ಗೋಕಾಕ್

ಡೆಂಘೀ ಬರದಂತೆ ಸ್ಥಳೀಯರು ಮುಂಜಾಗ್ರತೆ ಅನುಸರಿಸಿ:ಡಾ.ಸರಸ್ವತಿ ತಂಬಾಕೆ

ಡೆಂಘೀ ಬರದಂತೆ ಸ್ಥಳೀಯರು ಮುಂಜಾಗ್ರತೆ ಅನುಸರಿಸಿ:ಡಾ.ಸರಸ್ವತಿ ತಂಬಾಕೆ

ಬೆಟಗೇರಿ 12: ಡೆಂಘೀ ಮತ್ತು ಸಾಂಕ್ರಾಮಿಕ ರೋಗಗಳು ಆವರಿಸುವ ಲಕ್ಷಣಗಳು ಕಾಣಿಸುತ್ತಿವೆ. ಸ್ಥಳೀಯ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕೆಂದು ಎಂದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸರಸ್ವತಿ ತಂಬಾಕೆ ತಿಳಿಸಿದ್ದಾರೆ. 

ಗೋಕಾಕ ತಾಲೂಕಿನ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮ ಪಂಚಾಯತಿ ಸಹಯೊಗದಲ್ಲಿ ಜು.12ರಂದು  ಬೆಟಗೇರಿ ಗ್ರಾಮದ ಪ್ರಮುಖ ಬೀದಿಯಲ್ಲಿ ಸ್ಥಳೀಯ ಸರ್ಕಾರಿ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ ಮಕ್ಕಳಿಂದ ಹಮ್ಮಿಕೊಂಡಿರುವ ಡೆಂಘೀ ಮತ್ತು ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮಗಳ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. 

ಸ್ಥಳೀಯ ಸಾರ್ವಜನಿಕರು ತಮ್ಮ ಸುತ್ತಲಿನ ಪ್ರದೇಶ, ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಶುದ್ಧ ಕುಡಿಯುವ ನೀರು ಕಾಯಿಸಿ ಆರಿಸಿ ಕುಡಿಯಬೇಕು, ಮೂರು ದಿನಗಳ ತನಕ ನೀರು ಸಂಗ್ರಹಿಸಿ ಇಡಬಾರದು. ಮನೆಯಲ್ಲಿ ತಯಾರಿಸಿದ ಆಹಾರದ ಪಾತ್ರೆಗಳ ಮೇಲೆ ಮುಚ್ಚಬೇಕು, ಕೊಳಚೆ ನೀರು ಮನೆ ಸುತ್ತಲೂ ನಿಲ್ಲದಂತೆ, ಸೊಳ್ಳೆಗಳು ಉತ್ಪತಿಯಾಗದಂತೆ ಮುನ್ನಚ್ಛರಿಕೆ ವಹಿಸಿ, ಸೊಳ್ಳೆ ಪರದೆ ನಿತ್ಯ ರಾತ್ರಿ ಹೊತ್ತು ಬಳಸಬೇಕು. ತಮಗೆ ಹಲವಾರು ಅನಾರೋಗ್ಯದ ಸಮಸ್ಯೆಗಳು ಕಾಣಿಸಿಕೊಂಡರೆ  ತಕ್ಷಣ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಭೇಟಿಯಾಗಿ ರೋಗ ನಿಯಂತ್ರಣಕ್ಕೆ ಅನುಸರಿಸಬೇಕಾದ ಸಲಹೆಗಳನ್ನು ಸ್ಥಳೀಯರು ಪಡೆದುಕೊಳ್ಳಬೇಕೆಂದು ವೈದ್ಯಾಧಿಕಾರಿ ಡಾ.ಸರಸ್ವತಿ ತಂಬಾಕೆ ತಿಳಿಸಿದರು. 

ಗ್ರಾಮದ ಪ್ರಮುಖ ಬೀದಿಗಳಲ್ಲಿ ಇಲ್ಲಿಯ ಸರ್ಕಾರಿ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ ಮಕ್ಕಳಿಂದ ಡೆಂಘೀ ಮತ್ತು ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮಗಳ ಕುರಿತು ಘೋಷ ವಾಕ್ಯ ಕೂಗುವ ಮೂಲಕ ಜಾಗೃತಿ ಜಾಥಾ ನಡೆಯಿತು. 

ಪ್ರಧಾನ ಗುರುಗಳಾದ ವೈ.ಸಿ.ಶೀಗಿಹಳ್ಳಿ, ಬಸವರಾಜ ಪಣದಿ, ಸುರೇಶ ಬಾಣಸಿ, ವಿಠಲ ಚಂದರಗಿ, ಶಿವಪ್ಪ ಐದುಡ್ಡಿ, ಉಭಯ ಶಾಲೆಯ ಶಿಕ್ಷಕರು, ಸ್ಥಳೀಯ ಆಶಾ-ಅಂಗವಾಡಿ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಉಭಯ ಶಾಲೆಗಳ ಶಾಲಾ ವಿದ್ಯಾರ್ಥಿಗಳು, ಮತ್ತೀತರರು ಇದ್ದರು. 


ಸುದ್ದಿ ಓದಿ