ಮಠಗಳು ಭಕ್ತರ ಬಾರ ಇಳಿಸುವ ಮಠಗಳಾಗಿವೆ : ಶಿವಶಾಂತವೀರ ಶರಣರು
ಮುಂಡರಗಿ 26: ತಾಲ್ಲೂಕಿನ ಜಂತ್ಲಿ-ಶಿರೂರು ಗ್ರಾಮದ ಶ್ರೀ ಚನ್ನವೀರ ಶರಣರ ಮಠದಲ್ಲಿ ಪೂಜ್ಯಶ್ರೀ ಶಿವಶಾಂತವೀರ ಶರಣರ ಸಾನಿಧ್ಯದಲ್ಲಿ 32ನೇ ವರ್ಷದ ಚನ್ನವೀರ ಶರಣರ ಪುಣ್ಯಸ್ಮರಣೋತ್ಸವ, ಸಾಮೂಹಿಕ ವಿವಾಹ ಮಹೋತ್ಸವ ಮತ್ತು ಜಾತ್ರಾ ಮಹೋತ್ಸವ ಅಂಗವಾಗಿ ಪೂರ್ವಭಾವಿ ಸಭೆ ಜರುಗಿತು.
ಈ ಸಭೆಯಲ್ಲಿ ಜಂತ್ಲಿ-ಶಿರೂರ ಗ್ರಾಮದ ಸರ್ವ ಸಮಾಜದವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿ, ಪ್ರತಿ ವರ್ಷದಂತೆ ಇದೇ ನವೆಂಬರ್ 10 ರಿಂದ ಡಿಸೆಂಬರ್ 10ರ ವರೆಗೆ ಪ್ರವಚನ ಹಾಗೂ ಡಿಸೆಂಬರ್ 10 ರಂದು ಸಾಮೂಹಿಕ ವಿವಾಹ ಮಹೋತ್ಸವ, ದಾಸೋಹ, ದಾನಿಗಳಿಗೆ ಸನ್ಮಾನ, ತುಲಾಭಾರ ಮತ್ತು ಸಂಜೆ 6 ಗಂಟೆಗೆ ಮಹಾರಥೋತ್ಸವ ಜರುಗಿಸಲು ನಿರ್ಣಯವನ್ನು ಕೈಗೊಳ್ಳಲಾಯಿತು.
ಡಿಸೆಂಬರ್ 11ರಂದು ಸಂಜೆ ಕಡುಬಿನ ಕಾಳಗ, ರಸಮಂಜರಿ ಕಾರ್ಯಕ್ರಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲು ಎಲ್ಲ ಭಕ್ತಾದಿಗಳು ಸಭೆಯಲ್ಲಿ ಮಾತನಾಡಿ ನಿರ್ಣಯಕ್ಕೆ ಬಂದರು. ಮಂಗಲೋತ್ಸವದಲ್ಲಿ ವಿವಿಧ ಮಠಾಧೀಶರು, ಸಾಹಿತಿಗಳು, ಕಲಾವಿದರುಗಳನ್ನು ಬರಮಾಡಿಕೊಳ್ಳುವ ಬಗ್ಗೆ ಚರ್ಚೆ ಮಾಡಿ ಸಭೆಯಲ್ಲಿ ನಿರ್ಣಯಿಸಲಾಯಿತು.
ನಂತರ ಸಾನಿಧ್ಯವಹಿಸಿದ್ದ ಶ್ರೀಮಠದ ಪೂಜ್ಯಶ್ರೀ ಶಿವಶಾಂತವೀರ ಶರಣರು ಆಶೀರ್ವಚನ ನೀಡಿ, ಪ್ರಸ್ತುತ ದಿನಮಾನದಲ್ಲಿ ಮಳೆ ಇಲ್ಲ, ಬೆಳೆ ಇಲ್ಲದೆ ರೈತರ ಮೊಗದಲ್ಲಿ ಕಳೆಯು ಇಲ್ಲ ಬರಗಾಲದಲ್ಲಿ ಮಾಡುವ ಇಂತಹ ಕಾರ್ಯಗಳು ಭಕ್ತರಿಗೆ ಹೊರೆ ಆಗಬಾರದು, ಮಠಗಳು ಭಕ್ತರಿಗೆ ಬಾರಹೊರಿಸುವ ಮಠಗಳಲ್ಲ, ಭಕ್ತರ ಬಾರ ಇಳಿಸುವ ಮಠಗಳು ಆಗಿವೆ.
ಆ ದೃಷ್ಟಿಯಲ್ಲಿ ಶ್ರೀಮಠದಲ್ಲಿ ಪ್ರತಿವರ್ಷ ನಡೆಯುವಂತೆ ಈ ವರ್ಷದ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವಂತೆ ಭಕ್ತರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಜಂತ್ಲಿ-ಶಿರೂರ ಗ್ರಾಮಗಳ ಗುರು-ಹಿರಿಯರು ಸರ್ವ ಸಮಾಜದ ಮುಖಂಡರುಗಳು, ಭಕ್ತರುಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು