ಕೃಷ್ಣಾ ನದಿ ನೀರಿನ ಹರಿವು ಹೆಚ್ಚಳ: ಸುರಕ್ಷಿತ ಪ್ರದೇಶಕ್ಕೆ ತೆರಳಲು ಸೂಚನೆ
ಲೋಕದರ್ಶನ ವರದಿ,
ಜಮಖಂಡಿ 21: ತಾಲೂಕಿನಲ್ಲಿ ಹರಿಯುತ್ತಿರುವ ಕೃಷ್ಣಾ ನದಿಗೆ ಈ ವರ್ಷವು ಪ್ರವಾಹ ಬರುವ ಸಾಧ್ಯತೆ ಇದ್ದು, ತಾಲೂಕಿನ ನದಿ ತೀರದ ಜನ ಎಚ್ಚರಿಕೆಯಿಂದ ಇರಬೇಕೆಂದು ತಾಲೂಕಾಡಳಿತ ಎಚ್ಚರಿಸಿದೆ.
ಮಹಾರಾಷ್ಟ್ರದ ಸಹ್ಯಾದ್ರಿ ತಪ್ಪಲು ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚಾಗುತ್ತಿದ್ದು, ಕೋಯಿನಾ ಹಾಗೂ ರಾಜಾಪೂರ ಡ್ಯಾಮಗಳಿಂದ ನೀರಿನ ಹರಿವು ಹೆಚ್ಚಾಗುತ್ತಿದ್ದು, ಜನ-ಜಾನುವಾರುಗಳು ಸುರಕ್ಷಿತ ಪ್ರದೇಶಕ್ಕೆ ತೆರಳಲು ಸೂಚಿಸಲಾಗಿದೆ. ತಾಲೂಕಿನ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳಿಗೆ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುತ್ತಿರುವುದರಿಂದ ರಾಜಾಪುರ ಡ್ಯಾಮ್, ಕಲ್ಲೋಳ ಬ್ಯಾರೇಜ್, ದೂಧೂಗಂಗಾ ನದಿಯಿಂದ ಎಲ್ಲ ಸೇರಿ ಸುಮಾರು 1 ಲಕ್ಷ ಕ್ಯೂಸೆಕ್ಸ್ಕ್ಕಿಂತ ಹೆಚ್ಚಿಗೆ ನೀರು ಹೊರ ಬಿಡಲಾಗುತ್ತಿದೆ. ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ವಾಸಿಸುವ ಜನರಿಗೆ ಈ ಸಂದರ್ಭದಲ್ಲಿ ನದಿಗೆ ಇಳಿಯದಂತೆ ಹಾಗೂ ನದಿ ಪಾತ್ರಕ್ಕೆ ತೆರಳದಂತೆ ಹಾಗೂ ಜನ-ಜಾನುವಾರುಗಳನ್ನು ನದಿ ಸಮೀಪ ಬಿಡದಂತೆ ಎಚ್ಚರಿಕೆ ವಹಿಸಲು ಡಂಗುರ ಸಾರಲು ಜಮಖಂಡಿ ಉಪ ವಿಭಾಗಾಧಿಕಾರಿ ಸಂತೋಷ ಕಾಮಗೊಂಡ ಸೂಚಿಸಿದ್ದಾರೆ.
ತಾಲೂಕಿನ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳಿಗೆ ಹಾಗೂ ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರಲು ಕೂಡ ತಿಳುವಳಿಕೆ ನೀಡಲಾಗಿದ್ದು, ಜಾಗೃತಿಯನ್ನು ಮೂಡಿಸುವ ಅಗತ್ಯ ಕ್ರಮ ವಹಿಸುವಂತೆ ತಿಳಿಸಲಾಗಿದೆ. ಗ್ರಾಮದ ನದಿ ತೀರದ ಪ್ರತಿ ಗಂಟೆಯ ಸ್ಥಿತಿಗತಿಯನ್ನು ತಾಲೂಕಾಡಳಿತಕ್ಕೆ ತಿಳಿಸಲು ಮತ್ತು ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ ಅವರೊಂದಿಗೆ ನಿಕಟ ಸಂಪರ್ಕದಿಂದಿರಲು ತಿಳಿಸಲಾಗಿದೆ. ಪ್ರವಾಹ ಪರಿಸ್ಥಿತಿಗೆ ತುತರ್ು ಕೆಲಸದ ಉಸ್ತುವಾರಿಯನ್ನು ಸಂಬಂದಿಸಿದ ಉಪ ತಹಸೀಲ್ದಾರ ಹಾಗೂ ಕಂದಾಯ ನೀರಿಕ್ಷಕರು ವಹಿಸಿ, ಕೂಡಲೇ ಕ್ರಮ ವಹಿಸಲು ಸೂಚಿಸಲಾಗಿದೆ.
: