಟುಂಬ ಸದಸ್ಯರು ಹಾಗೂ ಬಂಧುಬಳಗದವರೊಂದಿಗೆ ಸಾಮೂಹಿಕ ಭೋಜನ ಸವಿದರು.ರೈತರು ಮತ್ತು ಭೂಮಿಯ ನಡುವಿನ ಅವಿನಾಭಾವ ಸಂಬಂಧವನ್ನು ಸಾರುವ ಶೀಗಿ ಹುಣ್ಣಿಮೆ ಹಬ್ಬವು ಗ್ರಾಮೀಣ ಸಂಸ್ಕೃತಿ, ಸಂಪ್ರದಾಯ ಹಾಗೂ ಕುಟುಂಬ ಬಾಂಧವ್ಯವನ್ನು ಪ್ರತಿಬಿಂಬಿಸಿತು.ಈ ವೇಳೆ ಕೆಂಪಣ್ಣಾ ಸಿದ್ದನಗೌಡರ, ಕಾಶವ್ವ ಸಿದ್ದನಗೌಡರ, ಮಂಜುನಾಥ ಸಿದ್ದನಗೌಡರ, ಸುಜಾತಾ ಸಿದ್ದನಗೌಡರ, ವೈಶಾಲಿ ಮುದೆನೂರ, ಕಲ್ಲಪ್ಪ ಸಿದ್ದನಗೌರ, ಲಕ್ಷ್ಮೀ ಸಿದ್ದನಗೌಡರ, ಈರಣ್ಣಾ ಹೂಲ್ಲೂರ, ಇರ್ಫಾನ್ ಪೆರುಗಿಡದ, ಇಬ್ರಾಹಿಂ ಕುದ್ದನ್ನವರ ಇದ್ದರು.