ಕವಿತೆಗಳಲ್ಲಿ ಸಾಮಾಜಿಕ ಸ್ಪಂದನೆ ಇರಲಿ: ಲೋಕಾಪುರ
ಅಥಣಿ 03: ಭಾವನೆಯಿಂದಷ್ಟೇ ಕವಿತೆ ಬರೆದರೆ ಸಾಲದು, ಕವಿತೆಗಳಲ್ಲಿ ಸಾಮಾಜಿಕ ಸ್ಪಂದನೆ ಇರಬೇಕು. ಕವಿಗಳು ವಿನಯ, ವಿಸ್ಮಯ ಮತ್ತು ವೈಕರಿ ಸ್ವಭಾವ ಹೊಂದಿರಬೇಕು ಎಂದು ಹಿರಿಯ ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಅಭಿಪ್ರಾಯಪಟ್ಟರು.
ಅವರು ಕವಿ ಅಪ್ಪಾಸಾಹೇಬ ಅಲಿಬಾದಿ ಅವರ ಸಮಗ್ರ ಕಾವ್ಯ ಕೃತಿಗಳ ಕಾವ್ಯಾವಲೋಕನ ಹಾಗೂ ಕವಿಗೋಷ್ಠಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕವಿತೆಗಳಿಗೆ ಒಂದು ಸಾಮರ್ಥ್ಯ ಇರುತ್ತದೆ. ಒಂದೇ ಪದದಲ್ಲಿ ಹಲವು ಬಾವಾರ್ಥ ಕಟ್ಟಿಕೊಡಬಹುದು. ಸಾಮಾಜಿಕ ಪರಿವರ್ತನೆ, ಕವಿತೆಯ ಉದ್ದೇಶವಾಗಿರಬೇಕು. ಬರಹಗಾರರು ಓದಿದಷ್ಟೂ ಕವಿತೆಗಳು ಪರಿಣಾಮಕಾರಿ ಆಗಿ ಮೂಡಲು ಸಾಧ್ಯ. ಭಾರತೀಯ ಜೀವ ವಿಮಾ ಕಂಪನಿಯ ಕರ್ತವ್ಯದ ಜೊತೆಗೆ ಕವಿತೆಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡುತ್ತಿರುವ ಅಪ್ಪಾಸಾಹೇಬ ಅಲಿಬಾದಿ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಕವಿ ಅಪ್ಪಾಸಾಹೇಬ ಅಲಿಬಾದಿ ಅವರು ಒಬ್ಬ ಸಾಹಿತಿಯಾಗಿ, ಸಂಘಟಿಕರಾಗಿ, ಚಿಂತಕ, ಪ್ರಕಾಶಕ ಅಷ್ಟೇ ಅಲ್ಲ ಒಬ್ಬ ಪ್ರಗತಿಪರ ಕೃಷಿಕರಾಗಿ ಗಡಿನಾಡಿನಲ್ಲಿ ಸಾಂಸ್ಕೃತಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಗಳ ಅಧ್ಯಕ್ಷರಾಗಿ, ವಿವಿಧ ಸಮ್ಮೇಳನಗಳಲ್ಲಿ ಸರ್ವಾಧ್ಯಕ್ಷರಾಗಿ ನಾಡು ನುಡಿ ಸಂರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದ ಅವರು ವಿಜ್ಞಾನ ತಂತ್ರಜ್ಞಾನ ಬೆಳದಂತೆ ಅನೇಕ ಕವಿಗಳು ಮತ್ತು ಸಾಹಿತಿಗಳು ಸಾಮಾಜಿಕ ಜಾಲತಾಣಗಳನ್ನ ಹೆಚ್ಚಿಗೆ ಬಳಸುತ್ತಿದ್ದಾರೆ. ಈ ಪೂರ್ತಿ ಕಡಿಮೆಯಾಗಿ ಕವಿಗಳು ಸದಾ ಅಧ್ಯಯನ ಶೀಲರಾಗಬೇಕು. ಸಮಾಜದಲ್ಲಿ ಮಾನವೀಯತೆ ಬದಲಾಗುತ್ತಿದ್ದು, ಸಂಬಂಧಗಳು ನಶಿಸುತ್ತಿರುವ ಇಂದಿನ ದಿನಮಾನಗಳಲ್ಲಿ ಕವಿಗಳು, ಸಂಬಂಧಗಳು ಬೆಸೆಯುವ ಸೂಜಿಯಾಗಿ ಕವಿತೆ ಹೆಣೆಯಬೇಕು ಎಂದು ಅಭಿಪ್ರಾಯಪಟ್ಟರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಟ್ಟಣದ ಹಿರಿಯ ವೈದ್ಯ ಡಾ. ಎ ಎ ಪಾಂಗಿ ಮಾತನಾಡಿ ಅಥಣಿ ಸಾಹಿತ್ಯ ಕ್ಷೇತ್ರದಲ್ಲಿ ಕವಿ ಅಪ್ಪಾಸಾಹೇಬ ಅಲಿಬಾದಿ ವಿಶೇಷ ಕೊಡುಗೆ ನೀಡಿದ್ದಾರೆ. ಅವರು ನನಗೂ ಕೂಡ ಸಾಹಿತ್ಯದ ಅಭಿರುಚಿ ಹುಟ್ಟಿಸಿದವರು. ಇಂದಿನ ಅನೇಕ ಯುವ ಪೀಳಿಗೆಗೆ ಅವರು ಪ್ರೇರಣೆಯಾಗಿದ್ದಾರೆ ಎಂದು ಹೇಳಿದ ಅವರು ಕವಿಗಳಿಗೆ ಸಂತೃಪ್ತಿಗಿಂತ ಅತೃಪ್ತಿ ಇರಬೇಕು. ಅತೃಪ್ತಿಯಿದ್ದರೆ ಮಾತ್ರ ಹೆಚ್ಚೆಚ್ಚು ಕವಿತೆಗಳನ್ನು ಹಾಗೂ ಪರಿಣಾಮಕಾರಿ ಕವನಗಳನ್ನು ಬರೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ರವಿ ಪೂಜಾರಿ, ನ್ಯಾಯವಾದಿ ಹಾಗೂ ರಂಗಭೂಮಿ ಕಲಾವಿದ ಕೆ ಎಲ್ ಕುಂದರಗಿ ಮಾತನಾಡಿದರು.ಕವಿ ಅಪ್ಪಾಸಾಹೇಬ ಅಲಿಬಾದಿ ಅವರ ಕಾವ್ಯ ಕೃತಿಗಳ ಕುರಿತು ಡಾ. ಪ್ರಿಯಂವಧಾ ಹುಲಗಬಾಳಿ, ಚುಟುಕು ಚೇತನ ಕುರಿತು ದೇವೇಂದ್ರ ಬಿಸ್ವಾಗರ, ವಚನ ಬೆಳಕು ಕುರಿತು ಎಸ್ ಎ ಗೋಟೆ, ಕೃಷ್ಣೆಯ ಮಡಿಲು ಕುರಿತು ಎನ್ ಬಿ ಝಾರೆ, ಶ್ರಾವಣ ಸಿಂಚನ ಕುರಿತು ರೋಹಿಣಿ ಯಾದವಾಡ ಸಭಿಕರಿಗೆ ಮನಮುಟ್ಟುವಂತೆ ವಿವರಿಸಿದರು.
ಕವಿ ಅಪ್ಪಾಸಾಹೇಬ ಅಲಿಬಾದಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಹುಟ್ಟುಹಬ್ಬಗಳ ಆಚರಣೆ ತನ್ನ ಮಹತ್ವವನ್ನ ಕಳೆದುಕೊಳ್ಳುತ್ತಿದೆ. ನನ್ನ 64ನೇಯ ಹುಟ್ಟುಹಬ್ಬವನ್ನು ನನ್ನ ಬದುಕಿನಲ್ಲಿ ಸಾಹಿತ್ಯ ಕೃಷಿ ಮಾಡಿದ ಸಮಗ್ರ ಕಾವ್ಯ ಕೃತಿಗಳ ಕಾವ್ಯಾವಲೋಕನ ಮತ್ತು ಕವಿ ಗೋಷ್ಠಿಯನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸಿಕೊಳ್ಳಬೇಕೆಂಬ ಸಂಕಲ್ಪ ಹೊಂದಿದೆ. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅನೇಕ ಜನ ಅಭಿಮಾನಿಗಳು ಮತ್ತು ಸಾಹಿತಿಗಳು, ಪತ್ರಕರ್ತರು ಮತ್ತು ಕನ್ನಡಪರ ಸಂಘಟನೆಯ ಎಲ್ಲ ಪದಾಧಿಕಾರಿಗಳಿಗೆ ಮತ್ತು ಇಂದಿನ ಕಾರ್ಯಕ್ರಮದ ಎಲ್ಲಾ ಅತಿಥಿಗಳಿಗೆ ಚಿರಋಣಿಯಾಗಿದ್ದೇನೆ ಎಂದು ಹೇಳಿದರು.
ನಂತರ ನಡೆದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ 15 ಜನ ಕವಿಗಳು ತಮ್ಮ ಕವನಗಳನ್ನು ಮಂಡಿಸಿದರು. ಸಾಹಿತಿ ಜೆ ಪಿ ದೊಡ್ಡಮನಿ, ದೇವೇಂದ್ರ ಬಿಸ್ವಾಗರ, ರೋಹಿಣಿ ಯಾದವಾಡ, ದರೆಪ್ಪ ಟಕ್ಕಣ್ಣವರ, ಗೀರೀಶ್ ಬುಠಾಳಿ, ಸಂಪತ್ ಕುಮಾರ್ ಶೆಟ್ಟಿ, ಎಸ್ ಕೆ ಹೊಳೆಪ್ಪನವರ, ನಾರಾಯಣ ಆನಿಖಿಂಡಿ, ಡಾ. ಆರ್ ಎಸ್ ದೊಡ್ಡನಿಠಪ್ಪಗೋಳ, ಎಂ ಸಿ ಗಂಗಾಧರ, ಎಲ್ ವಿ ಕುಲಕರ್ಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಡಾ. ಆರ್ ಎಸ್ ದೊಡ್ಡ ನಿಂಗಪ್ಪಗೋಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ ವಾಘಮೋಡೆ ಕಾರ್ಯಕ್ರಮ ನಿರೂಪಿಸಿದರು. ಭಾರತಿ ಅಲಿಬಾದಿ ವಂದಿಸಿದರು.