ನಮ್ಮ ಭಕ್ತರೆಲ್ಲರಲ್ಲಿಯೂ ವಿನಯ ಇರಲಿ: ಶ್ರೀ ಗಣಪತಿ ಮಹಾರಾಜರು

ಗೋಕಾಕ 16: ವಿನಯವೇ ವ್ಯಕ್ತಿತ್ವಕ್ಕೆ ಭೂಷಣವಾಗಿದ್ದರಿಂದ ನಮ್ಮ ಭಕ್ತರೆಲ್ಲರಲ್ಲಿಯೂ ವಿನಯ ಇರಲಿ ಎಂದು ಯರಗಟ್ಟಿ ಪಟ್ಟಣದ ಶ್ರೀ ರಾಜರಾಜೇಶ್ವರಿ ಆಶ್ರಮದ ಪೀಠಾಧಿಕಾರಿಗಳಾದ ವಾಕ್ಸಿದ್ಧಿ ಪುರುಷ ಶ್ರೀ ಗಣಪತಿ ಮಹಾರಾಜರು ಹೇಳಿದರು.
ಯರಗಟ್ಟಿ ಪಟ್ಟಣದ ಗೋಕಾಕ ರಸ್ತೆಗೆ ಹೊಂದಿಕೊಂಡಿರುವ ಶ್ರೀ ರಾಜರಾಜೇಶ್ವರಿ ಆಶ್ರಮದ ಜಾತ್ರಾ ಮಹೋತ್ಸವ ಹಾಗೂ 15 ನೇ ವರ್ಷದ ವೇದಾಂತ ಪರಿಷತ್ ಮತ್ತು ಪೂಜ್ಯ ಗಣಪತಿ ಮಹಾರಾಜರ 63 ನೇ ಜಯಂತೋತ್ಸವ , ಮಹಾತ್ಮರ ಬೆಳ್ಳಿ ರಥೋತ್ಸವ ಹಾಗೂ ಶ್ರೀ ದೇವಿಯ ರಥೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಭಕ್ತರಲ್ಲಿ ಮೃದು ಮನಸ್ಸು ಹೊಂದಿರಲಿ. ಕೊಟ್ಟ ವಚನ ಪಾಲನೆಯ ಮನಸ್ಥಿತಿ ಸ್ಥಿರವಾಗಿರಲಿ. ಬಡತನ ಶ್ರೀಮಂತರೆಂಬ ಬೇಧ ಭಾವನೆ ಶ್ರೀಮಠದಲ್ಲಿ ಇಲ್ಲ. ಇಲ್ಲಿ ಎಲ್ಲರೂ ಸಮಾನರು ಎಂದು ಹೇಳಿದ ಶ್ರೀ ಗಣಪತಿ ಮಹಾರಾಜರು ಸರ್ವ ಭಕ್ತರನ್ನು ಆಶೀರ್ವದಿಸಿದರು.
ಶಿರೋಳ ಗವಿಮಠದ ಶ್ರೀ ಅಭಿನವ ಯಚ್ಚರಮಹಾಸ್ವಾಮಿಗಳು 2 ನೇ ದಿನದ ವೇದಾಂತ ವೇಧಿಕೆಯಲ್ಲಿ ಮಾತನಾಡುತ್ತ, ಇಂದಿನ ಬಹುತೇಕ ಮಠಗಳಲ್ಲಿ ಜಾತಿ ರಾಜಕೀಯ ಹಾಸುಹೊಕ್ಕಾಗಿದ್ದು ಇದರಿಂದ ಸಮಾನತೆ ಎಂಬುದು ಹಾಳಾಗುತ್ತಿದೆ. ಇಂಥಹ ಸ್ಥಿತಿಯಲ್ಲಿ ಭಕ್ತರ ಅಜ್ಞಾನ ಹೋಗಲಡಿಸಿ ಭಕ್ತರ ಏಧನೆಗೆ ಸ್ಪಂದಿಸುತ್ತಿರುವ ಶ್ರೀ ಗಣಪತಿ ಮಹಾರಾಜರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ದಿವ್ಯ ಸಾನಿಧ್ಯವಹಿಸಿದ್ದ ಬಳ್ಳೂರ,ಹಂಪಿ, ಚಿಕ್ಕಮುನವಳ್ಳಿಯ ಶ್ರಿ ಸಿದ್ದಾರೂಢ ಮಠದ ಶ್ರೀ ವಿದ್ಯಾನಂದ ಭಾರತಿ ಮಹಾಸಾಮಿಗಳು ಹಿತೋಪದೇಶ ನೀಡುತ್ತ, ಮೃದುವಾದ ಮಾತು ಅಮೃತಕ್ಕೆ ಸಮಾನ. ಅಯ್ಯಾ ಅಂದ್ರೆ ಸಂತೋಷ ಅಯ್ಯೋ ಅಂದ್ರೆ ದುಃಖ ಎಂಬ ಸತ್ಯವನ್ನು ಅರಿಯಬೇಕು. ನಾಲಿಗೆ ತುದಿಯಲ್ಲಿ ಲಕ್ಷ್ಮೀ ವಾಸವಾಗಿದ್ದಾಳೆ. ಆದ್ದರಿಂದ ಮಾತಿನಲ್ಲಿ ಬಿರುಸು ಬೇಡಾ. ಮಂಗಳ ಕಾರ್ಯಗಳಲ್ಲಿ ಅಮಂಗಲ ಮಾತುಗಳು ಬೇಡಾ.ಮಾತುಗಳು ಮಿತವಾಗಿ ಮದುರ ಆಗಿರಬೇಕು. ನಮ್ಮ ಮಾತುಗಳು ಇನ್ನೊಬ್ಬರಿಗೆ ಪ್ರಯೋಜನವಾಗುಂತಿರಬೇಕು. ವಿನಯ, ಮೃದು, ಮಿತ ಇಂಥಹ ಸೂಕ್ಷ್ಮತೆಯ ದೇವ ಗುಣಗಳನ್ನು ಹೊಂದಿರುವ ವಾಕ್ಸಿದ್ಧಿ ಪುರುಷ ಶ್ರೀ ಗಣಪತಿ ಮಹಾರಾಜರು ಹಾಕಿಕೊಟ್ಟ ಹಾದಿಯಲ್ಲಿ ಭಕ್ತರು ನಡೆದುಕೊಂಡು ತಮ್ಮಲ್ಲರ ಬದುಕಿನಲ್ಲಿ ಸುಖಃ ಸಮೃದ್ಧಿ ನೆಲಸಲಿ ಎಂದು ಆಶೀರ್ವದಿಸಿದರು.
ದಾನಿಗಳಿಗೆ ಹಾಗೂ ವಿಶೇಷ ಆಮಂತ್ರಿತರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕುಳ್ಳೂರು ಸುಕ್ಷೇತ್ರ ಶಿವಯೋಗೀಶ್ವರ ಸಂಸ್ಥಾನ ಕಲ್ಮಠದ ಶ್ರೀ ಬಸವಾನಂದ ಭಾರತಿ ಮಹಾಸ್ವಾಮಿಗಳು ಹಿತೋಪದೇಶ ಹೇಳಿದರು.
ಇದೇ ಸಂದರ್ಭದಲ್ಲಿ ಧಾರವಾಡ ಭಕ್ತರಿಂದ ವಾಕ್ಸಿದ್ಧಿ ಪುರುಷ ಶ್ರೀ ಗಣಪತಿ ಮಹಾರಾಜರ ತುಲಾಭಾರ ಸೇವೆ ನೆರವೇರಿತು. ಸಾವಿರಾರು ಭಕ್ತ್ತರ ಸಮ್ಮುಖದಲ್ಲಿ ಸಾಯಂಕಾಲ ಶ್ರೀ ದೇವಿಯ ರಥೋತ್ಸವ ಹಾಗು ಮಹಾತ್ಮರ ಬೆಳ್ಳಿಯ ರಥೋತ್ಸವ ಭವ್ಯವಾಗಿ ನೆರವೇರಿತು.