ಜಾಜಿಮಲ್ಲಿಗೆ ಕವಿ : ಡಾ. ಸತ್ಯಾನಂದ ಪಾತ್ರೋಟ
'ಬಡವನಾದರೆ ಏನು ಪ್ರಿಯೆ. ಕೈ ತುತ್ತು ತಿನಿಸುವೆ, ಎದೆಯಾ ತುಂಬಾ ಒತ್ತಿಕೊಂಡು ಮುತ್ತು ಮಳೆಯಾ ಸುರಿಸುವೆ.....' ಕವನದ ಸಾಲುಗಳು ರಾಜ್ಯದ ಅನೇಕರ ಮೊಬೈಲುಗಳಲ್ಲಿ ರಿಂಗಟೋನ್ಗಳಾಗಿ ರಿಂಗಣಿಸುತ್ತಿವೆ. ಈ ಗೀತೆ ಕೇಳಿದರೆ ಎಂತಹ ಪ್ರೇಮಿಗಳ ಮೈನವಿರೇಳುತ್ತದೆ. ಕವಿ ಸತ್ಯಾನಂದ ಪಾತ್ರೋಟರ ಈ ಕವಿತೆಗೆ ನಾಡಿನಾದ್ಯಾಂತ ಬಹುದೊಡ್ಡ ಅಭಿಮಾನಿಗಳ ಬಳಗವೇ ಇದೆ. ಓದುಗರ ಮತ್ತು ಕೇಳುಗರನ್ನು ಈ ಕವಿತೆ ಸದಾ ಪುಳಕಗೊಳಿಸುತ್ತದೆ. ಅವರು ಸಾಹಿತ್ಯವಲಯದಲ್ಲಿ ಜಾಜಿಮಲ್ಲಿಗೆಯ ಕವಿ ಎಂದೇ ಪ್ರಸಿದ್ಧರಾಗಿದ್ದಾರೆ. ಕವಿಯಾಗಿ, ನಾಟಕಕಾರರಾಗಿ, ಸಂಶೋಧಕರಾಗಿ. ಪ್ರಬಂಧಕಾರರಾಗಿ, ಅಧ್ಯಾಪಕರಾಗಿ ಪಾತ್ರೋಟರವರು ಬಹುಮುಖಿ ಆಯಾಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಸತ್ಯಾನಂದ ಪಾತ್ರೋಟರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕಲಗುಕರ್ಿ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ತಿಮ್ಮಣ್ಣ, ತಾಯಿ ಶೆಟ್ಟೆವ್ವ. ಪಾತ್ರೋಟ ಅನ್ನುವದು ಮರಾಠಿ ಪದದಲ್ಲಿ ಪತ್ತರ್ ಎಂದರೆ ಕಲ್ಲು ಕುಟುಕುವಿಕೆ ಎಂದರ್ಥ. ಅದು ಕನ್ನಡದಲ್ಲಿ ಪಾತ್ರೋಟವಾಗಿದೆ. ಅಪ್ಪ ಕಲ್ಲು ಕಟೆದು ಗೋಡೆ ಕಟ್ಟುವ ದಿನಗೂಲಿ ಕಾಮರ್ಿಕನಾದರೆ, ಅವ್ವ ಅಪ್ಪನ ಕೈಯಲ್ಲಿ ಕೆಸರು-ಕಲ್ಲು ಕೊಡುವ ದಿನಗೂಲಿ. ಅತೀ ಕಡುಬಡತನದ ಪರಿಸ್ಥಿತಿಯಲ್ಲಿಯೇ ಸತ್ಯಾನಂದ ಪ್ರಾಥಮಿಕ ಶಿಕ್ಷಣವನ್ನು ಕಲಗುಕರ್ಿಯಲ್ಲಿ ಪಡೆದರು. ಕಲ್ಲು ಕುಟ್ಟಿಯೇ ಜೀವನ ನಡೆಸುತ್ತಿದ್ದ ಪಾಲಕರಿಗೆ ಮಗನ ಶಿಕ್ಷಣದ ಬಗ್ಗೆ ಚಿಂತೆಯಾಯಿತು. ಹೀಗಾಗಿ ಬೀಳಗಿಗೆ ಮಾಧ್ಯಮಿಕ ಶಿಕ್ಷಣವನ್ನು ಓದಲು ಮಗಳ ಮನೆಗೆ ಕಳುಹಿಸಿದರು. ಅವರು ಸಹ ಆಥರ್ಿಕವಾಗಿ ಅಷ್ಟು ಸದೃಢವಾಗಿರಲಿಲ್ಲ. ಅಂತಹ ಸ್ಥಿತಿಯಲ್ಲಿಯೇ ಸತ್ಯಾನಂದರು ಮೆಟ್ರಿಕ್ನ್ನು ಪೂರೈಸಿದರು. ನಂತರ ಮುಧೋಳದಲ್ಲಿ ಪದವಿಪೂರ್ವ ಶಿಕ್ಷಣವನ್ನು ಗೆಳೆಯರ ಸಹಾಯದಿಂದ ಪೂರೈಸಿದರು.
ಸತ್ಯಾನಂದ ಪಾತ್ರೋಟರು ಪದವಿ ಶಿಕ್ಷಣಕ್ಕಾಗಿ ಗೆಳೆಯರ ನೆರವಿನೊಂದಿಗೆ ಬಾಗಲಕೋಟೆಗೆ ಬರುತ್ತಾರೆ. ಅವರಿಗೆ ಗೆಳೆಯ ಶಿವಾನಂದ ಕಣವಿ ತನ್ನ ಮನೆಯಲ್ಲಿರಿಸಿಕೊಂಡು ಆಸರೆಯಾದರೆ, ಗೆಳೆಯ ಮೌಲಾ ಪಿಂಜಾರ ಕಾಲೇಜು ಶುಲ್ಕವನ್ನು ಭರಿಸುತ್ತಾನೆ. ಗೆಳೆಯ ವಿಠ್ಠಲ ಕುರಿ ಹಸಿವನ್ನು ತುಂಬಿಸುತ್ತಾನೆ. ನಂತರ ಹಾಸ್ಟೇಲ್ನಲ್ಲಿದ್ದುಕೊಂಡು ನೋವು ಅವಮಾನಗಳ ಜೊತೆಗೆ 1982ರಲ್ಲಿ ಬಸವೇಶ್ವರ ಕಲಾ ಮಹಾವಿದ್ಯಾಲಯದಿಂದ ಬಿ.ಎ. ಪದವಿಯನ್ನು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುತ್ತಾರೆ. ಅವರು ಗುರುಗಳ ಮತ್ತು ಗೆಳೆಯರ ಸಹಾಯದಿಂದ ಜಮಖಂಡಿಯ ಸರಕಾರಿ ಕಾಲೇಜಿನಲ್ಲಿ ಬಿ.ಎಡ್.ನ್ನು ಗಳಿಸುತ್ತಾರೆ. ಅವರು 1985ರಲ್ಲಿ ಡಾ. ಬಿ. ಕೆ. ಹಿರೇಮಠರ ಇಚ್ಛೆಯ ಮೇರೆಗೆ ಕನರ್ಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಉತ್ತಮ ಶ್ರೇಣಿಯೊಂದಿಗೆ ತೇರ್ಗಡೆಯಾಗುತ್ತಾರೆ. ಅವರ ಮಾರ್ಗದರ್ಶನದಲ್ಲಿಯೇ 'ಬರಗೂರು ರಾಮಚಂದ್ರಪ್ಪ : ಸಾಂಸ್ಕೃತಿಕ ಸಂದರ್ಭ' ಎಂಬ ವಿಷಯದ ಮೇಲೆ ಪಿಹೆಚ್.ಡಿ. ಪದವಿಯನ್ನು ಗಳಿಸುತ್ತಾರೆ.
ಸತ್ಯಾನಂದ ಪಾತ್ರೋಟರಿಗೆ ಎಂ.ಎ. ಬಿ.ಎಡ್. ಶಿಕ್ಷಣ ಪಡೆದುಕೊಂಡರೂ ಉನ್ನತ ಮಟ್ಟದ ಕೆಲಸ ಸಿಗುವದಿಲ್ಲ. ಬೀಳಗಿಯಲ್ಲಿ ಪ್ರಕಟಗೊಳ್ಳುತ್ತಿದ್ದ 'ಹುಚ್ಚ' ಎಂಬ ಪತ್ರಿಕೆಯ ಸಹ ಸಂಪಾದಕರಾಗಿ ಕೆಲಸಕ್ಕೆ ಸೇರುತ್ತಾರೆ. ನಂತರ ಬಾಗಲಕೋಟೆಯ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕ ವೃತ್ತಿಗೆ ಸೇರುತ್ತಾರೆ. ಅವರು ಐದು ವರ್ಷಗಳವರೆಗೆ ಸಂಬಳವಿಲ್ಲದೇ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾರೆ. ತದನಂತರದ ದಿನಗಳಲ್ಲಿ ಶಿಕ್ಷಣ ಸಂಸ್ಥೆ ಅನುದಾನಕ್ಕೊಳಪಡುತ್ತದೆ. ಅವರು ಅಧ್ಯಾಪನ ವೃತ್ತಿಯ ಜೊತೆ ಜೊತೆಗೆ, ವಿದ್ಯಾಥರ್ಿಗಳ ನೆಚ್ಚಿನ ಶಿಕ್ಷಕರಾಗಿ ಮತ್ತು ಸಹಪಾಠಿಗಳಿಗೆ ಒಳ್ಳೆಯ ಗೆಳೆಯರಾಗಿ ಕರ್ತವ್ಯ ನಿರ್ವಹಿಸಿದ ಪಾತ್ರೋಟರು ಬರೆದಂತೆ ಬದುಕಿದವರು. 1988 ಮೇ 22 ರಂದು ಕವಿ ಸತ್ಯಾನಂದ ಪಾತ್ರೋಟರು ಸಮತಾ ಅವರನ್ನು ಮದುವೆಯಾದರು. ಸರಳ ಸಜ್ಜನಿಕೆಯ ಪಾತ್ರೋಟರು ಎಷ್ಟೇ ಕಷ್ಟವಿದ್ದರೂ ವಿಮುಖಗೊಳ್ಳದೇ ಮುಂದೆ ಸಾಗುತ್ತಾ ಬಂದಿದ್ದಾರೆ. ಅವರು ಉಪನ್ಯಾಸಕರಾಗಿ, ಸಾಹಿತಿಯಾಗಿ ಮತ್ತು ಪ್ರಕಾಶಕರಾಗಿ ಸೇವೆ ಸಲ್ಲಿಸುತ್ತಾ ಏಳು-ಬೀಳುಗಳ ನಡುವೆ ನಿರ್ಮಲ ಚಿತ್ತದಿಂದ ತಮ್ಮ ಕಾಯಕಗಳಿಂದ ಸಂತೋಷಗೊಂಡು ಜೀವನ ನಡೆಸುತ್ತಿದ್ದಾರೆ.
ಅವರ ತಂದೆ ಭಜನೆ ಪದಗಳನ್ನು ಹಾಡುತ್ತಿದ್ದರು. ಅಲ್ಲದೇ ಗೀಗೀ ಪದಗಳಲ್ಲಿ ಎತ್ತಿದ ಕೈ. ಅವುಗಳೆಲ್ಲ ಬಾಲ್ಯದಲ್ಲಿಯೇ ಸತ್ಯಾನಂದರಿಗೆ ಪ್ರೇರಣೆಯಾಗಿದ್ದವು. ಸತ್ಯಾನಂದರು ಪಿಯುಸಿಯಲ್ಲಿದ್ದಾಗಲೇ ಕವನ ರಚಿಸಿ ಗುರುಗಳಿಂದ ಭೇಷ್ ಅನಿಸಿಕೊಂಡರು. ನಂತರ ಸತ್ಯಾನಂದರು ತಮ್ಮ ಜೀವನದ ಅನುಭವಗಳನ್ನೇ ಕವನಗಳನ್ನಾಗಿ ರಚಿಸಿದರು. ಹೀಗಾಗಿ 1985ರಲ್ಲಿ 'ಕರಿ ನೆಲದ ಕಲೆಗಳು' ಕೃತಿಯನ್ನು ಪ್ರಕಟಿಸಿದರು. ಅದನ್ನು ಮಾರಲು ಪಡಲಾರದ ಕಷ್ಟವನ್ನು ಅನುಭವಿಸಿದರು. 1987ರಲ್ಲಿ ಕವಿ ಸತ್ಯಾನಂದ ಪಾತ್ರೋಟ ಅವರಿಗೆ ಒಳ್ಳೆಯ ದಿನಗಳು ಪ್ರಾರಂಭವಾದವು. ಅವರು ಬಳ್ಳಾರಿಯ ಕವಿಗೋಷ್ಠಿಯಲ್ಲಿ 'ಪಂಜೆಯುಡುಗೆಯ ಮುದುಕ' ಕವಿತೆಯನ್ನು ಓದಿದ್ದರು. ಆ ಸಮಯದಲ್ಲಿ ಉಪಸ್ಥಿತರಿದ್ದ ಎಲ್. ಎಸ್. ಶೇಷಗಿರಿರಾವ್ ಅವರು ಸತ್ಯಾನಂದರನ್ನು ಪ್ರಶಂಶಿಸಿ, ಕವಿತೆಯ ಕುರಿತು ವಿಮಶರ್ೆ ಮಾಡಿದ್ದರು. ನಂತರ 1990ರಲ್ಲಿ ಸುಧಾ ವಾರಪತ್ರಿಕೆಯಲ್ಲಿ ಪ್ರಕಟಗೊಂಡ 'ಜಾಜಿಮಲ್ಲಿಗೆ' ಕವಿತೆಯನ್ನು ನೋಡಿ ಬರಗೂರ ರಾಮಚಂದ್ರಪ್ಪನವರು ಸತ್ಯಾನಂದ ಅವರನ್ನು ನಾಡಿನಾದ್ಯಂತ ಪರಿಚಯಿಸಿದರು.
ಕವಿ ಡಾ. ಸತ್ಯಾನಂದ ಪಾತ್ರೋಟ ಅವರು ಏಳು ಕವನ ಸಂಕಲನಗಳನ್ನು, ಮೂರು ನಾಟಕಗಳನ್ನು ಹಲವಾರು ಸಂಪಾದನಾ ಕೃತಿಗಳನ್ನು ಮತ್ತು ಧ್ವನಿ ಸುರುಳಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅಪರ್ಿಸಿ ಪ್ರಖ್ಯಾತರಾಗಿದ್ದಾರೆ. ಕರಿ ನೆಲದ ಕಲೆಗಳು, ಜಾಜಿ ಮಲ್ಲಿಗೆ, ಕಲ್ಲಿಗೂ ಗೊತ್ತಿರುವ ಕಥೆ, ಕರಿಯ ಕಟ್ಟಿದ ಕವನ, ನನ್ನ ಕನಸಿನ ಹುಡುಗಿ, ನದಿಗೊಂದ ಕನಸು ಮತ್ತು ಅವಳು, ಹಂಗಿಲ್ಲದ ಅಂಗಳ, ಹೆಜ್ಜೆಗಳೆಲ್ಲ ಮಾತನಾಡಿದಾಗ, ನಾ ಪಟ್ಟ ಪಾಡು ಅದು ನನ್ನ ಹಾಡು, ಕಥೆ ಹೇಳಲೇ ಅಜ್ಜ ಕವನ ಸಂಕಲನಗಳು, ನಮಗ ಯಾರು ಇಲ್ಲೋ ಎಪ್ಪಾ ಸಾಕ್ಷಿ, ಮತ್ತೊಬ್ಬ ಏಕಲವ್ಯ, ಹ್ವಾದವರು ನಾಟಕಗಳು, ಒಂದಿಷ್ಟು ಕ್ಷಣಗಳು ಪ್ರಬಂಧ ಸಂಕಲನವನ್ನು ಪ್ರಕಟಿಸಿದ್ದಾರೆ. ಅವರು ಕೃಷ್ಣ ಪ್ರಭೆ, ಸಾರ್ಥಕ ಮತ್ತು ನಿಜದ ನೆಲೆ ಸಂಪಾದನಾ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ 'ಎದೆ ಮಾತು' ಭಾವಗೀತೆಗಳ ಸಿಡಿ ಪಾತ್ರೋಟರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದೆ.
ಡಾ. ಸತ್ಯಾನಂದ ಪಾತ್ರೋಟ ಅವರು ಮೊದಲು ಕನ್ನಡ ಸಾಹಿತ್ಯವನ್ನು ಪ್ರವೇಶಿಸಿದ್ದೆ ಕವಿತೆಗಳನ್ನು ಬರೆಯುವ ಮುಖಾಂತರ. ಅವರು ಸಮಾಜದಲ್ಲಿನ ವ್ಯವಸ್ಥೆ, ಮಾನವಿಯ ಸಂಬಂಧಗಳು, ಸಾಮಾಜಿಕ ಅಸಮಾನತೆ, ಲಿಂಗತಾರತಮ್ಯ, ತನ್ನವರ ಬಗೆಗಿನ ಕಳಕಳಿ, ನಿಸರ್ಗ ಪ್ರೇಮ ಇವುಗಳೊಂದಿಗೆ ಕಾವ್ಯವನ್ನು ರಚಿಸಿ ತಳಸಮುದಾಯದವರ ಪ್ರತಿನಿಧಿಯಾಗಿದ್ದಾರೆ. ಪಾತ್ರೋಟರ ಕವನ ಸಂಕಲನಗಳಲ್ಲಿ ವ್ಯಕ್ತಿಯನ್ನು ಕುರಿತು ಕವನಗಳು ಕಂಡುಬರುತ್ತವೆ. ಬುದ್ಧ, ಬಸವ, ಅಂಬೇಡ್ಕರ, ಗಾಂಧಿ, ಮಂಡೇಲಾ ಅವರನ್ನು ಕುರಿತು ಕವಿತೆಗಳನ್ನು ರಚಿಸಿದ್ದಾರೆ. ಕನ್ನಡ ಕಾವ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಪಾತ್ರೋಟ ಅವರು ಸತ್ಯವನ್ನು ಜೀವನದ ಸತ್ವವನ್ನು ನಿಸರ್ಗದ ಮೂಲಕ ಹುಡುಕಲು ಪ್ರಯತ್ನಿಸುತ್ತಾರೆ. ಕಾವ್ಯ ಎಂಬ ಕನ್ಯೆಯಲ್ಲಿ ತನ್ನವರಿಗಾದ ನೋವನ್ನು ಸೃಜಿಸಿ ದಾಖಿಲಿಸುತ್ತಾರೆ. ಸತ್ಯಾನಂದ ಪಾತ್ರೋಟ ಅವರ ನಾಟಕಗಳು ಗಮನಾರ್ಹ ಕೃತಿಗಳಾಗಿವೆ. ಅವರು ರಚಿಸಿದ ಮೂರು ನಾಟಕಗಳು ಸಾಮಾಜಿಕ ನಾಟಕಗಳಾಗಿದ್ದು ಸಹೃದಯರ ಮನಕಲಕುವಂತಿವೆ. 'ನಮಗೆ ಯಾರೂ ಇಲ್ಲೊ ಎಪ್ಪಾ ಸಾಕ್ಷಿ' ಅವರ ಬಹಳ ಮುಖ್ಯವಾದ ನಾಟಕ. ಹೆಸರೆ ಸೂಚಿಸುವಂತೆ ಈ ನಾಟಕವು ಸರಿಯಾದ ಸಾಕ್ಷಿ ಇಲ್ಲದ ಕಾರಣ ನ್ಯಾಯ ದೊರಕದೇ ಅನ್ಯಾಯಕ್ಕೆ ಒಳಗಾದವರ ಕಥೆಯಾಗಿದೆ. ಎಲ್ಲಿ ಹೋದರೂ ಬಡವರಿಗೆ ನ್ಯಾಯ ದೊರಕದ ಸ್ಥಿತಿಯನ್ನು, ಪ್ರಸ್ತುತ ಭಾರತದ ಅಸಮತಾ ಅಜೆಂಡಾವನ್ನು ನಿರೂಪಿಸಿಲಾಗಿದೆ. 'ಮತ್ತೊಬ್ಬ ಏಕಲವ್ಯ' ನಾಟಕದಲ್ಲಿ ಬುಡಕಟ್ಟು ಯುವಕ ಏಕಲವ್ಯನ ಜೀವನ ಕಥಾಹಂದರವನ್ನು ಹೊಂದಿರುವ ನಾಟಕ. 'ಹ್ವಾದವರು' ಇದೊಂದು ಚಿಕ್ಕ ನಾಟಕ. ಒಂದು ಕೇಂದ್ರಿಕೃತ ವ್ಯವಸ್ಥೆ ಹೇಗೆ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಅದರಿಂದ ಆಗುವ ಪರಿಣಾಮವನ್ನು ಚಿತ್ರಿಸಿರುವ ನಾಟಕವಾಗಿದೆ. ಮೂರು ನಾಟಕಗಳು ಶೋಷಣೆಯ ಸ್ತರಗಳ ವಿರುದ್ಧ ನಡೆಸುವ ಪ್ರತಿಭಟನೆಗಳಾಗಿವೆ. 'ಬರಗೂರ ರಾಮಚಂದ್ರಪ್ಪ ; ಸಾಂಸ್ಕೃತಿಕ ಸಂದರ್ಭ' ಇದು ಸತ್ಯಾನಂದ ಪಾತ್ರೋಟ ಅವರ ಪಿಹೆಚ್.ಡಿ. ಮಹಾಪ್ರಬಂಧ. ಈ ಪ್ರಬಂಧವು 'ಭೂಮಿತತ್ವದ ಸುತ್ತ' ಎಂಬುದಾಗಿ ಪ್ರಕಟಗೊಂಡಿದೆ. ಅವರ 'ಒಂದಿಷ್ಟು ಕ್ಷಣಗಳು' ಪ್ರಬಂಧ ಸಂಕಲನವು ಪಾತ್ರೋಟರ ಜೀವನದ ಅನುಭವಗಳು, ಮಾನವೀಯ ಕಳಕಳಿಯ ಲೇಖನಗಳಿಂದ ಕೂಡಿದೆ. ಸತ್ಯಾನಂದ ಪಾತ್ರೋಟರು ಎರಡು ಅಭಿನಂದನ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಅವುಗಳಲ್ಲಿ 'ಸಾರ್ಥಕ' ಎಸ್.ಆರ್. ಪಾಟೀಲ ಅವರ ಅಭಿನಂದನ ಗ್ರಂಥವಾದರೆ, 'ನಿಜದ ನೆಲೆ' ಡಾ. ಬಿ. ಕೆ. ಹಿರೇಮಠ ಅವರ ಅಭಿನಂದನ ಗ್ರಂಥವಾಗಿದೆ. ಅಲ್ಲದೇ 'ಎದೆಯ ಮಾತು' ಧ್ವನಿ ಸುರುಳಿಯಲ್ಲಿ ಅವರ ಆರು ಸಂಕಲನಗಳಲ್ಲಿ ಮೂಡಿಬಂದಿರುವ ಹತ್ತು ಕವನಗಳು ಸಂಗೀತ ಸಂಯೋಜನೆಗೊಂಡಿವೆ.
ಕವಿ ಪಾತ್ರೋಟರ 'ಗಿಡಮರ' ಕವಿತೆ ರಾಜ್ಯದ ಏಳನೆಯ ತರಗತಿ ಹಾಗೂ 'ಕಾಗೆ' ಕವಿತೆ ಮಹಾರಾಷ್ಟ್ರ ಸಕರ್ಾರದ ದ್ವಿತೀಯ ಪಿಯುಸಿಗೆ ಅಳವಡಿಸಿಕೊಳ್ಳುವ ಮೂಲಕ ಗೌರವ ನೀಡಿದೆ. ಕನರ್ಾಟಕ ವಿಶ್ವವಿದ್ಯಾಲಯ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಂಗಳೂರು, ತುಮಕೂರು ದಾವಣಗೆರೆ ಮಂಗಳೂರು ಮತ್ತು ಮೈಸೂರ ವಿಶ್ವವಿದ್ಯಾಲಯಗಳ ವಿವಿಧ ಪದವಿ ತರಗತಿಗಳಿಗೆ ಅವರ ವಿವಿಧ ಕವಿತೆಗಳನ್ನು ಪಠ್ಯಕ್ಕೆ ಅಳವಡಿಸಿಕೊಳ್ಳುವ ಮೂಲಕ ಗೌರವ ನೀಡಿವೆ. ಪಾತ್ರೋಟ ಅವರ ಸಾಹಿತ್ಯ ಕುರಿತು ಕಲಬುಗರ್ಿ ವಿಶ್ವವಿದ್ಯಾಲಯದಲ್ಲಿ ಗೌರಮ್ಮ ಭೋಗಶೆಟ್ಟಿ ಮತ್ತು ಹಂಪಿ ವಿಶ್ವವಿದ್ಯಾಲಯದಲ್ಲಿ ವಿ. ಆಯ್. ಬಸನಗೌಡರ ಅವರು ಪ್ರಬಂಧ ಸಲ್ಲಿಸಿ ಎಂ.ಫಿಲ್. ಪದವಿ ಪಡೆದಿದ್ದಾರೆ. ಅಲ್ಲದೇ ಸತ್ಯಾನಂದ ಪಾತ್ರೋಟರ ಸಮಗ್ರ ಸಾಹಿತ್ಯ ಒಂದು ಅಧ್ಯಯನ ಮಹಾಪ್ರಬಂಧಕ್ಕೆ ಪ್ರದೀಪಕುಮಾರ ಅವರಿಗೆ ಮೈಸೂರ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ. ಪದವಿ ಲಭಿಸಿದೆ. ಕವಿ ಪಾತ್ರೋಟರ ಕವಿತೆಗಳು ದೇಶದ ಹಲವು ಭಾಷೆಗಳಿಗೆ ಭಾಷಾಂತರವಾಗಿವೆ.
ಅವರು ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕರಾಗಿ, ಕನರ್ಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ, ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಹಾಗೂ ಬಸವೇಶ್ವರ ವಿದ್ಯಾವರ್ದಕ ಸಂಘ ಸಂಶೋಧನಾ ಕೇಂದ್ರದ ಸದಸ್ಯರಾಗಿ ಸೇವೆ ಸಲ್ಲಿಸಿರುವರು. ಅವರು ಬಾಗಲಕೋಟೆಯಲ್ಲಿ ಜರುಗಿದ ಅಖಿಲ ಭಾರತ 6ನೆಯ ದಲಿತ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷರಾಗಿ ಯಶಸ್ವಿಯಾಗಿ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಅವರು ಮೈಸೂರ ದಸರಾ ಉತ್ಸವ, ಹಂಪಿ, ನವರಸಪುರ, ಲಕ್ಕುಂಡಿ ಉತ್ಸವ, ವಿಶ್ವ ಕನ್ನಡ ಸಮ್ಮೇಳನ, ನುಡಿಸಿರಿ, ಆನೆಗುಂದಿ ಉತ್ಸವ ಮುಂತಾದೆಡೆ ತಮ್ಮ ಕವನ ವಾಚನ ಮೂಲಕ ಮೆಚ್ಚುಗೆ ಪಡೆದಿದ್ದಾರೆ. ಸಾಹಿತ್ಯ ಕೃಷಿಯಲ್ಲಿ ಗಣನೀಯ ಸಾಧನೆ ಮಾಡಿದ ಸತ್ಯಾನಂದ ಪಾತ್ರೋಟರು ಯಾವದೇ ಪ್ರಶಸ್ತಿ-ಪುರಸ್ಕಾರಗಳಿಗೆ ಲಾಬಿ ನಡೆಸಿದವರಲ್ಲ. ಅದರಿಂದ ದೂರವೇ ಉಳಿದವರು. ಅವರಿಗೆ 2012ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2015ರಲ್ಲಿ ಕನರ್ಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, 2020ರಲ್ಲಿ ಕಾಂತಾವರ ಕನ್ನಡ ಸಂಘದಿಂದ 'ಕವಿ ಮುದ್ದಣ ಕಾವ್ಯ' ಪ್ರಶಸ್ತಿಗಳು ಲಭಿಸಿವೆ.
ಕವಿ ಸತ್ಯಾನಂದ ಪಾತ್ರೋಟ ಅವರದು ಬಹುಮುಖ ವ್ಯಕ್ತಿತ್ವ. ಅವರ ಸಾಹಿತ್ಯವು ಕೂಡ ಬಹುಮುಖಿಯಾಗಿದೆ ಮತ್ತು ವೈವಿದ್ಯಮಯವಾಗಿದೆ. ಜಾಜಿಮಲ್ಲಿಗೆ ಕವಿ ಎಂದೇ ಗುರುತಿಸಿಕೊಂಡಿರುವ ಅವರು ಕವಿತೆಯಲ್ಲೇ ಬದುಕು ಕಟ್ಟಿಕೊಂಡವರು. ಅಧ್ಯಾಪನ ಮತ್ತು ಹೋರಾಟಗಳಲ್ಲಿ ಅವರ ಗುರುತುಗಳು ಅನನ್ಯವಾದವು. ಅವರು ಸಾಮಾನ್ಯರ ನಡುವೆ ಸಾಮಾನ್ಯರಾಗಿ, ಬಾಗಲಕೋಟೆಯ 'ಜಾಜಿಮಲ್ಲಿಗೆ' ಎಂಬ ಗೂಡಿನಲ್ಲೇ ಇಂದಿಗೂ ತಮ್ಮ ಕವಿತೆಯನ್ನು ಕಟ್ಟುತ್ತಿದ್ದಾರೆ.
ಸುರೇಶ ಗುದಗನವರ
ಮೊ.9449294694