ಸಾರ್ವಜನಿಕರ ಆರೋಗ್ಯ ಸೇವೆಗೆ ಕೆಎಲ್ಇ ಸಂಸ್ಥೆ ಯಾವತ್ತೂ ಸಿದ್ಧ
ಉಚಿತ ಆರೋಗ್ಯ ತಪಾಸನಾ ಶಿಬಿರವನ್ನು ಉದ್ಘಾಟಿಸಿದ ನಿರ್ದೇಶಕ ಡಾ. ವಿ ಎಸ್ ಸಾಧುನವರ
ಬೈಲಹೊಂಗಲ (ತಿಗಡಿ) 15: ಸಾರ್ವಜನಿಕರ ಆರೋಗ್ಯ ಸೇವೆಗೆ ಕೆಎಲ್ಇ ಸಂಸ್ಥೆ ಯಾವತ್ತೂ ಸಿದ್ದ ಎಂದು ಕೆ ಎಲ್ ಇ ಸಂಸ್ಥೆಯ ನಿರ್ದೇಶಕ ಡಾ. ವಿ ಎಸ್ ಸಾಧುನವರ ಹೇಳಿದರು.
ಅವರು ಗುರುವಾರ ದಿ. 14ರಂದು ಕೆಎಲ್ಇ ಡಿಪ್ಲೊಮಾ ಕಾಲೇಜು ಬೈಲಹೊಂಗಲನ ರಾಷ್ಟ್ರೀಯ ಸ್ವಯಂ ಸೇವಾ ಕಾರ್ಯಕ್ರಮದ ಅಂಗವಾಗಿ ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ, ಕೆಎಲ್ಇ ಡಿಪ್ಲೊಮಾ ಕಾಲೇಜು ಬೈಲಹೊಂಗಲ ಹಾಗೂ ಗ್ರಾಮ ಪಂಚಾಯತ ತಿಗಡಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸನಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಆರೋಗ್ಯ ಸೇವೆಗಳು ಕೇವಲ ನಗರಗಳಿಗಷ್ಟೇ ಸೀಮಿತವಾಗಬಾರದು ಪ್ರತಿಯೊಂದು ಗ್ರಾಮಕ್ಕೂ ಪ್ರತಿಯೊಂದು ಮನೆಗೂ ಮುಟ್ಟಬೇಕು ಎಂಬ ಮಹದುದ್ದೇಶದಿಂದ ಕೆ ಎಲ್ ಇ ಸಂಸ್ಥೆಯು ಈಗಾಗಲೆ ಕಾರ್ಯೋನ್ಮುಖವಾಗಿದೆ. ಈ ನಿಟ್ಟಿನಲ್ಲಿ ತಿಗಡಿ ಗ್ರಾಮದಲ್ಲಿಯೂ ಸಹ ಇಂದು ಉಚಿತ ಆರೋಗ್ಯ ತಪಾಸನಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ ಆದ್ದರಿಂದ ಈ ಶಿಬಿರದ ಸದುಪಯೋಗಪಡೆದುಕೊಂಡು ಆರೋಗ್ಯವಂತರಾಗಿರಿ ಎಂದು ಕರೆ ನೀಡಿದರು.
ಕೆ ಎಲ್ ಇ ಸಂಸ್ಥೆಯ ಮತ್ತೊಬ್ಬ ನಿರ್ದೇಶಕ ಬಿ ಆರ್ ಪಾಟೀಲ ಅವರು ಮಾತನಾಡುತ್ತ ಪ್ರಾರಂಭಿಕ ಹಂತದಲ್ಲಿ ಶಿಕ್ಷಣ ಒದಗಿಸುವ ಉದ್ದೇಶದಿಂದ ಪ್ರಾರಂಭಗೊಂಡ ನಮ್ಮ ಕೆ ಎಲ್ ಇ ಸಂಸ್ಥೆಯು ಇಂದು ವೈದ್ಯಕೀಯ ಶಿಕ್ಷಣದಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಇದು ನಮ್ಮ ಸಂಸ್ಥೆಯ ಸೇವಾ ನೈಪುಣ್ಯತೆಗೆ ಸಂದ ಗೌರವವಾಗಿದೆ ಎಂದು ಹೇಳಲು ಹೆಮ್ಮೆ ಎನ್ನಿಸುತ್ತದೆ. ಡಾ. ಪ್ರಭಾಕರಣ್ಣಾ ಕೋರೆ ಅವರ ಸಫಲ ನೇತೃತ್ವದಲ್ಲಿ ವುನೆ ಮನೆಗೂ ಆರೋಗ್ಯ ಪರಿಕಲ್ಪನೆಯನ್ನು ಮುಟ್ಟಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಇದರ ಉಪಯೋಗ ಪಡೆದುಕೊಳ್ಳಿರಿ ಎಂದು ಹೇಳಿದರು.
ಶಿಬಿರದಲ್ಲಿ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹೆಸರಾಂತ ವೈದ್ಯರಾದ ಡಾ. ವಿರೇಂದ್ರ ಅಷ್ಟಗಿ, ಚಿಕ್ಕಮಕ್ಕಳ ವೈದ್ಯ ಡಾ. ಬಸವರಾಜ ಕುಡಸೋಮಣ್ಣವರ, ನೇತ್ರ ತಜ್ಞ ಡಾ. ಅಡಿವೆಪ್ಪಾ ಪರಾಯಿ, ಎಲುಬು ಕೀಲು ವೈದ್ಯ ಡಾ. ಮುರುಘೇಶ ಕುರನಿ ಹಾಗೂ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞೆ ಡಾ. ಮುಕ್ತಾ ಅಲಕುಂಟೆ ಮತ್ತು ತಂಡದವರು ತಿಗಡಿ ಗ್ರಾಮಸ್ಥರಿಗೆ ಆರೋಗ್ಯ ತಪಾಸಣೆ ಮಾಡಿ ಓಷಧ ವಿತರಿಸಿದರು.
ಶಿಬಿರದಲ್ಲಿ 346 ನಾಗರಿಕರನ್ನು ತಪಾಸಿಸಲಾಯಿತು. ಅದರಲ್ಲಿ 110 ಜನರಿಗೆ ಮೆಡಿಸಿನ ವಿಭಾಗದ ವೈದ್ಯರು ತಪಾಸಣೆ ಮಾಡಿ 15 ಜನರಿಗೆ ಅತಿರಕ್ತದೊತ್ತಡ, 8 ಜನರಿಗೆ ಮಧುಮೇಹದ ಸಮಸ್ಯೆ, 97 ಜನರಿಗೆ ಎಲುಬು ಕೀಲು ವೈದ್ಯರಿಂದ ತಪಾಸಣೆ ಮಾಡಲಾಗಿ ಅದರಲ್ಲಿ 12 ಜನರಿಗೆ ಸಂಧಿವಾತ ಮತ್ತಿತರೆ ಸಮಸ್ಯೆಗಳಿರುವದು ತಿಳಿದುಬಂದಿತು, 65 ಜನರಿಗೆ ಕಣ್ಣಿನ ವೈದ್ಯರು ತಪಾಸಣೆ ಮಾಡಲಾಗಿ ಅದರಲ್ಲಿ 13 ಜನರಿಗೆ ಮೋತಿಬಿಂದು ಮತ್ತಿತರೆ ಸಮಸ್ಯೆಗಳಿರುವದು ತಿಳಿದುಬಂದಿತು, 28 ಜನ ಗರ್ಭಿಣಿಯರು ಮತ್ತು ಮಹಿಳೆಯರು ತಪಾಸಣೆಗೊಳಪಟ್ಟರು, ಚಿಕ್ಕಮಕ್ಕಳ ವೈದ್ಯರು 55 ಮಕ್ಕಳನ್ನು ತಪಾಸಣೆ ಮಾಡಿದರು. ಅದರಲ್ಲಿ 4 ಮಕ್ಕಳಿಗೆ ಅಪೌಷ್ಟಿಕತೆ ಮತ್ತಿತರೆ ಸಮಸ್ಯೆಗಳಿರುವದು ತಿಳಿದುಬಂದಿತು. ಈ ಎಲ್ಲ ನಾಗರಿಕರಿಗೆ ಆಸ್ಪತ್ರೆಯ ಅತ್ಯಲ್ಪ ದರದ ಸೇವೆಗಳನ್ನು ಉಪಯೋಗಿಸಿಕೊಳ್ಳಲು ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಅವರು ಸೂಚಿಸಿದ್ದಾರೆ.
ಬೈಲಹೊಂಗಲ ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್ ಎಸ್ ದಿದಣ್ಣವರ, ತಾಲೂಕಾ ಹಿರಿಯ ಆರೋಗ್ಯ ಸಹಾಯಕರಾದ ನಾಗರಾಜ ಕಾಡೆ, ಈಶ್ವರ ನಿರಡಿ ಕೆ ಎಲ್ ಇ ಡಿಪಲೊಮಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀಧರ ನಿರಡಿ, ಪ್ರಾಧ್ಯಾಪಕ ಎಚ್ ಎಸ ಸಂಕಣ್ಣವರ ಮತ್ತು ತಿಗಡಿ ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.