ಕಂಡ-ಕಂಡಲ್ಲಿ ಮದ್ಯ ಮಾರಾಟ: ಕಣ್ಮುಚ್ಚಿ ಕುಳಿತ ಅಬಕಾರಿ ಅಧಿಕಾರಿಗಳು
ಕಾಗವಾಡದಲ್ಲಿ ಅಧಿಕಾರಿಗಳ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡ ಶಾಸಕ ರಾಜು ಕಾಗೆ
ಕಾಗವಾಡ 25: ತಾಲೂಕಿನಾದ್ಯಂತ ಕಂಡ-ಕಂಡ ಕಡೆಗಳಲ್ಲಿ ಎಗ್ಗಿಲ್ಲದೇ ಅಕ್ರಮ ಮದ್ಯ ಮಾರಾಟವಾಗುತ್ತಿದ್ದು, ಈ ಕುರಿತು ನಾವು ನಿಮಗೆ ಮಾಹಿತಿ, ನೀಡಿದರೇ, ನೀವೇ ಅಕ್ರಮ ಮಾರಾಟಗಾರರಿಗೆ ಮಾಹಿತಿ ನೀಡಿ, ಅವರನ್ನು ಬಚಾವ ಮಾಡುತ್ತಿದ್ದೀರಿ ಎಂದು ಶಾಸಕ ರಾಜು ಕಾಗೆ ಅಬಕಾರಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಅವರು ಪಟ್ಟಣದ ನೀರೀಕ್ಷಣಾ ಮಂದಿರದಲ್ಲಿ ಮಂಗಳವಾರ ದಿ. 25ರಂದು ನಡೆದ ಅಧಿಕಾರಿಗಳ ಕೆಡಿಪಿ ಸಭೆಯಲ್ಲಿ ಮಾತನಾಡುತ್ತಿದ್ದರು.
ತಾಲೂಕಿನಾದ್ಯಂತ ಎಲ್ಲಿ ಬೇಕಾದಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದ್ದು, ಅಧಿಕಾರಿಗಳು ಕಣ್ಮುಚ್ಚಿ ಕುಳಿತುಕೊಂಡಿದ್ದೀರಿ. ಕೂಡಲೇ ಅಕ್ರಮ ಮ ಮದ್ಯ ಮಾರಾಟದ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಎಚ್ಚರಿಕೆ ನೀಡಿದರು. ಇನ್ನೂ ಜೆಜೆಎಂ ಕಾಮಗಾರಿ ತಾಲೂಕಿನಾದ್ಯಂತ ಹಳ್ಳ ಹಿಡಿದಿದ್ದು, ಜೆಜೆಎಂ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದೇ ರೀತಿ ಮುಂದುವರೆದರೆ ಕಠಿಣ ಕ್ರಮ ಕೈಗೊಳ್ಳುತ್ತೇನೆಂದು ಜೆಜೆಎಂ ಅಧಿಕಾರಿಗಳಿಗೆ ಖಡಕ ವಾರ್ನಿಂಗ್ ನೀಡಿದರು. ಅದರಂತೆ ಕೇವಲ ಪರಿಸರ ದಿನಕ್ಕೆ ಸಸಿ ನೆಡುವುದಕ್ಕೆ ಸೀಮಿತವಾಗಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಮರುದಿನವೇ ಆ ಗಿಡ ಯಾವ ಸ್ಥಿತಿಯಲ್ಲಿದೆ ಎಂದು ಅತ್ತ ತಿರುಗಿಯೋ ಸಹ ನೋಡದೇ ಇರುವುದು ಅರಣ್ಯ ಇಲಾಖೆಯ ಕಾರ್ಯ ವೈಖರಿಗೆ ಬೇಸರ ವ್ಯಕ್ತ ಪಡಿಸಿದರು. ಇದಲ್ಲದೇ ಸಂಭಾವ್ಯ ಪ್ರವಾಹ ಎದುರಿಸಲು ಎಲ್ಲ ಅಧಿಕಾರಿಗಳಿಗೆ ಆಯಾ ನೋಡಲ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಪ್ರವಾಹ ಪೀಡಿತ ಗ್ರಾಮಗಳ ನೊಡಲ್ ಅಧಿಕಾರಿ, ಆಯಾ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ, ಪಿಡಿಓ ಸಮನ್ವಯ ಸಾಧಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ತಹಶೀಲ್ದಾರ ರಾಜೇಶ ಬುರ್ಲಿ, ಕಾಗವಾಡ ತಾ.ಪಂ. ಎಇಓ ಈರಣ್ಣಾ ವಾಲಿ, ಜೆಜೆಎಂ ಅಧಿಕಾರಿ ರವೀಂದ್ರ ಮುರಗಾಲಿ, ಬಿಈಒ ಎಂ.ಆರ್. ಮುಂಜೆ, ಸಿಡಿಪಿಓ ಸಂಜಯಕುಮಾರ ಸದಲಗಿ, ಲೋಕೋಪಯೋಗಿ ಇಲಾಖೆಯ ಜೆ.ಎಂ. ಹಿರೇಮಠ, ಅಥಣಿ ತಾ.ಪಂ. ಎಇಓ ಶಿವಾನಂದ, ಹೆಸ್ಮಾಂ ಅಧಿಕಾರಿ ರವೀಂದ್ರ ಮಾಳಿ, ಅಬಕಾರಿ ಇಲಾಖೆಯ ಮಹಾಂತೇಶ ಬಂಡಗರ, ಅರಣ್ಯ ಇಲಾಖೆಯ ಪ್ರಶಾಂತ ಗಾಣಿಗೇರ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು, ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು, ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ತಾಲೂಕಾಡಳಿತದ ಅಧಿಕಾರಿಗಳು, ತಾ.ಪಂ. ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.