ಮಾಂಸದ ತ್ಯಾಜ್ಯ ತಡೆಗೆ ಪೈಪ್ಗೆ ತಗಡಿನ ಹೊದಿಕೆ ಹಾಗೂ ಕುಸಿಯುವ ರಸ್ತೆ ದುರಸ್ತಿಗೆ ಜನಪ್ರಿಯ ಅಧಿಕಾರಿ ಲಕ್ಷ್ಮಣ ಜೋಗದಂಡಕರ್ ಸಾಹೇಬರ ಮೇಲೆ ಕೃಷ್ಣಾ ಹಡಪದ ಭರವಸೆ
ಗದಗ 24 : ನಗರದ ಗಂಗಾಪುರ ಪೇಟೆ ಮತ್ತು ಜವಳಗಲ್ಲಿ ಮಧ್ಯದಲ್ಲಿರುವ ಬೃಹತ್ ರಾಜಕಾಲುವೆ ಪರಿಸರದಲ್ಲಿ ಸಾರ್ವಜನಿಕರ ಜೀವಕ್ಕೆ ಹಾಗೂ ಆರೋಗ್ಯಕ್ಕೆ ತೀವ್ರ ಗಂಡಾಂತರ ಎದುರಾಗಿದ್ದು, ನಗರಸಭೆಯು ಯಾವುದೇ ಜನಪ್ರತಿಭಟನೆ ಅಥವಾ ಹೋರಾಟಕ್ಕೆ ಆಸ್ಪದ ನೀಡದೆ, ಅತ್ಯಂತ ಜನಪರ ಕಾಳಜಿಯೊಂದಿಗೆ ಈ ಗಂಭೀರ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ಕೃಷ್ಣಾ ಎಚ್. ಹಡಪದ ಅವರು ಪ್ರಮುಖ ದಿನಪತ್ರಿಕೆಗಳ ಮೂಲಕ ಜಿಲ್ಲಾಡಳಿತ ಹಾಗೂ ನಗರಸಭೆಯನ್ನು ತೀವ್ರವಾಗಿ ಒತ್ತಾಯಿಸಿದ್ದಾರೆ. ಈ ಭಾಗದ ಸಹಸ್ರಾರು ನಾಗರಿಕರ ದೈನಂದಿನ ಬದುಕನ್ನು ಕಂಗೆಡಿಸಿರುವ ಪ್ರಮುಖ ಜೀವನ್ಮರಣ ಸಮಸ್ಯೆಗಳು ಈ ಕೆಳಗಿನಂತಿವೆ:1. ರಾಜಕಾಲುವೆಯ ಗೋಡೆಗೆ ಹೊಂದಿಕೊಂಡೇ ಹಾದುಹೋಗಿರುವ ಪೈಪ್ಲೈನ್, ತುಂಗಭದ್ರಾ ನದಿಯಿಂದ ನಗರಕ್ಕೆ ಬರುವ ಮುಖ್ಯ ಕುಡಿಯುವ ನೀರಿನ ಮಾರ್ಗವಾಗಿದೆ. ವಾರ್ಡ್ ನಂಬರ್ 16ಕ್ಕೆ ಒಳಪಡುವ ಡೋರಗಲ್ಲಿ, ಆದಿಜಾಂಬವ ನಗರ, ಹೊಂಬಳನಾಕಾ ಜನತಾ ಕಾಲೋನಿ, ಅಂಬೇಡ್ಕರ್ ನಗರ ಮತ್ತು ರೆಹಮತ್ ನಗರ ಸೇರಿದಂತೆ ಒಟ್ಟು ಐದು ಬಡಾವಣೆಗಳ ಸಾವಿರಾರು ನಾಗರಿಕರು, ಗರ್ಭಿಣಿಯರು, ಹಿರಿಯ ಜೀವಗಳು ಹಾಗೂ ಪುಟ್ಟ ಮಕ್ಕಳು ಇದೇ ನೀರನ್ನು ಅವಲಂಬಿಸಿದ್ದಾರೆ.ಆದರೆ, ಈ ಪೈಪ್ಲೈನ್ನ ಅತ್ಯಂತ ಸಮೀಪದಲ್ಲೇ ಕೋಳಿ, ಮೀನು ಹಾಗೂ ಮಟನ್ ಮಾರ್ಕೆಟ್ ಇದ್ದು, ಅಲ್ಲಿನ ಕೆಲ ವ್ಯಾಪಾರಿಗಳು ಮಾಂಸದ ತೊಳೆಯುವ ಕೊಳಕು ನೀರು ಹಾಗೂ ದುರ್ವಾಸನೆ ಬೀರುವ ಮಾಂಸದ ತ್ಯಾಜ್ಯವನ್ನು ನೇರವಾಗಿ ಕುಡಿಯುವ ನೀರಿನ ಪೈಪ್ ಮೇಲೆಯೇ ಎಸೆಯುತ್ತಿದ್ದಾರೆ. ಈ ಪೈಪ್ನಲ್ಲಿ ಏನಾದರೂ ಸಣ್ಣದೊಂದು ರಂಧ್ರ ಬಿದ್ದರೂ ಅಥವಾ ಕೀಲುಗಳು ಸಡಿಲಗೊಂಡರೂ, ಕಲುಷಿತ ನೀರು ಸರಬರಾಜಾಗಿ ಇಡೀ ಐದು ಓಣಿಗಳಲ್ಲಿ ಸಾಂಕ್ರಾಮಿಕ ರೋಗಗಳು ಸ್ಫೋಟಗೊಳ್ಳುವ ಭೀತಿ ಇದೆ. ನಗರಸಭೆಯು ತಕ್ಷಣವೇ ಈ ಮಾಂಸದ ಅಂಗಡಿಯವರಿಗೆ ಕಡಕ್ ಎಚ್ಚರಿಕೆಯ ನೋಟಿಸ್ ಜಾರಿ ಮಾಡಬೇಕು. ಹಾಗೆಯೇ ಬಡ ವ್ಯಾಪಾರಿಗಳ ಹೊಟ್ಟೆ ಮೇಲೂ ಹೊಡೆಯದಂತೆ, ಅವರಿಗೂ ಅಗತ್ಯ ಸೌಲಭ್ಯಗಳಿರುವ ಸೂಕ್ತ ಹೈಟೆಕ್ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು. ಇದೇ ವೇಳೆ, ನೀರಿನ ಪೈಪ್ಲೈನ್ಗೆ ಸಂಪೂರ್ಣವಾಗಿ ಜಿ.ಐ. ತಗಡಿನ ಹೊದಿಕೆಯನ್ನು ಅಳವಡಿಸಿ, ತ್ಯಾಜ್ಯಗಳು ನೇರವಾಗಿ ಪೈಪ್ ಮೇಲೆ ಬೀಳದಂತೆ ಶಾಶ್ವತ ಭದ್ರತೆ ಒದಗಿಸಬೇಕು.2. ರಾಜಕಾಲುವೆಗೆ ಹೊಂದಿಕೊಂಡಿರುವ ಮುಖ್ಯ ರಸ್ತೆಯು ಮೇಲ್ನೋಟಕ್ಕೆ ಗಟ್ಟಿಯಾದ ಸಿಸಿ ರಸ್ತೆಯಂತೆ ಕಂಡರೂ, ಕಾಲುವೆಯ ನೀರಿನ ರಭಸಕ್ಕೆ ರಸ್ತೆಯ ಕೆಳಗಿರುವ ಮಣ್ಣು ಮತ್ತು ಕಲ್ಲುಗಳು ಸಂಪೂರ್ಣವಾಗಿ ಕೊಚ್ಚಿಹೋಗಿವೆ. ರಸ್ತೆಯು ಒಳಗಿನಿಂದ ಸಂಪೂರ್ಣವಾಗಿ ಟೊಳ್ಳಾಗಿದ್ದು, ಅಪಾಯಕಾರಿ ಕಂದಕ ಸೃಷ್ಟಿಯಾಗಿದೆ. ಒಂದು ವೇಳೆ ನಗರಸಭೆಯು ಇದೇ ಉದಾಸೀನತೆ ಮುಂದುವರಿಸಿದರೆ, ಯಾವುದೇ ಕ್ಷಣದಲ್ಲಾದರೂ ಭಾರಿ ವಾಹನಗಳು ಸಂಚರಿಸುವಾಗ ರಸ್ತೆ ಕುಸಿದು ನೂರಾರು ಜೀವಗಳು ಬಲಿಯಾಗುವ ಭೀತಿ ದಟ್ಟವಾಗಿದೆ. ರಸ್ತೆ ಕುಸಿಯುವ ಮುನ್ನವೇ ನಗರಸಭೆಯು ಈ ರಸ್ತೆಯ ಕೆಳಭಾಗಕ್ಕೆ ಭದ್ರವಾದ ತಡೆಗೋಡೆ ನಿರ್ಮಿಸಿ, ಕಾಂಕ್ರೀಟ್ ತುಂಬಿಸಿ ರಸ್ತೆಯನ್ನು ಬಲಪಡಿಸಬೇಕು.ದಕ್ಷ ಅಧಿಕಾರಿ ಲಕ್ಷ್ಮಣ ಜೋಗದಂಡಕರ್ ಸಾಹೇಬರ ಮೇಲೆ ನಾಗರಿಕರ ಮತ್ತು ಕೃಷ್ಣಾ ಹಡಪದ ಅವರ ಅಪಾರ ನಂಬಿಕೆ:"ನಗರಸಭೆಯ ಪ್ರಮುಖ ಅಧಿಕಾರಿಗಳಾದ ಲಕ್ಷ್ಮಣ ಜೋಗದಂಡಕರ್ ಸಾಹೇಬರು ಅತ್ಯಂತ ದಕ್ಷ, ಯುವ ಹಾಗೂ ಬಡವರ ಮತ್ತು ಜನಸಾಮಾನ್ಯರ ಕಷ್ಟಗಳಿಗೆ ಮಿಡಿಯುವ ಅಪಾರ ಕಳಕಳಿ ಇರುವ ಜನಪ್ರಿಯ ಅಧಿಕಾರಿಯಾಗಿದ್ದಾರೆ. ಈ ಗಂಭೀರ ಸಮಸ್ಯೆಯು ಅವರ ಗಮನಕ್ಕೆ ಬರುತ್ತಿದ್ದಂತೆಯೇ ಅವರು ತಕ್ಷಣವೇ ಸ್ಪಂದಿಸಿ, ರಸ್ತೆ ದುರಸ್ತಿ ಹಾಗೂ ಪೈಪ್ಲೈನ್ ರಕ್ಷಣೆಗೆ ಯುದ್ಧೋಪಾದಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎನ್ನುವ ಸಂಪೂರ್ಣ ವಿಶ್ವಾಸ ಹಾಗೂ ನಂಬಿಕೆ ಇಡೀ ಗಂಗಾಪುರ ಪೇಟೆ. ಜವಳಗಲ್ಲಿ ಹಾಗೂ 16ನೇ ವಾರ್ಡಿಗೆ ಸಂಬಂಧಿಸಿದ ಐದು ಪೂರ್ಣಿಯ ಸಾರ್ವಜನಿಕರಿಗಿದೆ. ಬಡ ವ್ಯಾಪಾರಿಗಳಿಗೂ ತೊಂದರೆಯಾಗಬಾರದು, ಸಾರ್ವಜನಿಕರ ಜೀವಕ್ಕೂ ಹಾನಿಯಾಗಬಾರದು ಎನ್ನುವ ನಮ್ಮ ಸೌಜನ್ಯಯುತ ಕಳಕಳಿಗೆ ಈ ಯುವ ಅಧಿಕಾರಿಗಳು ಶೀಘ್ರದಲ್ಲೇ ಮುಕ್ತಿ ನೀಡಲಿದ್ದಾರೆ" ಎಂದು ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ಅವರು ಪ್ರಕಟಣೆಯಲ್ಲಿ ಅತ್ಯಂತ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.