ದೀಪಾವಳಿ ಉಡುಗೊರೆಯಾಗಿ ಗುಡಿಸಲು ನಿವಾಸಿಗೆ ಶಾಸಕ ಎಚ್.ಕೆ.ಪಿಯವರಿಂದ ಬಂಪರ್ ಕೊಡುಗೆ
ಗದಗ 09: ಸೂರು ಕಳೆದುಕೊಂಡಿದ್ದ ಮಹಿಳೆಗೆ ದೀಪಾವಳಿ ಉಡುಗೊರೆಯಾಗಿ ಶಾಸಕ ಎಚ್.ಕೆ. ಪಾಟೀಲ ಅವರು ಸೋಮವಾರ ನಗರದ ನಗರಸಭೆ ಆವರಣದಲ್ಲಿ ಮನೆ ಹಂಚಿಕೆ ಪತ್ರ ವಿತರಿಸಿದರು.ನಗರದ ಸ್ಟೇಷನ ರಸ್ತೆಯ ರೈಲ್ವೆ ಮೇಲ್ಸೆತುವೆ ಕೆಳಗಡೆ ಖೈರುನ್ನಿಸಾ ಎಸ್ ಶೇಖಅತ್ತಾರ ಅವರು ಜೋಪಡಿ ನಿರ್ಮಿಸಿಕೊಂಡು ಕಳೆದ 65 ವರ್ಷದಿಂದ ವಾಸ ಮಾಡುತ್ತಿದ್ದರು. ಸೇತುವೆ ಶಿಥಿಲವಾಗಿದ್ದ ಕಾರಣ ರೈಲ್ವೆ ಇಲಾಖೆಯವರು ಜೋಪಡಿಯನ್ನು ತೆರವುಗೊಳಿಸಿದ್ದರಿಂದ ಸೂರು ಇಲ್ಲದೇ ತೊಂದರೆ ಅನುಭವಿಸುತ್ತಿದ್ದರು.
ಈ ಮೊದಲು "ಮನೆ ಇಲ್ಲದವರಿಗೆ ಮನೆ " 2022ರ ಯೋಜನೆಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದರೂ, ಮನೆ ಮಂಜೂರು ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ 3630(ಜಿ+1) ಗುಂಪು ಮನೆ ಯೋಜನೆಯಡಿಯಲ್ಲಿ ಹಂಚಿಕೆ ಮಾಡಲು ಬಾಕಿ ಉಳಿದಿರುವ 760 ಮನೆಗಳ ಪೈಕಿ ಬ್ಲಾಕ್ ನಂ:32 ಮೊದಲ ಮಹಡಿಯ-ಮನೆ ನಂ:01ನ್ನು ಖೈರುನ್ನಿಸಾ ಶೇಖ್ ಅವರಿಗೆ ಫಲಾನುಭವಿಯಾಗಿ ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ಫಲಾನುಭವಿಗೆ ಶಾಸಕ ಎಚ್.ಕೆ. ಪಾಟೀಲ ಅವರಿಂದ ಮನೆಯ ಹಂಚಿಕೆ ಪತ್ರ ವಿತರಿಸಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ನಗರಸಭೆ ಸದಸ್ಯರಾದ ಕೃಷ್ಣಾ ಪರಾಪೂರ, ಬರಕತ್‌ಅಲಿ ಮುಲ್ಲಾ, ಇಮ್ತಿಯಾಜ್ ಶಿರಹಟ್ಟಿ, ಖಮರಸುಲ್ತಾನ್ ನಮಾಜಿ, ಪರ್ವೀನಬಾನು ಮುಲ್ಲಾ, ಜಿಲ್ಲಾ ಕೆಡಿಪಿ ಸದಸ್ಯ ಎಸ್.ಎನ್. ಬಳ್ಳಾರಿ, ಸಯ್ಯದ್ ಖಾಲಿದ ಕೊಪ್ಪಳ, ಪೌರಾಯುಕ್ತ ರಾಜಾರಾಮ್ ಪವಾರ ಸೇರಿ ಹಲವರು ಇದ್ದರು.